18 ಕೋಟಿ ರೂ ಗುಳುಂ: ಎಚ್‌ಎಎಲ್‌ ಅಧಿಕಾರಿ ವಿರುದ್ಧ ಸಿಬಿಐ ಚಾರ್ಜ್‌ಷೀಟ್‌

HAL-CBI
Published on

ನವದೆಹಲಿ: ಸುಮಾರು 18.3 ಕೋಟಿ ರೂಪಾಯಿ ಹಣದ ಅವ್ಯವಹಾರ ನಡೆಸಿರುವ ಆರೋಪದ ಮೇಲೆ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ನ ಹಿರಿಯ ವ್ಯವಸ್ಥಾಪಕರ ವಿರುದ್ಧ ಸಿಬಿಐ ಆರು ಪ್ರತ್ಯೇಕ ಚಾರ್ಜ್‌ಷೀಟ್‌ ಸಲ್ಲಿಸಿದೆ.

ಆರು ವಿವಿಧ ಅವ್ಯವಹಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಡಿಶಾದ ಕೊರಪುಟ್‌ನಲ್ಲಿರುವ ಎಚ್‌ಎಎಲ್‌ನ ಸುನಾಬೆಡಾ ಘಟಕದ ಎಂಜಿನಿಯರಿಂಗ್ ವಿಭಾಗದ ಹಿರಿಯ ವ್ಯವಸ್ಥಾಪಕ (ಹಣಕಾಸು) ಬಬ್ಬನ್ ಮೈತ್ರಾ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ.

ಒಡಿಶಾದ ಕೇಂದ್ರೀಯ ತನಿಖಾ ದಳದಿಂದ ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ. ಗುತ್ತಿಗೆ ವ್ಯವಹಾರಕ್ಕೆ ಸಂಬಂಧಿಸಿದಂತೆ ಗುತ್ತಿಗೆದಾರರ ನಕಲಿ ಐಡಿ ಹಾಗೂ ಪಾಸ್‌ವರ್ಡ್‌ಗಳನ್ನು ಸೃಷ್ಟಿಸಿ ಹಣದ ದುರುಪಯೋಗ ಮಾಡಿಕೊಂಡಿರುವ ಆರೋಪ ಇವರ ಮೇಲಿದೆ. 2015ರ ಜನವರಿಯಿಂದ ಅದೇ ವರ್ಷದ ಡಿಸೆಂಬರ್‌ ತಿಂಗಳವರೆಗೆ ನಡೆದಿರುವ ಅವ್ಯವಹಾರದ ವಿವಾದ ಇದಾಗಿದೆ.
ಈ ಹಗರಣದಲ್ಲಿ ಖಾಸಗಿ ಗುತ್ತಿಗೆದಾರರ ಜತೆ ಶಾಮೀಲಾಗಿರುವ ಅಧಿಕಾರಿ ಏಳು ಖಾಸಗಿ ಗುತ್ತಿಗೆದಾರರಿಗೆ 18 ಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯದ ನಕಲಿ ಬಿಕ್‌ ತಯಾರಿಸಿ ಪಾವತಿಗಳನ್ನು ನೀಡಿರುವುದು ತನಿಖೆಯಿಂದ ತಿಳಿದುಬಂದಿದೆ.

ಹಣಕಾಸಿಗೆ ಸಂಬಂಧಿಸಿದಂತೆ ವಾರ್ಷಿಕ ಲೆಕ್ಕಾಚಾರ ಹಾಕುತ್ತಿರುವ ವೇಳೆ ಅವ್ಯವಹಾರ ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ಎಚ್‌ಎಎಲ್‌ ತನಿಖೆಗೆ ಸಿಬಿಐಯನ್ನು ಕೋರಿತ್ತು. ಈ ಸಂಬಂಧ ಪತ್ರ ಬರೆಯಲಾಗಿತ್ತು. ಈ ಮನವಿಯ ಹಿನ್ನೆಲೆಯಲ್ಲಿ ತನಿಖೆ ನಡೆಸಿರುವ ಸಿಬಿಐ ಮೇಲ್ನೋಟಕ್ಕೆ ಮೈತ್ರಾ ಅವರು ಈ ಪ್ರಕರಣದ ಪ್ರಮುಖ ಆರೋಪಿ ಎಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net