12ನೇ ತರಗತಿ ಪರೀಕ್ಷೆ ಮುಂದೂಡುವ ಅರ್ಜಿಗೆ ಸಿಬಿಎಸ್​ಇ ವಿರೋಧ

CBSE exam case in SC
Published on

ನವದೆಹಲಿ: ಕೋವಿಡ್​ 19 ದೃಷ್ಟಿಯಲ್ಲಿ ಇರಿಸಿಕೊಂಡು ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳೊಂದಿಗೆ ಪರೀಕ್ಷೆ ನಡೆಸುವ ತಮ್ಮ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ದ ಸೆಂಟ್ರಲ್​ ಬೋರ್ಡ್ ಆಫ್​ ಸೆಕೆಂಡರಿ ಎಜುಕೇಶನ್ (ಸಿಬಿಎಸ್​ಇ) ಶುಕ್ರವಾರ ಸುಪ್ರೀಂ ಕೋರ್ಟ್​ಗೆ ತಿಳಿಸಿದೆ. ಅಲ್ಲದೆ, ಪರೀಕ್ಷೆ ಮುಂದೂಡುವಂತೆ ಕೋರಿ ಸಲ್ಲಿಕೆಯಾದ ಅರ್ಜಿಗಳ ಬಗ್ಗೆ ವಿರೋಧ ವ್ಯಕ್ತಪಡಿಸಿದೆ.

ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್, ದಿನೇಶ್ ಮಹೇಶ್ವರಿ, ಸಂಜೀವ್​ ಖನ್ನಾ ಅವರನ್ನು ಒಳಗೊಂಡ ನ್ಯಾಯಪೀಠ ಅನಿಕಾ ಸಂವೇದಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಸಿಬಿಎಸ್​ಇ ತನ್ನ ಪ್ರತಿಕ್ರಿಯೆಯನ್ನು ಸಲ್ಲಿಸಿದೆ. ಇದೇ ವೇಳೆ ನ್ಯಾಯಪೀಠವು, ಪರೀಕ್ಷೆ ಮುಂದೂಡುವುದರಿಂದ ನಿಜವಾಗಿಯೂ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆಯೇ ಎಂದು ಅರ್ಜಿದಾರರ ಪರ ವಕೀಲರನ್ನು ಪ್ರಶ್ನಿಸಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಯಿತು.

ಸಿಬಿಎಸ್​ಇ ಪರ ವಕೀಲರು ಪರೀಕ್ಷಾ ಸಿದ್ಧತೆಯ ವಿವರವನ್ನು ನೀಡಿದ್ದು, ಇದುವರೆಗೆ 575 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗುತ್ತಿತ್ತು. ಈಗ ಕೋವಿಡ್ ಇರುವ ಕಾರಣ 1,278 ಪರೀಕ್ಷಾ ಕೇಂದ್ರಗಳನ್ನು ಗುರುತಿಸಿದ್ದು, ಕೋವಿಡ್ ನಿಯಮ ಪಾಲಿಸುತ್ತ ಪರೀಕ್ಷೆ ನಡೆಸಲು ಸಾಧ್ಯವಿದೆ ಎಂದು ಪ್ರತಿಪಾದಿಸಿದರು. 40 ಜನ ಕುಳಿತುಕೊಳ್ಳುವ ತರಗತಿಯಲ್ಲಿ ಈ ಬಾರಿ 12 ವಿದ್ಯಾರ್ಥಿಗಳಷ್ಟೇ ಕುಳಿತುಕೊಳ್ಳಲಿದ್ದಾರೆ ಎಂಬ ವಿವರ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಚಿಕ್ಕದೊಂದು ಅಫಿಡವಿಟನ್ನು ಸಲ್ಲಿಸಿದರೆ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 10ಕ್ಕೆ ನಿಗದಿ ಮಾಡುವುದಾಗಿ ತಿಳಿಸಿತು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net