ಜಾತಿ ಲೆಕ್ಕಾಚಾರ, ಬಿಜೆಪಿ ಚುನಾವಣಾ ತಂತ್ರ: ಜಗ್ಗೇಶ್​ಗೆ ಬಂಪರ್, ರಾಮಮೂರ್ತಿಗೆ ಅರ್ಧಚಂದ್ರ | ಪ್ರಬಲ ಒಕ್ಕಲಿಗ ಸಮುದಾಯಕ್ಕೂ ಸಮಾಧಾನ

RJ 1
ನಿರ್ಮಲಾ ಸೀತಾರಾಮನ್, ಜಗ್ಗೇಶ್
Published on

ಬೆಂಗಳೂರು: ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯಲಿರುವ ಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ವಿಷಯದಲ್ಲಿ ಬಿಜೆಪಿ ಎರಡು ಅಚ್ಚರಿ ನಿರ್ಧಾರಗಳನ್ನು ತೆಗೆದುಕೊಂಡಿದೆ. ಪಕ್ಷದ ರಾಜ್ಯ ಕೋರ್ ಕಮಿಟಿ ಕಳುಹಿಸಿದ್ದ ಪಟ್ಟಿಯಲ್ಲಿ ಇಲ್ಲದ ಹೆಸರು ಸೇರಿಸಿ, ಮತ್ತೊಂದು ಹೆಸರು ಕೈಬಿಡುವ ಮೂಲಕ ರಾಜ್ಯದ ಶಿಫಾರಸಿಗೆ ಮನ್ನಣೆಯಿಲ್ಲ ಎನ್ನುವುದನ್ನು ದೃಢಪಡಿಸಿದ್ದಾರೆ. ಪಕ್ಷದ ವರಿಷ್ಠರ ಈ ನಡೆಯಲ್ಲಿ ಎಲ್ಲ ಜಾತಿಗಳಿಗೆ ಆದ್ಯತೆ ನೀಡಲಾಗುವುದು ಎಂಬ ಸಂದೇಶ ರವಾನೆ, ಮುಂಬರುವ ಚುನಾವಣೆಗಳ ತಂತ್ರಗಾರಿಕೆಯಿದೆ ಎಂದು ಮೂಲಗಳು ವಿಶ್ಲೇಷಿಸಿವೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮಣೆ ಹಾಕಲಾಗಿದ್ದು, ಕರ್ನಾಟಕದಿಂದ ಎರಡನೇ ಬಾರಿ ರಾಜ್ಯಸಭೆ ಪ್ರವೇಶಕ್ಕೆ ವೇದಿಕೆ ಸಜ್ಜಾಗಿದೆ. ಉತ್ತರಪ್ರದೇಶದ 11 ಸದಸ್ಯರು ನಿವೃತ್ತರಾಗಲಿದ್ದು, ಸಂಖ್ಯಾಬಲದ ಪ್ರಕಾರ ಪಕ್ಷಕ್ಕೆ ಅತಿಹೆಚ್ಚು ಸ್ಥಾನಗಳು ಲಭ್ಯವಾಗುವ ಕಾರಣ ನಿರ್ಮಲಾ ಸೀತಾರಾಮನ್ ಅಲ್ಲಿಂದ ಆಯ್ಕೆಯಾಗಲಿದ್ದಾರೆ. ರಾಜ್ಯದ ಸ್ಥಾನವನ್ನು ರಾಜ್ಯದವರಿಗೇ ಬಿಟ್ಟುಕೊಡಲಿದ್ದು, ಇತರೆ ಹಿಂದುಳಿದ ವರ್ಗಗಳ ಮಹಿಳೆ ಮತ್ತು ಹೊಸ ಮುಖಕ್ಕೆ ಮಣೆ ಹಾಕಲಿದ್ದಾರೆ ಎಂಬ ಲೆಕ್ಕಾಚಾರ ತಲೆ ಕೆಳಗಾಗಿವೆ.

ಮೂಡದ ಒಮ್ಮತ: ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಗೀತಾ ವಿವೇಕಾನಂದ, ಕಾರ್ಯದರ್ಶಿ ಶ್ಯಾಮಲಾ ಕುಂದರ್ ಹೆಸರುಗಳು ಚಾಲ್ತಿಯಲ್ಲಿದ್ದವು. ವರಿಷ್ಠರಮಟ್ಟದಲ್ಲಿ ಈ ಬಗ್ಗೆ ಒಮ್ಮತ ಮೂಡದ ಕಾರಣ ನಿರ್ಮಲಾ ಸೀತಾರಾಮನ್ ಹೆಸರು ಅಂತಿಮವಾಯಿತು ಎಂದು ಮೂಲಗಳು ಹೇಳಿವೆ. ವಿಧಾನ ಪರಿಷತ್ ಚುನಾವಣೆ ಟಿಕೆಟ್​ಗೆ ಬೇಡಿಕೆಯಿಟ್ಟಿದ್ದ ನಟ ಜಗ್ಗೇಶ್​ಗೆ ದೆಹಲಿ ನಾಯಕರು ಬಂಪರ್ ಕೊಡುಗೆ ನೀಡಿದ್ದು, ರಾಜ್ಯಸಭೆ ಅಭ್ಯರ್ಥಿಯನ್ನಾಗಿಸಿ ಪಕ್ಷದ ರಾಜ್ಯ ನಾಯಕರನ್ನು ಮತ್ತೆ ಅಚ್ಚರಿ ಮಡುವಿಗೆ ತಳ್ಳಿದ್ದಾರೆ. ಕಾಂಗ್ರೆಸ್​ನಿಂದ ವಲಸೆ ಬಂದಿದ್ದ ಉದ್ಯಮಿ ಕೆ.ಸಿ.ರಾಮಮೂರ್ತಿಗೆ ಅರ್ಧಚಂದ್ರ ಬಿದ್ದಿದೆ ಎಂದು ಮೇಲ್ನೋಟಕ್ಕೆ ಬಿಂಬಿತವಾಗಿದ್ದು, ಟಿಕೆಟ್ ನಿರಾಕರಿಸಿದ್ದರ ಹಿಂದೆ 2024ರ ಲೋಕಸಭಾ ಚುನಾವಣೆ ತಂತ್ರಗಾರಿಕೆಯಿದೆ. ಬೆಂಗಳೂರು ಉತ್ತರ ಅಥವಾ ಚಿಕ್ಕಬಳ್ಳಾಪುರ ಲೋಕಸಭೆ ಚುನಾವಣಾ ಕಣಕ್ಕೆ ಇಳಿಸಿ, ಪ್ರಬಲ ರೆಡ್ಡಿ ಸಮುದಾಯವನ್ನು ಸೆಳೆಯುವ ಚಿಂತನೆ ನಡೆಸಿದ್ದು, ರಾಮಮೂರ್ತಿಗೆ ತಿಳಿಸಿ ಒಪ್ಪಿಸಿದ್ದಾರೆ ಎಂದು ತಿಳಿದಿದೆ.

ಸಂಘಟನೆಗೂ ಪ್ರಾಶಸ್ಱ: ಒಮ್ಮೆ ವಿಧಾನಸಭೆ, ಮತ್ತೊಮ್ಮೆ ವಿಧಾನ ಪರಿಷತ್ ಸದಸ್ಯ. 149 ಚಲನಚಿತ್ರಗಳಲ್ಲಿ ನಟಿಸಿರುವ ಜಗ್ಗೇಶ್ ಅವರ ಆಯ್ಕೆಗೆ ