ಜಾತಿ ಗಣತಿ: ಪ್ರಭಾವಿ ಸಚಿವರ ಒತ್ತಡಕ್ಕೆ ಮಣಿದ ಸರ್ಕಾರ

caste census
Published on

ಶಿವಾನಂದ ತಗಡೂರು, ಬೆಂಗಳೂರು:

ಜಾತಿ ಗಣತಿ ವರದಿಯನ್ನು ತಡೆದು ನಿಲ್ಲಿಸಿ, ಮರು ಸಮೀಕ್ಷೆಗೆ ೋಷಣೆ ಮಾಡಿಸುವಲ್ಲಿ ಕಾಂಗ್ರೆಸ್ ಸರ್ಕಾರದೊಳಗಿನ ಪ್ರಭಾವಿ ಸಚಿವರುಗಳು ಯಶಸ್ವಿಯಾಗಿದ್ದಾರೆ. ಆ ಮೂಲಕ ಪಕ್ಷದೊಳಗೆ ಎದುರಾಗಿದ್ದ ಅಡ್ಡಿ ಮತ್ತು ಒತ್ತಡಗಳಿಗೆ ಸರ್ಕಾರ ಮಣಿದಿದೆ.

ಸಂಘರ್ಷದ ಹಂತವನ್ನು ತಲುಪಿದ್ದ ಜಾತಿಗಣತಿ ವರದಿ ಮರು ಸಮೀಕ್ಷೆಗೆ ಹೈಕಮಾಂಡ್ ಅಸ್ತು ಎಂದಿರುವುದರಿಂದ ಸರ್ಕಾರಕ್ಕೂ ಸದ್ಯಕ್ಕೆ ತಾತ್ಕಾಲಿಕ ರಿಲ್ೀ ಸಿಕ್ಕಿದೆ.

ಜಾತಿ ಗಣತಿ ವರದಿ ಜಾರಿಗೆ ನೀಡದಂತೆ ಸರ್ಕಾರದ ಭಾಗವೇ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದ ಸಚಿವರುಗಳ ತಂಡ ಈ ನಿಟ್ಟಿನಲ್ಲಿ ನಿರಂತರ ಒತ್ತಡ ತಂತ್ರವನ್ನು ಅನುಸರಿಸುತ್ತಲೇ ಇತ್ತು. ಈ ಅಡ್ಡಿಗಳನ್ನು ದಾಟಿ ವರದಿಯನ್ನು ಸ್ವೀಕಾರ ಮಾಡಿದ್ದ ಸಿಎಂ ಸಿದ್ದರಾಮಯ್ಯ, ಅದನ್ನು ಜಾರಿಗೆ ನೀಡಲು ಸಾಧ್ಯವಾಗಲೇ ಇಲ್ಲ. ಅಷ್ಟರ ಮಟ್ಟಿಗೆ ತಮ್ಮದೇ ಪಕ್ಷದೊಳಗಿನ ಪ್ರತಿರೋಧದ ಸುಳಿಯಲ್ಲಿ ಸಿಎಂ ಸಿಲುಕಿಕೊಂಡಿದ್ದರು.

ಸಂಘರ್ಷದ ವೇದಿಕೆ:

ಜಾತಿ ಗಣತಿ ನಿಜಕ್ಕೂ ಅಕ್ಷರ ಸಹ ರಾಜಕೀಯ ಸಂಘರ್ಷದ ವೇದಿಕೆಯಾಗಿ ಪರಿಣಮಿಸಿತ್ತು. ಹಿಂದುಳಿದವರು, ಅಲ್ಪಸಂಖ್ಯಾತರು, ದಲಿತ ಸಮುದಾಯ ವರದಿ ಜಾರಿಗೆ ಸಿದ್ದರಾಮಯ್ಯ ಮೇಲೆ ಒತ್ತಡ ಹಾಕುತ್ತಿದ್ದರೆ, ಮತ್ತೊಂದು ಕಡೆಯಲ್ಲಿ ಸ್ವತಂ ಸಿಎಂ ಕೂಡ ಸಾಮಾಜಿಕ ಬದ್ಧತೆ ಹಿನ್ನೆಲೆಯಲ್ಲಿ ವರದಿ ಜಾರಿ ಮಾಡಲು ಮುಂದಾಗಿದ್ದರು.

