ಪದವಿ ಕಾಲೇಜು ಅತಿಥಿ ಉಪನ್ಯಾಸಕರಿಗೆ ಸಾಂದರ್ಭಿಕ ರಜೆ: ಬೇಡಿಕೆ ಈಡೇರಿಕೆ

Teacher (1)
Published on

ಬೆಂಗಳೂರು ಕಾಲೇಜು ಶಿಕ್ಷಣ ಇಲಾಖೆ ವ್ಯಾಪ್ತಿಯ ಎಲ್ಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಮಾಸಿಕ 15ರಿಂದ 19 ಗಂಟೆಗಳ ಕಾರ್ಯಭಾರ ನಿರ್ವಹಿಸುವ ಅತಿಥಿ ಉಪನ್ಯಾಸಕರಿಗೆ ತಿಂಗಳಿಗೊಂದು ಸಾಂದರ್ಭಿಕ ರಜೆ ಮಂಜೂರು ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಈ ಮೂಲಕ ಅತಿಥಿ ಉಪನ್ಯಾಸಕರ ಎಲ್ಲ ಬೇಡಿಕೆಗಳನ್ನು ಈಡೇರಿಸಿದೆ. ಆದರೆ, ಈ ಸಾಂದರ್ಭಿಕ ರಜೆ ದಿನದ ಕಾರ್ಯಭಾರವನ್ನು ಇತರೆ ದಿನಗಳಲ್ಲಿ ಸರಿದೂಗಿಸಬೇಕೆಂದು ಉನ್ನತ ಶಿಕ್ಷಣ ಇಲಾಖೆ ಸೂಚಿಸಿದೆ. ಇದಕ್ಕೆ ಅತಿಥಿ ಉಪನ್ಯಾಸಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇದು ತೋರಿಕೆಗಷ್ಟೆ ರಜೆ ಕೊಟ್ಟಂತಾಗಿದೆ. ರಜೆ ದಿನದ ಕಾರ್ಯಭಾರವನ್ನು ಬೇರೆ ದಿನ ಸರಿದೂಗಿಸಬೇಕು ಎಂದಾದ ಮೇಲೆ ಅದು ರಜೆ ಹೇಗಾಗುತ್ತದೆ. ಇದು ಅಧಿಕಾರಿಗಳ ತಂತ್ರವಾಗಿದೆ. ಸರ್ಕಾರ ನಮ್ಮ ಬೇಡಿಕೆಗಳನ್ನು ಷರತ್ತುರಹಿತವಾಗಿ ಈಡೇರಿಸಲು ಸಿದ್ಧವಿದ್ದರೂ ಅಧಿಕಾರಿಗಳು ಬಿಡುವುದಿಲ್ಲ. ಅನಗತ್ಯ ಸಲಹೆ ನೀಡಿ ನಮಗೆ ಅನುಕೂಲಗಳು ಆಗದಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ಅತಿಥಿ ಉಪನ್ಯಾಸಕರ ವಲಯದಲ್ಲಿ ಬೇಸರ ವ್ಯಕ್ತವಾಗಿದೆ.

ಇದಕ್ಕೂ ಮೊದಲು ಕನಿಷ್ಠ 5ರಿಂದ ಗರಿಷ್ಠ 8 ಸಾವಿರ ಗೌರವಧನ ಹೆಚ್ಚಳ, 5 ಲಕ್ಷ ರೂ. ಆರೋಗ್ಯ ವಿಮೆ, 60 ವರ್ಷ ತುಂಬಿದ ಅತಿಥಿ ಉಪನ್ಯಾಸಕರಿಗೆ 5 ಲಕ್ಷ ರೂ.ಗಳ ಇಡುಗಂಟು ಬೇಡಿಕೆಗಳನ್ನು ಈಡೇರಿಸಿತ್ತು. ಈಗ ಸಾಂದರ್ಭಿಕ ರಜೆ ಬೇಡಿಕೆಯನ್ನು ಕೂಡ ಈಡೇರಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net