ಕಾವೇರಿ ಜಲ ಸಂಕಷ್ಟ; ಮಾಜಿ ಸಿಎಂ ಬೊಮ್ಮಾಯಿ ಏಟು, ಸಚಿವ ಪರಮೇಶ್ವರ್ ತಿರುಗೇಟು

Basavaraj Bommai and G Parameshwara
Published on

ಬೆಂಗಳೂರು: ರಾಜ್ಯದಲ್ಲಿ ತಲೆದೋರಿರುವ ಕಾವೇರಿ ಜಲ ಸಂಕಷ್ಟವು ನಿವಾರಣೆಗೆ ವಿವಿಧ ಸಂಘಟನೆಗಳು ಹೋರಾಟಕ್ಕೆ ಇಳಿದಿದ್ದರೆ, ಆಡಳಿತ ಮತ್ತು ಪ್ರತಿಪಕ್ಷ ಬಿಜೆಪಿ ನಡುವೆ ಏಟು- ತಿರುಗೇಟಿನ ರಾಜಕೀಯ ತೀವ್ರಗೊಂಡಿದೆ.

ಸುಪ್ರೀಂ ಕೋರ್ಟ್‌ನ ನಡವಳಿಗಳನ್ನು ನಮ್ಮ ವಕೀಲರು ಪರಿಶೀಲಿಸಿ ನೀಡಿದ ಮಾಹಿತಿ ಪ್ರಕಾರ ರಾಜ್ಯದ ಪರ ವಕೀಲರು ಸರಿಯಾಗಿ ವಾದ ಮಂಡಿಸಿಲ್ಲ. ರಾಜ್ಯದ ವಸ್ತುಸ್ಥಿತಿ, ತಮಿಳುನಾಡಿನ ಅಧಿಕ ಬಳಕೆ ಬಗ್ಗೆ ಮನವರಿಕೆ ಮಾಡಿಕೊಟ್ಟಿಲ್ಲ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ದೂರಿದ್ದಾರೆ.

ಬಿಜೆಪಿ ರಾಜ್ಯ ಕಚೇರಿಯಲ್ಲಿ ಸುದ್ದಿಗಾರರಿಗೆ ಶುಕ್ರವಾರ ಪ್ರತಿಕ್ರಿಯಿಸಿದ ಅವರು, ಬೆಳೆದು ನಿಂತ ಬೆಳೆಗಳು ಹಾಗೂ ಕುಡಿಯುವ ನೀರಿನ ಅಭಾವ ಉಂಟಾಗುವುದನ್ನು ತಪ್ಪಿಸಲು ಕಾವೇರಿ ನೀರಿನ ಸಂರಕ್ಷಣೆಗೆ ಹೋರಾಟ ಅನಿವಾರ್ಯವಾಗಿದೆ. ಈ ವ್ಯಾಜ್ಯ ನಿರ್ವಹಣೆಯಲ್ಲಿ ವಿಲವಾಗಿರುವುದು ನಿಚ್ಚಳವೆಂದು ಸರ್ಕಾರಕ್ಕೆ ಏಟು ಕೊಟ್ಟರು.

ತಿರುಗೇಟು

ಕಾವೇರಿ ನೀರು, ರಾಜ್ಯದ ಹಿತರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಸುಪ್ರೀಂ ಕೋರ್ಟ್‌ನಲ್ಲಿ ನಮ್ಮ ವಕೀಲರು ಸಮರ್ಥ ವಾದ ಮಂಡಿಸಿದ್ದಾರೆ. ಕೆಆರ್‌ಎಸ್ ಅಣೆಕಟ್ಟೆಯಲ್ಲಿ ಸದ್ಯ 20.56 ಟಿಎಂಸಿ ಅಡಿ ನೀರಿದೆ, ಕುಡಿಯಲು ನೀರಿಲ್ಲವೆಂದು ಮನವರಿಕೆ ಮಾಡಿಕೊಡಲಾಗಿದೆ ಎಂದು ಗೃಹ ಸಚಿವ ಡಾ.ಪರಮೇಶ್ವರ್ ಸಮರ್ಥಿಸಿಕೊಂಡರು.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, ಕಾವೇರಿ ಬಿಕ್ಕಟ್ಟಿನ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡಬಾರದು. ಪ್ರತಿಪಕ್ಷವಾಗಿ ಅವರದೂ ಜವಾಬ್ದಾರಿಯಿದೆ. ಈ ವಿವಾದ ಸರ್ಕಾರ ನಿರ್ಲಕ್ಷಿಸಿಲ್ಲ ಎಂದು ಸ್ಪಷ್ಟವಾಗಿ ತಳ್ಳಿ ಹಾಕಿದರು.

ಕಾವೇರಿ ನೀರು ನಿಯಂತ್ರಣ ಸಮಿತಿಯು ತಮಿಳುನಾಡಿಗೆ ನೀರು ಪೂರೈಸಲು ಆದೇಶದ ತಕ್ಷಣ ಸರ್ಕಾರ ಚುರುಕಾಗಿ ಕೆಲಸ ಮಾಡಿದೆ. ನೀರು ಬಿಡುವ ಮುನ್ನ ಸರ್ವಪಕ್ಷ ಸಭೆ ಕರೆದು ಚರ್ಚಿಸಿದ್ದೆವು. ಆಗ ಸರ್ಕಾರಕ್ಕೆ ಸಹಕಾರ ನೀಡುತ್ತೇವೆ ಎಂದವರು, ಈಗ ಪ್ರತಿಭಟನೆ ಎನ್ನುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net