

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಕಾಲಬುಡಕ್ಕೆ ಸುತ್ತಿಕೊಂಡಿರುವ ಮುಡಾ ನಿವೇಶನ ಪ್ರಕರಣದ ಜತೆಯಲ್ಲೇ ವಾಲ್ಮೀಕಿ ನಿಗಮದ ಅವ್ಯವಹಾರ ಪ್ರಕರಣವನ್ನು ಸಮರ್ಥವಾಗಿ ಎದುರಿಸುವ ದೂರಾಲೋಚನೆ ಕ್ರಮವಾಗಿ ರಾಜ್ಯ ಸರ್ಕಾರ ಮಹತ್ವದ ದಾಳ ಉರುಳಿಸಿದೆ. ಸಿಬಿಐ ಹಾಗೂ ರಾಜ್ಯಪಾಲರ ನೇರ ರಂಗಪ್ರವೇಶಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಎರಡು ಪ್ರಮುಖ ನಿರ್ಧಾರ ಕೈಗೊಂಡಿದೆ.
ಸರ್ಕಾರದ ಈ ನಿರ್ಧಾರದ ಅನ್ವಯ ಇನ್ಮುಂದೆ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ರಾಜ್ಯದಲ್ಲಿ ಹೊಸ ಪ್ರಕರಣಗಳಲ್ಲಿ ತನಿಖೆ ಆರಂಭಿಸಬೇಕಿದ್ದರೆ ರಾಜ್ಯ ಸರ್ಕಾರದ ಅನುಮತಿ ಕಡ್ಡಾಯವಾಗಲಿದೆ. ಕೇಂದ್ರ ಸರ್ಕಾರ ಬಿಜೆಪಿಯೇತರ ಆಡಳಿತದ ರಾಜ್ಯಗಳಲ್ಲಿ ಸಿಬಿಐ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂಬ ಆರೋಪವನ್ನು ಮುಂದಿಟ್ಟು ಸರ್ಕಾರ ಈ ತೀರ್ಮಾನ ಕೈಗೊಂಡಿದೆ. ಮತ್ತೊಂದೆಡೆ ಸರ್ಕಾರವನ್ನು ಮತ್ತೆ ಮತ್ತೆ ಮುಜುಗರಕ್ಕೆ ಸಿಲುಕಿಸುತ್ತಿರುವ ರಾಜ್ಯಪಾಲರು ಇನ್ಮುಂದೆ ಸರ್ಕಾರದಿಂದ ಬಯಸುವ ಮಾಹಿತಿಯನ್ನು ಕೊಡಬೇಕೇ ಬೇಡವೇ ಎಂಬುದನ್ನು ಸಂಪುಟ ಸಭೆಯಲ್ಲಿ ನಿರ್ಧರಿಸುವ ತೀರ್ವನಕ್ಕೆ ಬರಲಾಗಿದೆ.
ಹಸ್ತಕ್ಷೇಪದ ಆತಂಕ: ರಾಜ್ಯದಲ್ಲಿ ಅಪರಾಧ ಪ್ರಕರಣಗಳ ತನಿಖೆ ನಡೆಸಲು ಸಿಬಿಐಗೆ ಮುಕ್ತ ಅನುಮತಿ ನೀಡುವ ಅಧಿಸೂಚನೆಯನ್ನು ವಾಪಸ್ ಪಡೆಯಲಾಗಿದೆ. ಸಿಬಿಐ ಅಥವಾ ಕೇಂದ್ರ ಸರ್ಕಾರ ಕಾನೂನಾತ್ಮಕವಾಗಿ ನಡೆದುಕೊಳ್ಳುತ್ತಿಲ್ಲ, ಇದೇ ಕಾರಣಕ್ಕೆ ಪ್ರಕರಣ ಆಧರಿಸಿ ಪರಿಶೀಲಿಸಿದ ಬಳಿಕ ರಾಜ್ಯ ಸರ್ಕಾರ ಅನುಮತಿ ಕೊಡಬಹುದೆಂಬ ಷರಾದೊಂದಿಗೆ ಸಾರಾಸಗಟು ಒಪ್ಪಿಗೆ ನೀಡುವ ನಿರ್ಣಯ ಹಿಂಪಡೆಯಲಾಗಿದೆ.
ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟದ ತೀರ್ವನದ ಕುರಿತು ಕಾನೂನು ಸಚಿವ ಎಚ್.ಕೆ. ಪಾಟೀಲ್ ಮಾಹಿತಿ ನೀಡಿದರು. ನಾವು ಕೈಗೊಂಡ ನಿಲುವು ಸ್ಪಷ್ಟವಾಗಿದೆ. ಈ ತೀರ್ವನಕ್ಕೂ ಮುಡಾ ಅಥವಾ ವಾಲ್ಮೀಕಿ ಪ್ರಕರಣಕ್ಕೆ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು. ನಾವು ಸಿಬಿಐಗೆ ವಹಿಸಿದ ಕೆಲವು ಪ್ರಕರಣಗಳಲ್ಲಿ ಚಾರ್ಜ್ಶೀಟ್ ಕೂಡ ಮಾಡಿಲ್ಲ. ಹಾಗೆಯೇ, ಸಿಬಿಐ ಪೂರ್ವಾಗ್ರಹದಿಂದ ಕೆಲಸ ಮಾಡಿದ್ದನ್ನು ನೋಡಿದ್ದೇವೆ.
ಚುನಾವಣೆ ಸಂದರ್ಭದಲ್ಲಿ ಹೇಗೆ ನಡೆದುಕೊಂಡಿ ತೆಂಬುದು ಗೊತ್ತಿದೆ. ನ್ಯಾಯಾಲಯವೇ ಸಿಬಿಐ ತನಿಖೆಗೆ ಆದೇಶ ನೀಡಿದರೆ, ಆಗ ಸರ್ಕಾರದ ಅನುಮತಿ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.
ಹಿಂದೆ ಜೆ.ಎಚ್. ಪಟೇಲ್ ಕಾಲದಲ್ಲಿ ಸಿಬಿಐಗಿದ್ದ ಮುಕ್ತ ತನಿಖೆ ಅವಕಾಶವನ್ನು ಹಿಂಪಡೆಯಲಾಗಿತ್ತು. ರಾಜ್ಯದಲ್ಲಿರುವ ಕೇಂದ್ರ ಸರ್ಕಾರ ಅಧೀನದ ಕಚೇರಿ ಅಧಿಕಾರಿ, ನೌಕರರ ವಿರುದ್ಧ ಸಿಬಿಐ ತನಿಖೆ ಕೈಗೊಳ್ಳಲು 2005ರಲ್ಲಿ ರಾಜ್ಯ ಸರ್ಕಾರದಿಂದ ಪ್ರತ್ಯೇಕ ಆದೇಶ ಹೊರಡಿಸಲಾಗಿದೆ. ಈ ಅವಕಾಶ ಬಳಸಿಕೊಂಡು ಬ್ಯಾಂಕ್ ವಹಿವಾಟು ನೆಪದಲ್ಲಿ ವಾಲ್ಮೀಕಿ ಪ್ರಕರಣದಲ್ಲಿ ಸಚಿವರಾಗಿದ್ದ ನಾಗೇಂದ್ರರನ್ನು ಸಿಬಿಐ ವಶಕ್ಕೆ ಪಡೆದುಕೊಂಡಿತು. ಇದೇ ಮಾದರಿಯಲ್ಲಿ ‘ಮುಡಾ- ವರುಣಾ’ ಪ್ರಕರಣ ಅಥವಾ ವಾಲ್ಮೀಕಿ ಪ್ರಕರಣದಲ್ಲಿ ಸಿಬಿಐ ದೊಡ್ಡ ತಲೆಗಳಿಗೆ ಬಲೆ ಹಾಕಬಹುದೆಂಬ ಮುನ್ನೆಚ್ಚರಿಕೆಯೇ ಸರ್ಕಾರದ ಈ ನಿರ್ಧಾರಕ್ಕೆ ಕಾರಣ ಎನ್ನಲಾಗುತ್ತಿದೆ.
