

ಟರ್ಕಿ: ಹನ್ನೆರಡು ದಿನಗಳ ಹಿಂದೆ ಟರ್ಕಿ ಮತ್ತು ಸಿರಿಯಾದಲ್ಲಿ ಮೇಲಿಂದ ಮೇಲೆ ಸಂಭವಿಸಿದ ಭಾರಿ ಭೂಕಂಪದಿಂದ 40 ಸಾವಿರಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದರು. ಮಾತ್ರವಲ್ಲ, ಬೃಹತ್ ಕಟ್ಟಡಗಳು ಕುಸಿದು ನೆಲಸಮಗೊಂಡಿದ್ದು, ಅವುಗಳ ಅಡಿಗೆ ಮನುಷ್ಯರು ಮಾತ್ರವಲ್ಲದೆ ಪ್ರಾಣಿಗಳೂ ಸಿಲುಕಿಕೊಂಡಿದ್ದವು. ಹಾಗೆ ಸಿಲುಕಿಕೊಂಡು ರಕ್ಷಿಸಲ್ಪಟ್ಟ ಬೆಕ್ಕೊಂದು ರಕ್ಷಣೆ ಮಾಡಿದವನ ಬಿಟ್ಟು ಕದಲದ ಪ್ರಕರಣವೊಂದು ಕಂಡುಬಂದಿದೆ.
ಫೆ. 6ರಂದು ಭಾರಿ ಭೂಕಂಪ ಸಂಭವಿಸಿದ್ದು ಅಂದೇ ಮತ್ತೆರಡು ಭೂಕಂಪ ಸಂಭವಿಸಿದ್ದು, ಮಾರನೇ ದಿನ ಇನ್ನೊಂದು ಭೂಕಂಪನದೊಂದಿಗೆ ಒಂದರ ಹಿಂದೊಂದರಂತೆ ಒಟ್ಟು ನಾಲ್ಕು ಸಲ ಭೂಮಿ ನಡುಗಿದ್ದು, ಅಪಾರ ಸಾವು-ನೋವು ಮತ್ತು ಆಸ್ತಿಪಾಸ್ತಿ ಹಾನಿ ಸಂಭವಿಸಿತ್ತು. ದುರಂತ ಸಂಭವಿಸಿದ ಒಂದು ವಾರದ ಬಳಿಕವೂ ಹಲವರನ್ನು ಜೀವಂತ ರಕ್ಷಿಸಲಾಗಿದ್ದು, ಹಾಗೆ ಬೆಕ್ಕೊಂದು ಕೂಡ ರಕ್ಷಿಸಲ್ಪಟ್ಟಿದೆ.
ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಅಲಿ ಕಾಕಸ್ ಎಂಬಾತ ಈ ಬೆಕ್ಕನ್ನು ರಕ್ಷಣೆ ಮಾಡಿದ್ದ. ಆದರೆ ತನ್ನನ್ನು ರಕ್ಷಿಸಿದ ಆತನನ್ನು ಬಿಟ್ಟು ಬೆಕ್ಕು ಕದಲದ ಪ್ರಕರಣ ನಡೆದಿದೆ. ಬಳಿಕ ಆತನೇ ಆ ಬೆಕ್ಕನ್ನು ತನ್ನ ಬಳಿ ಇರಿಸಿಕೊಂಡು ಸಾಕಲಾರಂಭಿಸಿದ್ದಷ್ಟೇ ಅಲ್ಲದೆ, ಅದಕ್ಕೆ ಎಂಕಜ್ (Enkaz) ಎಂದೂ ಹೆಸರಿಟ್ಟಿದ್ದಾನೆ. ಎಂಕಜ್ ಅಂದರೆ ಟರ್ಕಿಯ ಭಾಷೆಯಲ್ಲಿ ಅವಶೇಷಗಳು ಎಂದರ್ಥವಂತೆ. ಇದೀಗ ಈ ಬೆಕ್ಕು ಮತ್ತು ಈತನ ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ ಹಲವರ ಗಮನ ಸೆಳೆಯಲಾರಂಭಿಸಿದೆ.