

ಮುಂಬೈ : ಭಾರೀ ಭ್ರಷ್ಟಾಚಾರದ ಸೂತ್ರಧಾರಿಯಾಗಿದ್ದ ಆರೋಪ ಎದುರಿಸುತ್ತಿರುವ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್ಮುಖ್ ವಿರುದ್ಧ ಸಿಬಿಐ ಎಫ್.ಐ.ಆರ್. ದಾಖಲಿಸಿದೆ. ಇಂದು ದೇಶ್ಮುಖ್ ಮತ್ತು ಅವರ ಆಪ್ತರಿಗೆ ಸಂಬಂಧಿಸಿದ ರಾಜ್ಯದ ಹಲವು ಸ್ಥಳಗಳಲ್ಲಿ ಸಿಬಿಐ ದಾಳಿ ನಡೆಸಿ ಪತ್ತೆ ಕಾರ್ಯ ಕೈಗೊಂಡಿತು.
ಈಗ್ಗೆ ಒಂದು ತಿಂಗಳ ಹಿಂದೆ ಮುಂಬೈ ಮಾಜಿ ಪೊಲೀಸ್ ಕಮಿಷನರ್ ಪರಮ್ ಬೀರ್ ಸಿಂಗ್ ಅವರು ದೇಶ್ಮುಖ್ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿ ಬಹಿರಂಗ ಪತ್ರ ಬರೆದಿದ್ದರು. ದೇಶ್ಮುಖ್ ಅವರು ಸುಮಾರು 100 ಕೋಟಿ ರೂಪಾಯಿ ಲಂಚ ಸಂಗ್ರಹಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಿದ್ದರು. ಈ ಬಗೆಗಿನ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿ, ಬಾಂಬೆ ಹೈಕೋರ್ಟ್ ಸಿಬಿಐಗೆ ಪ್ರಾಥಮಿಕ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಆದೇಶಿಸಿತ್ತು.
ಇದನ್ನೂ ಓದಿ: ಆಕ್ಸಿಜನ್ ಪೂರೈಕೆ ಮೇಲ್ವಿಚಾರಣೆಗೆ ಲೈವ್ ಪೋರ್ಟಲ್ ಆರಂಭ
ತನಿಖೆ ಕೈಗೆತ್ತಿಕೊಂಡ ಸಿಬಿಐ ದೇಶ್ಮುಖ್ ಮತ್ತು ಅವರ ಪಿಎ ಕುಂದನ್ ಶಿಂದೆ, ಪಿಎಸ್ ಸಂಜೀವ್ ಪಲಂದೆ ಅವರನ್ನು ವಿಚಾರಣೆ ನಡೆಸಿತ್ತು. ಈ ಬಗ್ಗೆ ಆರೋಪ ಮಾಡಿದ ಪರಮ್ ಬೀರ್ ಸಿಂಗ್, ದೂರು ಸಲ್ಲಿಸಿದ ವಕೀಲೆ ಜಯಶ್ರೀ ಪಾಟೀಲ್, ಜೊತೆಗೆ ಬಂಧನದಲ್ಲಿರುವ ಪೊಲೀಸ್ ಅಧಿಕಾರಿ ಸಚಿನ್ ವಾಜ್ ಮತ್ತಿತರ ಪೊಲೀಸ್ ಅಧಿಕಾರಿಗಳ ಹೇಳಿಕೆ ದಾಖಲಿಸಿತು. ಆ ನಂತರ ದೇಶ್ಮುಖ್ ವಿರುದ್ಧ ಸಾರ್ವಜನಿಕ ಸೇವಕರು ಅಕ್ರಮ ಹಣವನ್ನು ಪಡೆಯುವ ಅಪರಾಧವನ್ನು ಸಂಬಂಧಿಸಿದ ಪ್ರಿವೆಂಷನ್ ಆಫ್ ಕರಪ್ಷನ್ ಆ್ಯಕ್ಟ್ನ ಸೆಕ್ಷನ್ 7 ರ ಅಡಿ ಮತ್ತು ಕ್ರಿಮಿನಲ್ ಪಿತೂರಿಗೆ ಸಂಬಂಧಿಸಿದ ಐಪಿಸಿ ಸೆಕ್ಷನ್ 120 (ಬಿ) ಅಡಿಯಲ್ಲಿ ಸಿಬಿಐ ಕೇಸು ದಾಖಲಿಸಿದೆ.
"ದೇಶ್ಮುಖ್ ವಿರುದ್ಧ ಪ್ರಕರಣ ಮುಂದುವರಿಸಲು ಸಾಕಷ್ಟು ಪುರಾವೆಗಳಿವೆ ಎಂದು ಸಿಬಿಐಗೆ ತೃಪ್ತಿಯಾದ ಹಿನ್ನೆಲೆಯಲ್ಲಿ ಏಪ್ರಿಲ್ 21 ರಂದು ಎಫ್ಐಆರ್ ದಾಖಲಿಸಲಾಯಿತು. ತನಿಖಾಧಿಕಾರಿಗಳ ಕರೊನಾ ಆರ್ಟಿ-ಪಿಸಿಆರ್ ಪರೀಕ್ಷೆಯನ್ನು ಮಾಡಬೇಕಾಗಿದ್ದರಿಂದ ಸರ್ಚ್ ಆಪರೇಷನ್ಅನ್ನು ಆರಂಭಿಸಲು ಇದುವರೆಗೆ ಸಾಧ್ಯವಾಗಿರಲಿಲ್ಲ" ಎಂದು ಸಿಬಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)