ಸಿಬಿಐಗೆ ಸಹಜವಾದ ಪೂರ್ವಾಗ್ರಹ ಇದೆ ಎಂಬುದು ಇತ್ತೀಚಿನ ದಿನಗಳಲ್ಲಿ ದೃಢಪಡುತ್ತಿದೆ. ಹೀಗಾಗಿ ತನಿಖೆ ನಡೆಸಲು ಸಿಬಿಐಗೆ ಯಾವುದೇ ಮುಕ್ತ ಅವಕಾಶವಿರಬಾರದೆಂಬುದು ರಾಜ್ಯ ಸರ್ಕಾರದ ತೀರ್ವನವಾಗಿದೆ. | ಎಚ್.ಕೆ.ಪಾಟೀಲ್ ಕಾನೂನು ಸಚಿವ
ಕಳ್ಳನ ಮನಸ್ಸು ಹುಳ್ಳಗೆ ಎಂಬಂತೆ ಸಿಬಿಐ ಬಗ್ಗೆ ಭಯವೇಕೆ? ತಮ್ಮದೇನೂ ತಪ್ಪಿಲ್ಲದಿದ್ದರೆ ಸಿಬಿಐ ತನಿಖೆ ಬಗ್ಗೆ ಭಯವೇಕೆ ಸಿದ್ದರಾಮಯ್ಯನವರೇ? ಈ ರೀತಿ ಅಡ್ಡದಾರಿ ಹುಡುಕಿ, ಅನಿವಾರ್ಯವಾದದ್ದನ್ನು ಮುಂದೂಡಿ, ರಾಜ್ಯದ ಜನರ ಮುಂದೆ ಇನ್ನಷ್ಟು ಸಣ್ಣವರಾಗುವ ಬದಲು ಆದಷ್ಟು ಬೇಗ ರಾಜೀನಾಮೆ ಕೊಟ್ಟು ಗೌರವ ಉಳಿಸಿಕೊಳ್ಳಿ.
| ಆರ್.ಅಶೋಕ್ , ವಿಧಾನಸಭೆ ವಿರೋಧ ಪಕ್ಷದ ನಾಯಕ
ರಾಜ್ಯಪಾಲರ ಕಚೇರಿಯಿಂದ ಮುಖ್ಯ ಕಾರ್ಯದರ್ಶಿಗೆ ಅಥವಾ ಸರ್ಕಾರದ ಯಾವುದೇ ಅಧಿಕಾರಿಗೆ ಸ್ವೀಕೃತವಾಗುವ ಪತ್ರಗಳ ವಿಲೇವಾರಿ ಕೈಗೊಳ್ಳುವ ಮುನ್ನ ಸಚಿವ ಸಂಪುಟದ ಗಮನಕ್ಕೆ ತರಬೇಕೆಂದು ಮತ್ತು ನಂತರವೇ ಮುಖ್ಯ ಕಾರ್ಯದರ್ಶಿ ಸಂಪುಟದ ನಿರ್ಣಯದಂತೆ ರಾಜಭವನಕ್ಕೆ ಮಾಹಿತಿ ಒದಗಿಸಬೇಕೆಂದು