ಕಾವೇರಿ ಕಾಲೇಜು ವಿದ್ಯಾರ್ಥಿಗಳ ಪುನರ್ಮಿಲನ, ಸಂತೋಷ ಕೂಟ

Published on

ನಾಪೋಕ್ಲು: ಅಲ್ಲಿ ಸಂಭ್ರಮ ಮನೆ ಮಾಡಿತ್ತು. ಸೇರಿದವರು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. ಸಂತಸ-ಸಂಭ್ರಮಗಳನ್ನು ಹಂಚಿಕೊಂಡರು.

ಇದೆಲ್ಲ ಕಂಡುಬಂದದ್ದು ಗೋಣಿಕೊಪ್ಪದ ಕಾವೇರಿ ಕಾಲೇಜಿನಲ್ಲಿ 1982ರ ಶೈಕ್ಷಣಿಕ ವರ್ಷವನ್ನು ಪೂರೈಸಿದ ವಿಜ್ಞಾನ, ಕಲಾ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳ ಪುನರ್ಮಿಲನ ಮತ್ತು ಸಂತೋಷ ಕೂಟ ಸಮಾರಂಭದಲ್ಲಿ.

2021ರಲ್ಲಿ ಪ್ರಾರಂಭಗೊಂಡ ಹಳೆಯ ವಿದ್ಯಾರ್ಥಿಗಳ ಸಂತೋಷ ಕೂಟ ಹಲವು ವಿವಿಧತೆಯೊಂದಿಗೆ ನಡೆದು ಬಂದಿದ್ದು ಇದೀಗ ಐದನೇ ವರ್ಷದ ಆಚರಣೆ ಸಂಭ್ರಮ-ಸಡಗರದಿಂದ ಜರುಗಿತು. 65 ವಯಸ್ಸಿನ ಆಸುಪಾಸಿನಲ್ಲಿದ್ದ ಪ್ರತಿಯೊಬ್ಬರೂ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಅಭೂತಪೂರ್ವ ಪುನರ್ಮಿಲನಕ್ಕೆ ಒಂದು ವಿಶೇಷ ಮೆರುಗನ್ನು ನೀಡಿತ್ತು. ಈ ಸಂದರ್ಭದಲ್ಲಿ ಆಯೋಜಿಸಲಾಗಿದ್ದ ವಿವಿಧ ಆಟೋಟ ಮತ್ತು ಮನರಂಜನಾ ಚಟುವಟಿಕೆ ಮತ್ತು ಸ್ಪರ್ಧೆಗಳಲ್ಲಿ ದಿನದ ಜಂಜಾಟವನ್ನು ಮರೆತು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.

ಹಳೆಯ ವಿಜ್ಞಾನ ವಿಭಾಗದ ವಿದ್ಯಾರ್ಥಿ ಎಂ.ಸಿ.ನಾಣಯ್ಯ ಮಾತನಾಡಿ, ಈ ಸಂತೋಷ ಕೂಟ ಕೇವಲ ಸಂಭ್ರಮಕ್ಕೆ ಮೀಸಲಾಗಿರದೆ, ಮುಂದಿನ ದಿನಗಳಲ್ಲಿ ಬಲಿಷ್ಠ ಹಾಗೂ ಸಮೃದ್ಧ ಸಮಾಜವನ್ನು ಕಟ್ಟುವ ಪರಿಕಲ್ಪನೆಯಡಿಯಲ್ಲಿ ಸಂಕಲ್ಪವನ್ನು ಮಾಡಬೇಕು ಎಂದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಹಳೆಯ ವಿಜ್ಞಾನ ವಿದ್ಯಾರ್ಥಿನಿ ನವೀನ್, ಶ್ರೀಧರ್ ಹಾಗೂ ಉದ್ಯಮಿ ಗಣೇಶ ಎಸ್. ಎಚ್ ಮಾತನಾಡಿ, ಇದುವರೆಗೆ ವ್ಯವಸ್ಥಿತವಾಗಿ ನಡೆದ ಈ ಸುಂದರ ಸಂತೋಷ ಕೂಟ ಇನ್ನೂ ಹಲವಷ್ಟು ವರ್ಷಗಳವರೆಗೆ ನಡೆಯುವಂತಾಗಬೇಕು. ನಾವು ಈ ಸಮಾಜದ ಆದರ್ಶ ಪ್ರಜೆಗಳಾಗಿ ಬದುಕಬೇಕು ಎಂದರು. ಕಾರ್ಯಕ್ರಮದ ಆಯೋಜಕರಾದ ಹಳೆಯ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಕಾಣತಂಡ ಕುಟ್ಟಪ್ಪ ಅವರ ಕಾರ್ಯತತ್ಪರತೆ, ಶ್ರಮ ಎಲ್ಲರ ಮೆಚ್ಚುಗೆಯನ್ನು ಪಡೆಯಿತು. ಮುಂದಿನ ವರ್ಷದ ಕಾರ್ಯಕ್ರಮದ ಸಂಚಾಲಕರಾಗಿ ಹಳೆಯ ಕಲಾ ವಿಭಾಗದ ವಿದ್ಯಾರ್ಥಿ ಅಪ್ಪುಮಣಿಯಂಡ ಬನ್ಸಿ ಭೀಮಯ್ಯ ಆಯ್ಕೆಯಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net