

ಬೆಂಗಳೂರು: ರಾಜ್ಯದಲ್ಲಿ ಜಾತಿಗಣತಿ ಸಮೀಕ್ಷೆ ಕೈಗೊಂಡಿರುವ ರಾಜ್ಯ ಸರ್ಕಾರ, ಈ ಹಿಂದೆ ಹಾಕಿಕೊಂಡಿದ್ದ ಅವಧಿಯೊಳಗೆ ಪೂರ್ಣಗೊಳಿಸಲು ಸಾಧ್ಯವಾಗದ ಹಿನ್ನೆಲೆ ದಸರಾ ರಜೆಯನ್ನು ವಿಸ್ತರಿಸಿ, ಸರ್ಕಾರಿ ಶಾಲಾ ಶಿಕ್ಷಕರನ್ನು ಸಮೀಕ್ಷೆ ಮುಗಿಸಿಕೊಡುವಂತೆ ಡೆಡ್ಲೈನ್ ನೀಡಿತ್ತು. ಇದೀಗ ಮತ್ತೊಮ್ಮೆ ಅವಧಿ ವಿಸ್ತರಿಸಿದ್ದು, ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಆನ್ಲೈನ್ ನೋಂದಣಿಗೆ ಇನ್ನೂ ಅವಕಾಶವಿದೆ ಎಂಬುದನ್ನು ಈ ಮೂಲಕ ಸ್ಪಷ್ಟಪಡಿಸಿದೆ.
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ದಿನಾಂಕ ಸೆ.22ರಂದು ಆರಂಭಗೊಂಡು, ಅ. 31ರಂದು ಮುಕ್ತಾಯಗೊಳ್ಳಲಿದೆ ಎಂದು ತಿಳಿಸಿತ್ತು. ಆದರೀಗ, ಮಗದೊಮ್ಮೆ ದಿನಾಂಕವನ್ನು ವಿಸ್ತರಿಸಿರುವ ರಾಜ್ಯ ಸರ್ಕಾರ, ವಿವಿಧ ಕಾರಣಗಳಿಂದ ಯಾರೆಲ್ಲ ಸಮೀಕ್ಷೆಯಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲವೋ ಅವರು ಸರ್ಕಾರ ನೀಡಿರುವ ಅಧಿಕೃತ ಲಿಂಕ್ ಬಳಿಸಿಕೊಂಡು ಆನ್ಲೈನ್ ಮೂಲಕ ಪಾಲ್ಗೊಳ್ಳುವ ಅವಕಾಶವಿದೆ ಎಂದು ತಿಳಿಸಿದೆ. ಆನ್ಲೈನ್ನಲ್ಲಿ ಭಾಗವಹಿಸಲು ನ.10 ರವರೆಗೆ ಅಂತಿಮವಾಗಿ ವಿಸ್ತರಿಸಲಾಗಿದೆ ಎಂದು ಹೇಳಿದೆ.
ಅಂದಹಾಗೆ, ಈ ಸಮೀಕ್ಷೆಯು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮೂಲಕ ನಡೆಯುತ್ತಿದ್ದು, ರಾಜ್ಯದಲ್ಲಿ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿಯನ್ನು ತಿಳಿಯುವ ಉದ್ದೇಶವನ್ನು ಹೊಂದಿದೆ. ಈ ಸಮೀಕ್ಷೆ 2025, ಸೆಪ್ಟೆಂಬರ್ 22ರಿಂದ ಆರಂಭವಾಗಿದ್ದು, ಧರ್ಮ, ಜಾತಿ, ಆರ್ಥಿಕ ಸ್ಥಿತಿ, ಶೈಕ್ಷಣಿಕ ಅರ್ಹತೆ ಸೇರಿದಂತೆ 65ಕ್ಕೂ ಹೆಚ್ಚು ಪ್ರಶ್ನೆಗಳನ್ನು ಒಳಗೊಂಡ 13 ಪುಟಗಳ ಫಾರ್ಮ್ ಮೂಲಕ ಮಾಹಿತಿ ಸಂಗ್ರಹಿಸಲಾಗುತ್ತದೆ. ಇದು ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಉನ್ನತಿ ಮತ್ತು ಮೀಸಲಾತಿ ನೀತಿಗಳಿಗೆ ಆಧಾರವಾಗುವಂತಹ ಸಮೀಕ್ಷೆಯಾಗಿದೆ.
ಸಮೀಕ್ಷೆಯ ಅವಧಿ ಆರಂಭದಲ್ಲಿ ಸೆಪ್ಟೆಂಬರ್ 30 ರವರೆಗೆ ನಿಗದಿಪಡಿಸಲಾಗಿತ್ತು. ಆದರೆ, ನಂತರದಲ್ಲಿ ಗುರಿ ತಲುಪದೆ ಇದ್ದ ಹಿನ್ನೆಲೆ ಅಕ್ಟೋಬರ್ 18 ರವರೆಗೆ ವಿಸ್ತರಿಸಲಾಯಿತು. ಬೆಂಗಳೂರು ನಗರದಲ್ಲಿ (ಗ್ರೇಟರ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ) ಈಗಾಗಲೇ 15.42 ಲಕ್ಷಕ್ಕೂ ಅಧಿಕ ಮನೆಗಳನ್ನು ಸಮೀಕ್ಷೆ ಮಾಡಲಾಗಿದ್ದು, 10 ದಿನಗಳಲ್ಲಿ 13.12 ಲಕ್ಷ ಮನೆಗಳು ಆವರಿಸಲ್ಪಟ್ಟಿವೆ. ನಾಳೆಗೆ (ಅ.31) ಮನೆ ಮನೆಗೆ ಹೋಗಿ ನಡೆಸುವ ಸಮೀಕ್ಷೆ ಪೂರ್ಣಗೊಳ್ಳಲಿದ್ದು, ಯಾರೆಲ್ಲ ಸಮೀಕ್ಷೆಯಲ್ಲಿ ಇನ್ನೂ ಪಾಲ್ಗೊಂಡಿಲ್ಲ, ಅವರಿಗೆ ಆನ್ಲೈನ್ನಲ್ಲಿ ಭಾಗವಹಿಸಲು ನ.10 ರವರೆಗೆ ಸರ್ಕಾರ ಅವಧಿ ವಿಸ್ತರಿಸುವ ಮುಖೇನ ಅವಕಾಶ ನೀಡಿರುವುದು ಗಮನಾರ್ಹ.