ಸರ್ಕಾರ ತೀರ್ಮಾನ ಮಾಡಿದೆ. ಇತ್ತೀಚೆಗೆ ರಾಜ್ಯಪಾಲರು ಸರಣಿ ಪತ್ರ ಬರೆದು ಸರ್ಕಾರದಿಂದ ಮಾಹಿತಿ ಬಯಸಿ ಇಕ್ಕಟ್ಟಿಗೆ ಸಿಲುಕಿಸಿದ್ದರು. ಹಾಗೆಯೇ, ಲೋಕಾಯುಕ್ತ ಅಭಿಯೋಜನೆ ಶಿಫಾರಸು ಸಂಬಂಧ ರಾಜ್ಯಪಾಲರು ಮುಖ್ಯಕಾರ್ಯದರ್ಶಿಗೆ ಪತ್ರ ಬರೆದ ಸಂಗತಿ, ಮಾಹಿತಿ ಸೋರಿಕೆ ವಿಚಾರ ಸಂಪುಟದಲ್ಲಿ ಗಂಭೀರ ಚರ್ಚೆಯಾಗಿದೆ. ಜತೆಗೆ ಅದು ಸರ್ಕಾರದಿಂದ ಸೋರಿಕೆಯಾಗಿದ್ದಲ್ಲ ರಾಜಭವನದಿಂದಲೇ ಸೋರಿಕೆಯಾಗಿದ್ದೆಂದು ಸ್ಪಷ್ಟ ಅಭಿ ಪ್ರಾಯಕ್ಕೆ ಬಂದಿದೆ.
ಕಾರಣವೇನು?: ಮಾಹಿತಿ ಹಕ್ಕು ಕಾಯ್ದೆ ಇರುವಾಗ ರಾಜ್ಯಪಾಲರು ಮಾಹಿತಿ ಅಥವಾ ಸ್ಪಷ್ಟನೆ ಬಯಸಿದಾಗ ಅದನ್ನು ಕೊಡುವುದಕ್ಕೆ ಕಡಿವಾಣ ಹಾಕುವುದು ಎಷ್ಟು ಸಮಂಜಸ ಎಂಬ ಪ್ರಶ್ನೆ ಬರುತ್ತದೆ. ಆದರೆ, ಸರ್ಕಾರದ ಕೆಲ ತೀರ್ವನ, ನಿರ್ಣಯ ಅಥವಾ ದೂರುಗಳ ಕುರಿತು ರಾಜ್ಯಪಾಲರು ಸ್ಪಷ್ಟನೆ ಬಯಸಿದಾಗ ಮುಚ್ಚಿಡಲು ಬರುವುದಿಲ್ಲ ಅಥವಾ ಸತಾಯಿಸಲು ಬರುವುದಿಲ್ಲ. ಆದ್ಯತೆ ಕೊಡಬೇಕಾಗುತ್ತದೆ. ಈ ರೀತಿ ಮಾಡುವುದರಿಂದ ಸರ್ಕಾರದ ಮೇಲೆಯೇ ಪರೋಕ್ಷ ಒತ್ತಡ ಬೀಳಲಿದೆ.
