ಮುಡಾ ಹಗರಣ ಮುಚ್ಚಿ ಹಾಕಲು ಜಾತಿಗಣತಿ ನಾಟಕ; ಕುಮಾರಸ್ವಾಮಿ ಆರೋಪ

HD Kumaraswamy
Published on

ಬೆಂಗಳೂರು: ಮುಡಾ ಹಗರಣದಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಜಾತಿಗಣತಿ ವಿಷಯವನ್ನು ಮುನ್ನಲೆಗೆ ತಂದು ನಾಟಕ ಆಡಲಾಗುತ್ತಿದೆ ಎಂದು ಕೇಂದ್ರದ ಭಾರೀ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ದೂರಿದ್ದಾರೆ. ತಮ್ಮ ನಿವಾಸದ ಸೋಮವಾರ ಬೆಳಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸರ್ಕಾರದ ವಿರುದ್ಧ ಗುರುತರ ಆರೋಪಗಳು ಕೇಳಿ ಬಂದಾಗಲೆಲ್ಲ ಜನರ ಗಮನ ಬೇರೆಡೆಗೆ ಹೊರಳಿಸಲು ತಂತ್ರಗಾರಿಕೆ ಮಾಡುತ್ತಿದ್ದಾರೆ. ಈಗ ಮುಡಾ ಹಗರಣದ ಮೂಲಕ ಜನರ ದಿಕ್ಕು ತಪ್ಪಿಸಲು ಜಾತಿಗಣತಿಯ ವಿಚಾರವನ್ನು ಮುಂದಕ್ಕೆ ತಂದಿದೆ ಎಂದು ಆರೋಪಿಸಿದರು.

ಚುನಾವಣೆಗೆ ಮೊದಲೇ ವರದಿ ಕೊಟ್ಟಿದ್ದರು!

ಕಾಂತರಾಜು ಆಯೋಗ ರಚನೆ ಮಾಡಿದ್ದು 10 ವರ್ಷಗಳ ಹಿಂದೆ. ಈಗ ಅ ವರದಿಗೆ 10 ವರ್ಷ ಆಗಿ ಹೋಗಿದೆ. 10 ವರ್ಷಗಳಲ್ಲಿ ಅನೇಕ ಬೆಳವಣಿಗೆಗಳು ಆಗಿವೆ. ಹಳೆಯ ಜಾತಿಗಣತಿ ವರದಿಯನ್ನು ಇಷ್ಟು ದಿನ ಯಾಕೆ ಬಿಡುಗಡೆ ಮಾಡಿರಲಿಲ್ಲ? ಎಂದು ಪ್ರಶ್ನಿಸಿದರು.

ಕುಮಾರಸ್ವಾಮಿ ಜಾತಿಗಣತಿ ವರದಿಯನ್ನು ಬಿಡುಗಡೆ ಮಾಡಲು ಬಿಡಲಿಲ್ಲ ಎಂದು ನನ್ನ ಮೇಲೆ ಆರೋಪ ಮಾಡುತ್ತಲೇ ಇದ್ದಾರೆ. ಲೋಕಸಭೆ ಚುನಾವಣೆಗೆ ಮೊದಲೇ ಸಿದ್ದರಾಮಯ್ಯ ಅವರ ಕೈಗೆ ಜಾತಿಗಣತಿ ವರದಿ ಕೊಡಲಾಗಿದೆ ಅಲ್ಲವೇ? ಲೋಕಸಭೆ ಚುನಾವಣೆ ಮೊದಲೇ ವರದಿ ಪಡೆದರೂ ಇಷ್ಟು ದಿನಗಳವರೆಗೂ ಅದರ ಬಗ್ಗೆ ಸದ್ದೇ ಇರಲಿಲ್ಲ, ಯಾಕೆ? ಎಂದು ಕೇಳಿದರು.

