

ಬೆಂಗಳೂರು: ಜಾತಿಗಣತಿ ವರದಿ ತೀರ್ಮಾನಕ್ಕೆ ಬರಲು ಇನ್ನೂ ಒಂದು ವರ್ಷವಾಗಬಹುದು(Caste Census Report; It may take a year to reach a conclusion!) . ಇದು ಬಹಳ ಜಟಿಲ ಸಮಸ್ಯೆ. ಬಹಳಷ್ಟು ಚರ್ಚೆಯಾಗಬೇಕಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ(Satish Jarakiholi) ತಿಳಿಸಿದರು.
ಸಂಜಯನಗರ ನಿವಾಸದಲ್ಲಿ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಭೇಟಿ ಬಳಿಕ ಮಾತನಾಡಿದ ಅವರು, ಜಾತಿಗಣತಿ ವರದಿ ಸ್ವೀಕಾರಕ್ಕೆ ಹತ್ತು ವರ್ಷ ತೆಗೆದುಕೊಂಡಿದೆ. ಹೀಗಾಗಿ ಇನ್ನೂ ಒಂದು ವರ್ಷವಾಗಬಹುದು. ಅಂಕಿ-ಸಂಖ್ಯೆ ಜನರೇ ಬರೆಸಿದ್ದು ಅಲ್ವಾ?. ಸಹಿ ಮಾಡಿದವರೇ ವಿರೋಧ ಮಾಡುತ್ತಿದ್ದಾರೆ. ಸಮಗ್ರ ಚರ್ಚೆಯಾಗಬೇಕು ಎಂದರು.
ಸಾದರ ಜನರನ್ನು ಕಡಿಮೆ ತೋರಿಸಲಾಗಿದೆ. 64 ಸಾವಿರ ಅಷ್ಟೆ ತೋರಿಸಿದ್ದಾರೆ. ಮೂರು ಜಿಲ್ಲೆಗಳಲ್ಲಿ ಅವರಿದ್ದಾರೆ. ಹೀಗಾಗಿ ಅವರು ಧ್ವನಿ ಎತ್ತಿದ್ದಾರೆ ಎಂದು ಹೇಳಿದರು.
ಮೀಸಲಾತಿ ಪ್ರಮಾಣ ಹೆಚ್ಚು ಮಾಡುವುದು ಈಗ ಅಸಾಧ್ಯ. ಶಿಫಾರಸು ಮಾಡಿದ್ದಾರೆ. ಈಗ ಅಂಕಿ- ಅಂಶಗಳನ್ನು ಸರಿ ಮಾಡಬೇಕು. ಅಂಕಿ-ಅಂಶಗಳನ್ನು ಸರಿ ಮಾಡಲು ಅವಕಾಶ ನೀಡಬೇಕು ಎಂದು ತಿಳಿಸಿದರು.
ಜಾತಿಗಣತಿ ವರದಿ ಶಿಫಾರಸು ಸರಿಯಾಗಿ ಜಾರಿ ಆಗಬೇಕು. ಸರಿಯಾಗಿ ನಾವು ಮಾಡದಿದ್ದರೆ ಕಷ್ಟವಾಗುತ್ತದೆ. ಯಾವುದೇ ಸಮಾಜಕ್ಕೆ ನೋವಾಗಬಾರದು. ಇದಷ್ಟೇ ನಮ್ಮ ಉದ್ದೇಶ ಎಂದು ಸ್ಪಷ್ಟಪಡಿಸಿದರು.
ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿ, ಜಾತಿಗಣತಿ ಬಗ್ಗೆ ಇನ್ನೂ ತೀರ್ಮಾನ ಆಗಿಲ್ಲ. ಜಾತಿಗಣತಿ ಯಾರಿಗೂ ತೊಂದರೆಯಾಗುವುದಿಲ್ಲ. ಲಿಂಗಾಯತ, ಒಕ್ಕಲಿಗ ಯಾರಿಗೂ ತೊಂದರೆಯಾಗುವುದಿಲ್ಲ. ಎಲ್ಲ ಸೇರಿ ಸರ್ಕಾರ ನಡೆಸುತ್ತಿದ್ದೇವೆ. ಎಲ್ಲರೂ ಒಪ್ಪುವ ತೀರ್ಮಾನ ಮಾಡುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.