ಮಾಹಿತಿ ಸೋರಿಕೆ ತನಿಖೆ: ಮಾಹಿತಿ ಸೋರಿಕೆ ವಿಚಾರವಾಗಿ ವಿವರಣೆ ನೀಡಿದ ಕಾನೂನು ಸಚಿವ ಎಚ್.ಕೆ. ಪಾಟೀಲ್, 2024ರ ಆ.17ರಂದು ರಾಜ್ಯಪಾಲರ ಪತ್ರದಲ್ಲಿ, ರಾಜ್ಯಪಾಲರ ಕಚೇರಿಯಲ್ಲಿ ಬಾಕಿ ಇರುವ, ಲೋಕಾಯುಕ್ತದಿಂದ ಸ್ವೀಕೃತವಾಗಿರುವ ಅಭಿಯೋಜನಾ ಮಂಜೂರಾತಿ ಪ್ರಕರಣಗಳ ಕುರಿತ ಮಾಹಿತಿ ಹೇಗೆ ಸೋರಿಕೆಯಾಯಿತು ಎಂಬ ಬಗ್ಗೆ ತನಿಖೆ ನಡೆಸಬೇಕೆಂದು ರಾಜ್ಯಪಾಲರು ಪೊಲೀಸ್ ಮಹಾನಿರ್ದೇಶಕರಿಗೆ ಸೂಚಿಸಿದ್ದರು. ಪೊಲೀಸ್ ಮಹಾನಿರ್ದೇಶಕರು 2024ರ ಆ.20ರಂದು ಲೋಕಾಯುಕ್ತದ ವಿಶೇಷ ತನಿಖಾ ದಳದ ಪೊಲೀಸ್ ಇನ್ಸ್ ಪೆಕ್ಟರ್ ಅವರಿಂದ ಈ ಕುರಿತು ವಿವರ ತಿಳಿಯಬಯಸಿದ್ದರು. ಈ ಪತ್ರಕ್ಕೆ ಉತ್ತರವಾಗಿ 2024ರ ಸೆ.4ರಂದು ವಿಶೇಷ ತನಿಖಾ ದಳದ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ವರದಿ ಕಳಿಸಿ, ಈ ಸೋರಿಕೆಯಾದ ಕಾಗದಪತ್ರ 2023ರ ನ.24ರಿಂದ 2024ರ ಆ.8ರವರೆಗೆ ರಾಜಭವನ ಸಚಿವಾಲಯದಲ್ಲಿಯೇ ಇದ್ದವು ಎಂದು ಉತ್ತರ ಬರೆದಿದ್ದಾರೆ. ರಾಜಭವನ ಸಚಿವಾಲಯಕ್ಕೆ ಸಂಬಂಧಪಟ್ಟಂತೆ ಯಾವ ಹಂತದಲ್ಲಿ ಮಾಹಿತಿ ಸೋರಿಕೆಯಾಗಿದೆ, ದಾಖಲೆಗಳು ಹೇಗೆ ಬಹಿರಂಗಗೊಂಡಿವೆ ಎಂಬ ಬಗ್ಗೆ ತನಿಖೆ ನಡೆಸಲು ತಮಗೆ ಅನುಮತಿ ನೀಡಬೇಕೆಂದು ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಕೋರಿದ್ದರು. ಈ ವಿಷಯ ಮಾಧ್ಯಮದಲ್ಲಿ ಹೇಗೆ ಪ್ರಸಾರವಾಯಿತು ಎಂಬ ಬಗ್ಗೆ ತನಿಖೆ ನಡೆಸಲು ಅನುಮತಿ ಕೋರಿರುವುದಾಗಿ ಸಚಿವರು ವಿವರ ನೀಡಿದರು.
ಖಾರವಾದ ಪ್ರತಿಕ್ರಿಯೆ: ರಾಜ್ಯಪಾಲರು ಮೇಲಿಂದ ಮೇಲೆ ರಾಜ್ಯ ಸರ್ಕಾರ ಮಾಹಿತಿ ಸೋರಿಕೆ ಮಾಡಿದೆ ಎಂದಿದ್ದಾರೆ. ನಾವು ಸೋರಿಕೆ ಮಾಡಿದ್ದೇವಾ? ಅಥವಾ ರಾಜಭವನವೇ? ಎಂದು ಕಾನೂನು ಸಚಿವರು ಪ್ರಶ್ನಿಸಿದರು. ಜತೆಗೆ ಮುಡಾ ಪ್ರಕರಣದಲ್ಲಿ ಸಚಿವ ಸಂಪುಟದ ನಿರ್ಣಯ ತಿಳಿಸಿಲ್ಲ ಎಂದು ಪತ್ರ ಬರೆದಿದ್ದಾರೆ, ಅವರಿಗೆ ಯಾವ ಭಾಷೆಯಲ್ಲಿ ಉತ್ತರಿಸಬೇಕಿತ್ತೋ ಉತ್ತರಿಸಿದ್ದೇವೆ ಎಂದರು.