

ನವದೆಹಲಿ: ತರಗತಿ 10 ಮತ್ತು 12ರ ವಿದ್ಯಾರ್ಥಿಗಳಿಗೆ 2020ನೇ ಸಾಲಿನ ಸಿಬಿಎಸ್ಇ ಬೋರ್ಡ್ ಪರೀಕ್ಷೆ ಫೆಬ್ರವರಿ 15ರಿಂದ ಆರಂಭವಾಗಲಿದೆ. ಪರೀಕ್ಷೆ ಹತ್ತಿರ ಬರುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ, ಪಾಲಕರಿಗೂ ಇದು ಒತ್ತಡದ ಸಮಯವಾಗಿದೆ. ಈ ಸಮಯದಲ್ಲಿ ಕಾಲೇಜಿನ ಪ್ರಾಂಶುಪಾಲರೊಬ್ಬರು ಪಾಲಕರಿಗೆ ಬರೆದಿರುವ ಪತ್ರ ವೈರಲ್ ಆಗಿದೆ.
ಸೌದಿ ಅರೇಬಿಯಾದ ದಮ್ಮಮ್ನಲ್ಲಿರುವ ಇಂಟರ್ನ್ಯಾಷನಲ್ ಇಂಡಿಯನ್ ಸ್ಕೂಲ್ನ ಪ್ರಾಂಶುಪಾಲರು ಪರೀಕ್ಷೆ ಒತ್ತಡ ಹೋಗಲಾಡಿಸಲು ವಿದ್ಯಾರ್ಥಿ ಪಾಲಕರಿಗೆ ಪತ್ರ ಬರೆದಿರುವುದು ವೈರಲ್ ಆಗಿದ್ದು, ನೆಟ್ಟಿಗರ ಮೆಚ್ಚುಗೆ ಗಳಿಸಿದೆ.
ಫಾಜು ಫಾರೂಕ್ ಹೆಸರಿನ ಫೇಸ್ಬುಕ್ ಖಾತೆಯಲ್ಲಿ ಪ್ರಾಂಶುಪಾಲರ ಪತ್ರವನ್ನು ಶೇರ್ ಮಾಡಿಕೊಂಡು, ಪಾಲಕರೇ ಗಮನಿಸಿ! ನಿಮ್ಮ ಮಕ್ಕಳ ಪ್ರತಿಭೆಯನ್ನು ಇನ್ನಷ್ಟು ಬೆಳೆಸಲು ನೀವು ಶ್ರಮಿಸುತ್ತಿದ್ದೀರಾ? ಇಂಟರ್ನ್ಯಾಷನಲ್ ಇಂಡಿಯನ್ ಸ್ಕೂಲ್ನ ಪ್ರಾಂಶುಪಾಲರ ಸಂದೇಶಕ್ಕೆ ನನ್ನ ಅನಂತ ಧನ್ಯವಾದಗಳು ಎಂದು ಬರೆದುಕೊಂಡಿದ್ದಾನೆ.
ಶುಭಾಶಯದೊಂದಿಗೆ ಪತ್ರವನ್ನು ಆರಂಭಿಸಿರುವ ಪ್ರಾಂಶುಪಾಲರು, ಬಳಿಕ ಪರೀಕ್ಷೆ ಕುರಿತು ಮಕ್ಕಳ ಮತ್ತು ಪಾಲಕರ ಆತಂಕ ಕುರಿತು ಮಾತನಾಡಿದ್ದಾರೆ. ಇನ್ನೇನು ನಿಮ್ಮ ಮಕ್ಕಳ ಬೋರ್ಡ್ ಪರೀಕ್ಷೆ ಶುರುವಾಗಲಿದೆ. ನಿಮ್ಮ ಮಕ್ಕಳ ಉತ್ತಮಕ್ಕಾಗಿ ನೀವು ಒತ್ತಡದಲ್ಲಿರುವುದು ನನಗೆ ತಿಳಿದಿದೆ ಎಂದು ಮೊದಲಿಗೆ ಹೇಳಿದ್ದಾರೆ.
ಬಳಿಕ ಉತ್ತಮ ಅಂಕ ಗಳಿಸುವ ಮಗು ಶ್ರೇಷ್ಠ ಹೇಗೆ? ಮತ್ತು ಕಡಿಮೆ ಅಂಕಗಳಿಸುವ ಮಗುವಿನ ಕಾಳಜಿ ಕುರಿತು ಮಾತನಾಡಿ, ಮಕ್ಕಳು ಹೆಚ್ಚು ಅಂಕ ಗಳಿಸದಿದ್ದಲ್ಲಿ ಅದನ್ನು ಆತ್ಮ ಗೌರವ ಮತ್ತು ಘನತೆ ತಂದ ಧಕ್ಕೆ ಎಂಬುದನ್ನು ದೂರವಿಡಿ. ಮಕ್ಕಳನ್ನು ಎಂದಿಗೂ ಪ್ರೀತಿಸುತ್ತೇನೆಂಬ ಭರವಸೆ ನೀಡಿ, ಆದರೆ ಜಡ್ಜ್ ಮಾಡಬೇಡಿ. ಪಾಲಕರು ಈ ರೀತಿ ಮಾಡಿದರೆ ಒಂದು ದಿನ ವಿಶ್ವವನ್ನೇ ಗೆಲ್ಲುವಂತಹ ತಮ್ಮ ಮಕ್ಕಳನ್ನು ನೋಡಬಹುದು ಎಂದು ಪತ್ರವನ್ನು ಮುಗಿಸಿದ್ದಾರೆ.
ಈ ಪತ್ರ ಶಾಲೆಯ ಅಧಿಕೃತ ವೆಬ್ಸೈಟ್ನಲ್ಲಿ ಅಪ್ಲೋಡ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಗಿರಕಿ ಹೊಡೆಯುತ್ತಾ ಚಪ್ಪಾಳೆಗಳನ್ನು ಗಿಟ್ಟಿಸಿಕೊಳ್ಳುತ್ತಿದೆ. (ಏಜೆನ್ಸೀಸ್)