ನನ್ನ ಬೆಕ್ಕು ಬಿಸ್ಕೆಟ್ ಮಾತ್ರವೇ ತಿನ್ನೋದು- ಅಂಗಡಿಗೆ ಹೋಗಲು ಅನುಮತಿ ಕೊಡಿ ಎಂದು ಕೋರ್ಟ್ ಮೆಟ್ಟಿಲೇರಿದವನೀಗ ಹೀರೋ!

CATS 8 APR 20
Published on

ಎರ್ನಾಕುಲಂ: ಅಗತ್ಯ ಸಾಮಗ್ರಿಗಳನ್ನು ತರಲು ಮನೆಯ ಸಮೀಪವೇ ಇರುವ ಅಂಗಡಿಗಳಿಗೆ ಹೋಗಿ ಬರಲು ಸರ್ಕಾರಗಳು ಅನುಮತಿ ನೀಡಿವೆ. ಆದರೆ ಮನೆಯ ಪ್ರಾಣಿಗಳಿಗೆ ಆಹಾರ ತರಲು ದೂರ ಹೋಗಲು ಸದ್ಯ ಅನುಮತಿ ಇಲ್ಲ.

ಇದೇ ನಿಯಮದಿಂದಾಗಿ ಕೇರಳದ ಎರ್ನಾಕುಲಂ ಪ್ರಕಾಶ್‌ ಎನ್ನುವವರು ಪೇಚಿಗೆ ಸಿಲುಕಿದ್ದರು. ಮೂರು ಬೆಕ್ಕುಗಳ ಮಾಲೀಕ ಇವರು. ಈ ಬೆಕ್ಕುಗಳು ಬಿಸ್ಕೆಟ್ ಮಾತ್ರವೇ ತಿನ್ನುವಂಥವು. ಹೀಗಾಗಿ  ಬೆಕ್ಕಿನ ಆಹಾರವನ್ನು ಅಂಗಡಿಯಿಂದಲೇ ತಂದು ತಿನ್ನಿಸಿದರಷ್ಟೇ ಇವರಿಗೆ ಸಮಾಧಾನ. ಆದರೆ ಲಾಕ್‌ಡೌನ್‌ ನಿಯಮದಿಂದಾಗಿ ಹೊರಗಡೆ ಹೋಗಲು ಅನುಮತಿಯನ್ನು ಪೊಲೀಸರು ನೀಡಿರಲಿಲ್ಲ. ಹೊರಗೆ ಹೋದಾಗಲೆಲ್ಲಾ ಪೊಲೀಸರು ವಾಪಸ್‌ ಕಳಿಸುತ್ತಿದ್ದರು. ಯಾವುದೇ ಕಾರಣಕ್ಕೂ ಮನೆಯಿಂದ ದೂರ ಹೋಗಬಾರದು ಎಂಬ ನಿಯಮವನ್ನು ಕಟ್ಟುನಿಟ್ಟಿನಿಂದ ಪಾಲಿಸಬೇಕು ಎಂದು ಪೊಲೀಸರು ಹೇಳುತ್ತಿದ್ದರು.

ಇದರಿಂದ ನೊಂದ ಪ್ರಕಾಶ್‌, ಕೊನೆಯ ಮಾರ್ಗವಾಗಿ ಹೈಕೋರ್ಟ್‌ ಬಾಗಿಲು ತಟ್ಟಿದರು. ಪೊಲೀಸರು ಅನುಮತಿ ನಿರಾಕರಿಸುತ್ತಿರುವುದನ್ನು ಅವರು ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಈ ಅರ್ಜಿಯ ವಿಚಾರಣೆಯನ್ನು ವೀಡಿಯೋ ಕಾನ್ಫರೆನ್ಸ್‌ ಮೂಲಕ ನಡೆಸಿದ ನ್ಯಾಯಮೂರ್ತಿ ಎ.ಕೆ.ಜಯಶಂಕರನ್‌ ನಂಬಿಯಾರ್‌ ನೇತೃತ್ವದ ಪೀಠ, ಕೊನೆಯೂ ಪ್ರಕಾಶ್‌ ಅವರ ನೋವಿಗೆ ಸ್ಪಂದಿಸಿತು. ಪ್ರಾಣಿಗಳಿಗೆ ನೀಡುವ ಆಹಾರವೂ ಮೂಲ ಅಗತ್ಯ ಎಂದು ಪರಿಗಣಿಸಿರುವ ನ್ಯಾಯಮೂರ್ತಿಗಳು ಬೆಕ್ಕಿಗೆ ಆಹಾರ ತರಲು ಮಳಿಗೆಗೆ ಹೋಗಲು ಪ್ರಕಾಶ್‌ ಅವರಿಗೆ ಸೂಕ್ತ ಪಾಸ್‌ ನೀಡುವಂತೆ ಕೋರ್ಟ್‌ ಪೊಲೀಸರಿಗೆ ಆದೇಶಿಸಿದೆ.

ಹಾಗೆಂದು ಕರ್ನಾಟಕದಲ್ಲಿ ಇದು ಸಾಧ್ಯವಿಲ್ಲ. ಏಕೆಂದರೆ ಸಾಕು ಪ್ರಾಣಿಗಳಿಗೆ ಆಹಾರ ಬೇಕೆಂದರೆ ಅದನ್ನು ಆನ್‌ಲೈನ್‌ ಮೂಲಕ ತರಿಸಿಕೊಳ್ಳಬೇಕೇ ವಿನಾ ಅಂಗಡಿಗಳಿಗೆ ಹೋಗುವಂತೆಯೇ ಇಲ್ಲ ಎಂಬ ಕಡ್ಡಾಯ ನಿಯಮವಿದೆ. ಪ್ರಾಣಿಗಳ ಆಹಾರಕ್ಕೆ ದೂರ ಹೋಗಬೇಕೆಂದು ಪಾಸ್‌ ಕೇಳಿದರೆ ಪೊಲೀಸರಿಗೆ ಅದನ್ನು ನಿರಾಕರಿಸುವ ಅಧಿಕಾರ ಇದೆ ಎಂದು ಸ್ಪಷ್ಟವಾಗಿ ನಮೂದಿಸಲಾಗಿದೆ. (ಏಜನ್ಸೀಸ್‌)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net