

ಬೆಂಗಳೂರು: ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದೆ, ಜಲಾಶಯಗಳು ತುಂಬುತ್ತಿವೆ. ವರುಣನ ಕೃಪೆಯಿಂದ ತಮಿಳುನಾಡಿಗೆ ಕಾವೇರಿ ನೀರು ಹಂಚಿಕೆ ಆದೇಶ ಪಾಲನೆ, ರಾಜ್ಯದ ರೈತರ ಹಿತರಕ್ಷಣೆ ಸಾಧ್ಯವಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಆಶಾಭಾವನೆ ವ್ಯಕ್ತಪಡಿಸಿದರು.
ಕೆಪಿಸಿಸಿ ಕಚೇರಿ ಬಳಿ ಸುದ್ದಿಗಾರರಿಗೆ ಶನಿವಾರ ಪ್ರತಿಕ್ರಿಯೆ ನೀಡಿದ ಅವರು, ಕೆಆರ್‌ಎಸ್ ಅಣೆಕಟ್ಟೆ 2-3 ದಿನಗಳಲ್ಲಿ ಭರ್ತಿಯಾಗಲಿದೆ. ತಮಿಳುನಾಡು ಪಾಲಿನ ನೀರು ಹರಿಸುವ ಮುನ್ಸೂಚನೆ ಸಿಕ್ಕಿದೆ.
ಪ್ರವಾಹಪೀಡಿತ ಪ್ರದೇಶದಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ. ರೈತರ ಹಿತದೃಷ್ಟಿಯಿಂದ ಕೆರೆಗಳ ಭರ್ತಿಗೂ ಕ್ರಮವಹಿಸಲಿದ್ದು, ನೀರಾವರಿ ಕಾಲುವೆಗಳಿಗೂ ನೀರು ಹರಿಸಲಾಗುತ್ತದೆ.
ನೀರು ಎಷ್ಟು ಪ್ರಮಾಣದಲ್ಲಿ ಬರಲಿದೆ ಎನ್ನುವುದು ಇನ್ನೂ ಖಚಿತವಾಗಿಲ್ಲ. ಕೃಷಿ ಇಲಾಖೆ ಅಧಿಕಾರಿಗಳ ಜತೆಗೆ ಚರ್ಚಿಸಿ ನಿರ್ಧರಿಸಲಾಗುವುದು. ಭತ್ತ ನಾಟಿಗೆ ಸಜ್ಜಾಗಿರುವ ರೈತರು ಸ್ವಲ್ಪ ತಾಳ್ಮೆವಹಿಸಬೇಕು ಎಂದು ಡಿ.ಕೆ.ಶಿವಕುಮಾರ್ ಕೋರಿದರು.
ಮಳೆ, ಪ್ರವಾಹ, ಭೂಕುಸಿತದ ಹಾನಿ ಪ್ರದೇಶಕ್ಕೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಭೇಟಿ ನೀಡಿ ಪರಿಶೀಲಿಸುತ್ತಿರುವುದಕ್ಕೆ ಯಾವುದೇ ಆಕ್ಷೇಪವಿಲ್ಲ. ಅನಾಹುತ ಸಂಭವಿಸಿದ ಒಂದೇ ತಾಸಿನಲ್ಲಿ ನಮ್ಮ ಸಚಿವರನ್ನು ಸ್ಥಳಕ್ಕೆ ಕಳುಹಿಸಿದ್ದೇವೆ.
ಸಚಿವರಾದ ಮಂಕಾಳ ವೈದ್ಯ, ಕೃಷ್ಣಬೈರೇಗೌಡ ಸ್ಥಳಕ್ಕೆ ಹೋಗಿ ಪರಿಶೀಲಿಸಿ ಅಗತ್ಯ ಕ್ರಮವಹಿಸಿದ್ದಾರೆ. ಪರಿಸ್ಥಿತಿಯನ್ನು ರಾಜ್ಯ ಸರ್ಕಾರ ಸಮರ್ಥವಾಗಿ ನಿಭಾಯಿಸುತ್ತಿದೆ ಎಂಬ ಸಮಜಾಯಿಷಿ ನೀಡಿದರು.
