

ಬೆಂಗಳೂರು: ಜಾತಿ ಜನಗಣತಿ ಹಿನ್ನೆಲೆ-ಮುನ್ನೆಲೆ ಕುರಿತು ದುಂಡು ಮೇಜಿನ ಸಭೆಯೊಂದು ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ನಡೆಯಲಿದೆ. ರಾಜ್ಯ ಸರ್ಕಾರದ ತೆಗೆದುಕೊಂಡ ನಿರ್ಧಾರ ಈ ಸಭೆಯ ಮುಖ್ಯ ಕಾರ್ಯಸೂಚಿಯಾಗಿದೆ.
ಸಾಮಾಜಿಕ ನ್ಯಾಯ ವೇದಿಕೆಯಡಿ ಈ ಸಭೆ ಆಯೋಜಿಸಲಾಗಿದೆ. ಆಯ್ದ ಪ್ರಾಧ್ಯಾಪಕರು, ವಕೀಲರು, ನಿವೃತ್ತ ಅಧಿಕಾರಿಗಳು, ಸಾಮಾಜಿಕ ಚಿಂತಕರು, ಆಹ್ವಾನಿತರೊಂದಿಗೆ ಚರ್ಚೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ, ದತ್ತಾಂಶಗಳ ವರದಿಯನ್ನೇ ಜಾತಿ ಜನಗಣತಿ ಎಂದು ಬಿಂಬಿಸಲಾಯಿತು. ಕಳೆದ ಒಂದು ದಶಕದಿಂದ ಈ ವರದಿ ಬಗ್ಗೆ ಭಾಷಣ ಮಾಡುತ್ತಲೇ ಸಿಎಂ ಸಿದ್ದರಾಮಯ್ಯ ಕಾಲಯಾಪನೆ ಮಾಡಿದ್ದಾರೆ ಎಂದು ವೇದಿಕೆ ವಿಮರ್ಶಿಸಿದೆ.
ದಶಕದ ಹಿಂದಿನ ಅಂಕಿ-ಸಂಖ್ಯೆಗಳು ಹಳತಾಗಿವೆ. ಕಾನೂನುರೀತ್ಯ ಮಾನ್ಯವಾಗದು ಎಂದರೂ ಹಿಂದುಳಿದ ವರ್ಗಗಳಿಗೆ ನಂಬಿಸುವ ಪ್ರಯತ್ನವಾಯಿತು. ಸಾಮಾಜಿಕ ನ್ಯಾಯದ ಮಾತು ಕೊನೆಗೂ ಕೃತಿಗೆ ಬರಲಿಲ್ಲವೆಂದು ಬೇಸರ ವ್ಯಕ್ತಪಡಿಸಿದೆ.
ಪ್ರತಿಪಕ್ಷಗಳು, ಅನೇಕ ಸಮುದಾಯಗಳು ಹೇಳಿದಾಗ ಸರ್ಕಾರ ಒಪ್ಪಿಕೊಳ್ಳಲಿಲ್ಲ. ಈಗ ಮೂರನೇ ವ್ಯಕ್ತಿ ಹೇಳಿದರು ಎಂದು ವರದಿಗೆ ಅವಧಿ ಮೀರಿದ್ದು, ಆಯೋಗದ ಕಾನೂನು ಪ್ರಕಾರ ಮಾನ್ಯವಲ್ಲ.
ಅಂಕಿಅಂಶಗಳು ಹತ್ತು ವರ್ಷಗಳಷ್ಟು ಹಳೆಯವು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದು, ಹೊಸ ಸಮೀಕ್ಷೆ ಮಾಡುತ್ತೇವೆ, 90 ದಿನಗಳಲ್ಲಿ ಪೂರ್ಣಗೊಳಿಸುತ್ತೇವೆ ಎಂದಿದ್ದಾರೆ. ಸಚಿವ ಸಂಪುಟ ಸಭೆ ಕೂಡ ಈ ಕುರಿತು ತೀರ್ಮಾನ ತೆಗೆದುಕೊಂಡಿದೆ.
ಈಗಾಗಲೇ ಕೇಂದ್ರ ಸರ್ಕಾರ ಜನಗಣತಿ ಜತೆಗೆ ಜಾತಿ ಗಣತಿಗೆ ನಿರ್ಧರಿಸಿದೆ. ಅಧಿಕೃತ ವೇಳಾಪಟ್ಟಿ ಕೂಡ ಪ್ರಕಟಿಸಿದೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರದಿಂದ ಪ್ರತ್ಯೇಕವಾಗಿ ನಡೆಸುವ ಔಚಿತ್ಯ ಏನು ?, ಸಂವಿಧಾನದತ್ತ ಅಧಿಕಾರವಿಲ್ಲ. ಅನಗತ್ಯ ಗೊಂದಲಕ್ಕೆ ದಾರಿ ಮಾಡಿಕೊಡುವ ಸಾಧ್ಯತೆ ಬಗ್ಗೆ ದುಂಡು ಮೇಜಿನ ಸಭೆ ಚರ್ಚಿಸಲಿದೆ.
ಜನರಲ್ಲಿ ಜಾಗೃತಿ ಮೂಡಿಸುವ ಜತೆಗೆ ರಾಜ್ಯ ಸರ್ಕಾರ ತನ್ನ ನಿರ್ಧಾರ ಕೈಬಿಟ್ಟು, ಕೇಂದ್ರ ಸರ್ಕಾರದ ಜತೆಗೆ ಸಹರಿಸಬೇಕು ಎಂದು ಒತ್ತಡ ಹೇರುವ ಕಾರ್ಯಯೋಜನೆ ಬಗ್ಗೆ ಸಭೆಯಲ್ಲಿ ಚರ್ಚಿಸಿ ಸ್ಪಷ್ಟ ರೂಪರೇಷೆ ಸಿದ್ಧಪಡಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ.