ಮತಾಂತರವಾದರೆ ಜಾತಿ ಬದಲಾಗದು; ಮಹತ್ವದ ತೀರ್ಪು ನೀಡಿದ ಮದ್ರಾಸ್ ಹೈಕೋರ್ಟ್

HC
Published on

ನವದೆಹಲಿ: ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಮತಾಂತರಗೊಂಡ ಮಾತ್ರಕ್ಕೆ ಆತನ ಜಾತಿ ಬದಲಾಗುವುದಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ. ಕ್ರಿಶ್ಚಿಯನ್ ಧರ್ಮವನ್ನು ಸ್ವೀಕರಿಸಿದ ಪರಿಶಿಷ್ಟ ಜಾತಿ (ಎಸ್ಸಿ) ವ್ಯಕ್ತಿಯೊಬ್ಬರು ಸರ್ಕಾರಿ ನೌಕರಿಯಲ್ಲಿ ಆದ್ಯತೆ ಪಡೆಯಲು ಅಂತರ್ಜಾತಿ ವಿವಾಹ ಪ್ರಮಾಣಪತ್ರವನ್ನು ಪಡೆಯಲು ಪ್ರಯತ್ನಿಸಿದ್ದರು. ಕಾನೂನಿನ ಪ್ರಕಾರ ಮತಾಂತರ ಹೊಂದಿದ ದಲಿತರನ್ನು ಹಿಂದುಳಿದ ಸಮುದಾಯದವರು (ಬ್ಯಾಕ್​ವರ್ಡ್ ಕ್ಲಾಸ್) ಎಂದು ಪರಿಗಣಿಸಲಾಗುತ್ತದೆ.

ತಮಿಳುನಾಡಿನಲ್ಲಿ ಎಸ್​ಸಿ/ಎಸ್​ಟಿಗೆ ಸೇರಿದ ಸಮುದಾಯದವರೊಂದಿಗೆ ಮುಂದುವರಿದ ಜಾತಿಯ ಸದಸ್ಯರ ವಿವಾಹಗಳು ಅಥವಾ ಹಿಂದುಳಿದ ಜಾತಿ ಮತ್ತು ಎಸ್ಸಿ/ಎಸ್ಟಿಗಳ ನಡುವಿನ ವಿವಾಹವನ್ನು ಅಂತರ್ಜಾತಿ ವಿವಾಹಗಳೆಂದು ಪರಿಗಣಿಸಲಾಗುತ್ತದೆ ಮತ್ತು ಸರ್ಕಾರಿ ಉದ್ಯೋಗಗಳಲ್ಲೂ ಅವರಿಗೆ ಆದ್ಯತೆ ನೀಡಲಾಗುತ್ತದೆ.

ಈ ಪ್ರಕರಣದಲ್ಲಿ ಅರ್ಜಿದಾರರು ಮೂಲತಃ ಆದಿ-ದ್ರಾವಿಡ ಸಮುದಾಯಕ್ಕೆ ಸೇರಿದ್ದರು. ನಂತರದಲ್ಲಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡದ್ದರಿಂದ ಹಿಂದುಳಿದ ವರ್ಗಗಳ ಪ್ರಮಾಣಪತ್ರ ಪಡೆದುಕೊಂಡಿದ್ದರು. ಆದರೆ, ಅರ್ಜಿದಾರರು ಹುಟ್ಟಿನಿಂದ ಆದಿ-ದ್ರಾವಿಡ ಸಮುದಾಯದವರಾಗಿದ್ದರಿಂದ, ಧರ್ಮ ಬದಲಾವಣೆಯು ಮೂಲ ಸಮುದಾಯವನ್ನು ಬದಲಾಯಿಸುವುದಿಲ್ಲ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳು, ಅತ್ಯಂತ ಹಿಂದುಳಿದ ವರ್ಗಗಳು, ಹಿಂದುಳಿದ ವರ್ಗಗಳು ಮತ್ತು ಇತರ ಜಾತಿಗಳ ವರ್ಗೀಕರಣವು ಜಾತಿಯನ್ನು ಬದಲಾಯಿಸುವುದಿಲ್ಲ ಎಂದು ಹೈಕೋರ್ಟ್ ನ್ಯಾ. ಸುಬ್ರಹ್ಮಣ್ಯನ್ ಅಭಿಪ್ರಾಯಪಟ್ಟಿದ್ದಾರೆ.