ಕಾಂಗ್ರೆಸ್ ಪಕ್ಷದ ಜಿಲ್ಲಾ ಹಾಗೂ ಬ್ಲಾಕ್ ಘಟಕಗಳ ಪುನಾರಚನೆ ಉದ್ದೇಶದಿಂದ ಸಭೆ ಕರೆದು ಚರ್ಚೆ ಮಾಡಿದ್ದೇವೆ. ಬಹಳ ವರ್ಷಗಳಿಂದ ದುಡಿದವರಿಗೆ ಸೂಕ್ತ ಸ್ಥಾನಮಾನ, ಕೆಲವರಿಗೆ ಬಡ್ತಿ, ಹಲವರಿಗೆ ಜವಾಬ್ದಾರಿ ನೀಡಬೇಕಾಗಿದೆ.
ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆಗಳಿಗೆ ನ್ಯಾಯಾಲಯ ಯಾವಾಗ ಬೇಕಾದರೂ ಸೂಚನೆ ನೀಡಬಹುದಾಗಿದೆ. ಅದಕ್ಕೂ ಸಂಘಟನೆ ತಯಾರಿ, ನಿಷ್ಕ್ರಿಯರಾಗಿರುವವರ ವಿರುದ್ಧ ಕ್ರಮ, ಖಾಲಿ ಹುದ್ದೆಗಳಿಗೆ ನೇಮಕಾತಿಗೂ ಕ್ರಮವಹಿಸಲಾಗುವುದು ಎಂದರು.
ಶಾಸಕಾಂಗ ಪಕ್ಷದ ಸಭೆಯಲ್ಲೂ ಕಾರ್ಯವಿಮುಖರಾಗಿರುವವರ ಬಗ್ಗೆ ಚರ್ಚೆಯಾಗಿದೆ. ಅಧಿವೇಶನ ಬಳಿಕ ತಲಾ ಇಬ್ಬರು ಸಚಿವರು ಕೆಪಿಸಿಸಿ ಕಚೇರಿಗೆ ಭೇಟಿ ವೇಳಾಪಟ್ಟಿ ನಿಗದಿಯಾಗಲಿದೆ. ಅದೇ ರೀತಿ ಶಾಸಕರಿಗೂ ಪಕ್ಷದ ಕಚೇರಿಯಲ್ಲೇ ಸಭೆಗಳನ್ನು ನಡೆಸಲು ಸೂಚಿಸಲಾಗಿದೆ ಎಂದು ಹೇಳಿದರು.
ವಿವಿಧ ಸರ್ಕಾರಿ ಸಮಿತಿಗಳಿಗೆ ನೇಮಕದ ವೇಳೆ ಕಾರ್ಯಕರ್ತರಿಗೆ ಆದ್ಯತೆ, ಸಾಮಾಜಿಕ ನ್ಯಾಯ ಮಾನದಂಡ ಅನುಸರಿಸಲಾಗುವುದು. ನಿಗಮ-ಮಂಡಳಿ ನೇಮಕಕ್ಕೆ ಸಚಿವ ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ದೊಡ್ಡ ಸಮಿತಿ ರಚನೆಯಾಗಿದೆ.
ನಮ್ಮ ಬಳಿಯೂ ಏಳೆಂಟು ಸಾವಿರ ಅರ್ಜಿಗಳು ಬಂದಿವೆ. ಅರ್ಜಿಗಳು ಸಲ್ಲಿಕೆಯಾಗದಿದ್ದರೂ ಹಳ್ಳಿಗಳಲ್ಲಿ ಬಲಿಷ್ಠವಾಗಿರುವ ಕಾರ್ಯಕರ್ತರನ್ನು ಗಮನಿಸಲು ನಿರ್ದೇಶನ ನೀಡಿದ್ದೇವೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.