ಮುಡಾ ಅಕ್ರಮದಿಂದ ರಕ್ಷಣೆ ಪಡೆಯಲು ಯತ್ನ

ಈಗ ಮುಡಾ ಹಗರಣದ ಹಿನ್ನಲೆಯಲ್ಲಿ ಜನರನ್ನು ದಾರಿ ತಪ್ಪಿಸಲು ಮತ್ತು ಜಾತಿಗಣತಿ ವರದಿ ಇಟ್ಟುಕೊಂಡು ಮೂಡಾ ಅಕ್ರಮದಿಂದ ರಕ್ಷಣೆ ಪಡೆಯುವ ಕೆಲಸಕ್ಕೆ ಹೊರಟಿದ್ದಾರೆ. 10 ವರ್ಷಗಳ ಹಿಂದೆ ಮಾಡಿರುವ ಈ ಜಾತಿಗಣತಿ ವರದಿಯಿಂದ ಯಾವುದೇ ಸಮುದಾಯಕ್ಕೆ ಅನುಕೂಲಗಳು ಆಗುವುದಿಲ್ಲ. ಮೂಡಾ ಹಗರಣವನ್ನು ಮರೆಮಾಚಿಕೊಳ್ಳಲು ಈಗ ಜಾತಿಗಣತಿ ವಿಷಯವನ್ನು ಮುನ್ನೆಲೆಗೆ ತಂದಿದ್ದಾರೆ. ಇಷ್ಟು ದಿನ ಇಲ್ಲದೇ ಇರೋದು ಈಗ ಯಾಕೆ ಮುನ್ನಲೆಗೆ ತರಲು ಹೊರಟಿದ್ದಾರೆ ಎಂದು ಆರೋಪ ಮಾಡಿದರು.

ಜಾತಿಗಣತಿ ವರದಿ ಜಾರಿ ಮಾಡದಂತೆ ಸಿದ್ದರಾಮಯ್ಯ ಅವರನ್ನು ಹಿಡಿದುಕೊಂಡವರು ಯಾರು? ನನ್ನ ಬಗ್ಗೆ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರು ವರದಿ ಸ್ವೀಕಾರ ಮಾಡಿ ಎಷ್ಟು ದಿನವಾಯಿತು? ಇನ್ನೂ ಯಾಕೆ ಇಟ್ಟುಕೊಂಡು ಕೂತಿದ್ದಾರೆ? ಇಷ್ಟು ದಿನ ಸದ್ದುಗದ್ದಲ ಇರಲಿಲ್ಲ. ಈಗ ಈ ವಿಷಯ ಇಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ. ಇವರು ಮಾಡಿರುವ ತಪ್ಪುಗಳನ್ನು ಮುಚ್ಚಿಕೊಳ್ಳೋಕೆ ಜಾತಿಯಂತಹ ವಿಷಯಗಳನ್ನು ಮುಂದೆ ಬಿಟ್ಟುಕೊಂಡು ಹೊರಟಿದ್ದಾರೆ ಎಂದು ಸರ್ಕಾರದ ವಿರುದ್ಧ ಕುಮಾರಸ್ವಾಮಿ ಕಿಡಿಕಾರಿದರು.

ಚುನಾವಣೆಗೆ ಹೋಗಿ

ಜಾತಿಗಣತಿ ವರದಿ ಇಟ್ಟುಕೊಂಡು ರಾಜಕೀಯ ಮಾಡುತ್ತೀರಿ, ಈ ವಿಷಯ ಇಟ್ಟುಕೊಂಡು ಚುನಾವಣೆ ಹೋಗಿ ನೋಡೋಣ ಎಂದು ಕಾಂಗ್ರೆಸ್ ನಾಯಕರಿಗೆ ಸವಾಲು ಹಾಕಿದರು.

ಸರ್ಕಾರ ಹೋದರೆ ಹೋಗಲಿ, ಜಾತಿಗಣತಿ ಜಾರಿ ಮಾಡಿ ಎಂಬ ಬಿ.ಕೆ. ಹರಿಪ್ರಸಾದ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಜಾತಿಗಣತಿ ವಿಷಯ ಇಟ್ಟುಕೊಂಡು ಸರ್ಕಾರ ವಿಸರ್ಜನೆ ಮಾಡಿ ಚುನಾವಣೆಗೆ ಹೋಗಿ ನೋಡೋಣ. ಹರಿಪ್ರಸಾದ್ ಅವರು ಈ ರೀತಿ ಹೇಳುವುದು ಏನಿದೆ? ಅದರ ಬದಲು ವಿಧಾನಸಭೆಯನ್ನು ವಿಸರ್ಜನೆ ಮಾಡಿ ಚುನಾವಣೆಗೆ ಹೋಗಬಹುದಲ್ಲವೆ? ಎಂದು ಕುಮಾರಸ್ವಾಮಿ ಕೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net