ಇಲ್ಲಿ ಅರ್ಜಿದಾರ ಎಸ್.ಪಾಲ್ ರಾಜ್ ಕ್ರಿಶ್ಚಿಯನ್ ಆದಿ ದ್ರಾವಿಡ ಸಮುದಾಯಕ್ಕೆ ಸೇರಿದ್ದಾನೆ. 2009ರಲ್ಲಿ ಆತ ಹಿಂದು ಧರ್ಮದ ಅರುಂದಥಿಯಾರ್ ಸಮುದಾಯಕ್ಕೆ (ಪರಿಶಿಷ್ಟ ಜಾತಿ) ಸೇರಿದ ಜಿ. ಅಮುತಾ ಎಂಬವರನ್ನು ವಿವಾಹವಾಗಿದ್ದ. ವಿವಾಹದ ನಂತರ, ಪೌಲ್ ರಾಜ್ ತನ್ನದು ಅಂತರ್ಜಾತಿ ವಿವಾಹವಾಗಿದೆ ಮತ್ತು ನಾನು ಹಿಂದುಳಿದ ವರ್ಗಕ್ಕೆ (ಬ್ಯಾಕ್​ವರ್ಡ್ ಕ್ಲಾಸ್) ಸೇರಿದವನಾಗಿದ್ದೇನೆ ಎಂದು ಪ್ರತಿಪಾದಿಸಿದ್ದ. ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗದವರ ನಡುವಿನ ವಿವಾಹವನ್ನು ಅಂತರ್ಜಾತಿ ವಿವಾಹವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ ಎಲ್ಲಾ ಸರ್ಕಾರಿ ಲಾಭಗಳನ್ನು ಪಡೆಯಲು ನಾನು ಅರ್ಹನಾಗಿದ್ದೇನೆ ಎಂದು ಹೇಳಿದ್ದ. ಅಲ್ಲದೆ, ಗಂಡ ಅಥವಾ ಹೆಂಡತಿ ಎಸ್ಸಿ/ಎಸ್ಟಿಯಾಗಿದ್ದರೆ ಅಂತರ್ಜಾತಿ ವಿವಾಹದ ಪ್ರಮಾಣ ಪತ್ರ ನೀಡಬೇಕು ಎನ್ನುವುದು ಆತನ ವಾದವಾಗಿತ್ತು. ಆದರೆ ಸೇಲಂ ಜಿಲ್ಲಾಡಳಿತದ ಅಧಿಕಾರಿಗಳು ಆತನ ವಾದ ಒಪ್ಪಿರಲಿಲ್ಲ ಮತ್ತು ಮೂಲತಃ ನೀವು ದಲಿತರಾಗಿದ್ದು, ಮತಾಂತರಗೊಂಡ ಮಾತ್ರಕ್ಕೆ ಜಾತಿ ಸ್ಥಾನಮಾನ ಬದಲಾಗುವುದಿಲ್ಲ ಎಂದು ಹೇಳಿದ್ದರು.

ಈ ಅಭಿಪ್ರಾಯವನ್ನು ಪುರಸ್ಕರಿಸಿದ ಮದ್ರಾಸ್ ಹೈಕೋರ್ಟ್, ಮತಾಂತರಗೊಂಡ ವ್ಯಕ್ತಿ ಅಂತರ್ಜಾತಿ ವಿವಾಹ ಪ್ರಮಾಣಪತ್ರ ಕೇಳಿದರೆ, ಅಂತರ್ಜಾತಿ ವಿವಾಹ ಕೋಟಾದ ಅಡಿಯಲ್ಲಿ ನೀಡಲಾಗುವ ಪ್ರಯೋಜನವನ್ನು ದುರುಪಯೋಗಪಡಿಸಿಕೊಳ್ಳಲು ದಾರಿ ಮಾಡಿಕೊಟ್ಟಂತೆ. ದಂಪತಿಯಲ್ಲಿ ಒಬ್ಬರು ಪರಿಶಿಷ್ಟ ಜಾತಿ ಮತ್ತೊಬ್ಬರು ಇತರ ಜಾತಿಗೆ ಸೇರಿದ್ದರೆ ಮಾತ್ರ ಅಂತರ್ಜಾತಿ ವಿವಾಹ ಪ್ರಮಾಣಪತ್ರ ನೀಡಬೇಕು ಎಂದು ತೀರ್ಪು ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net