ಸಡ್ಡು ಹೊಡೆದಿದ್ದ ಸಮುದಾಯ:

ಇದಕ್ಕೆಲ್ಲ ಸಡ್ಡು ಹೊಡೆದಿದ್ದ ಒಕ್ಕಲಿಗರು, ಲಿಂಗಾಯಿತ ಸಮುದಾಯ, ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಸಕಾರದ ಸಚಿವರುಗಳನ್ನೇ ಮುಂದಿಟ್ಟುಕೊಂಡು ಸಮರ ಸಾರಿತ್ತು. ಈ ವಿಷಯ ಆಂತರಿಕ ಸಂಘರ್ಷಕ್ಕೂ ಕಾರಣವಾಗಿತ್ತು. ಇದಕ್ಕಾಗಿಯೇ ಹಲವು ಸಚಿವ ಸಂಪುಟ ಸಭೆಗಳು ನಡೆದರೂ ಎಲ್ಲರನ್ನೂ ಸಹಮತಕ್ಕೆ ತರಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಾಧ್ಯವಾಗಲೇ ಇಲ್ಲ.

ತಪ್ಪಿದ ಬೀಸೋ ದೊಣ್ಣೆ:

ಮಠಗಳು ಸೇರಿದಂತೆ ಎಲ್ಲ ವಿರೋಧಗಳನ್ನು ಮೆಟ್ಟಿ ನಿಂತು ಒಂದು ಹಂತದಲ್ಲಿ ವರದಿಯನ್ನು ಜಾರಿಗೆ ನೀಡಲು ಸಿಎಂ ಮುಂದಾಗಿದ್ದರು. ಸಮಾಧಾನದಿಂದ ಹೆಜ್ಜೆ ಇಡುವಂತೆ ಹೈಕಮಾಂಡ್ ಸೂಚಿಸಿದ ಹಿನ್ನೆಲೆಯಲ್ಲಿ ಎಚ್ಚರಿಕೆ ಹೆಜ್ಜೆ ಇಡುತ್ತಿದ್ದ ಸರ್ಕಾರ, ಈಗ ಬೀಸೋ ದೊಣ್ಣೆ ತಪ್ಪಿಸಿಕೊಂಡಿದೆ. ಆದರೆ, ಸದ್ಯಕ್ಕೆ ಸಾಮಾಜಿಕ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಆಗುವುದಿಲ್ಲ ಎನ್ನುವುದಂತೂ ದಿಟ. ಈ ಸವಾಲನ್ನು ಮುಂದಿನ ದಿನಗಳಲ್ಲಿ ಸರ್ಕಾರ ಹೇಗೆ ನಿಭಾಯಿಸಲಿದೆ ಎನ್ನುವುದು ಕೂಡ ಕುತೂಹಲದ ಸಂಗತಿಯಾಗಿದೆ.

ತಾತ್ಕಾಲಿಕ ಪರಿಹಾರ ಸೂತ್ರ:

ಜಾತಿ ಮರು ಸಮೀಕ್ಷೆಗೆ ಹೈಕಮಾಂಡ್ ಅಪ್ಪಣೆ ಸಿಕ್ಕಿರುವ ಕಾರಣ, ಡಿಸಿಎಂ ಶಿವಕುಮಾರ್ ನೇತೃತ್ವದಲ್ಲಿ ಪಕ್ಷದೊಳಗಿನ ಹೋರಾಟಕ್ಕೆ ಯಶಸ್ವು ಸಿಕ್ಕಿದೆ. ಮತ್ತೊಂದೆಡೆ ಒಕ್ಕಲಿಗ ಮತ್ತು ಲಿಂಗಾಯಿತ ಸಮುದಾಯಗಳ ಜಂಟಿ ಪ್ರಯತ್ನಕ್ಕೂ ಮನ್ನಣೆ ದೊರೆತಿದೆ.

ಹಾಗಂತ ಇದು ಸಿಎಂ ಸಿದ್ದರಾಮಯ್ಯ ಅವರಿಗೆ ಹಿನ್ನೆಡೆ ಎಂದು ವ್ಯಾಖ್ಯಾನ ಮಾಡಲು ಆಗುವುದಿಲ್ಲ. ಬದಲಿಗೆ ರಾಜಕೀಯ, ಸಾಮಾಜಿಕ ಸಂಘರ್ಷದ ಹೊತ್ತಿನಲ್ಲಿ ಎಲ್ಲರಿಗೂ ಸಮಾಧಾನವಾಗುವ ಪರಿಹಾರ ಸೂತ್ರ ಸಿಕ್ಕಿದೆ ಎನ್ನುವಷ್ಟೇ ಸದ್ಯಕ್ಕಿರುವ ಸಮಾಧಾನ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net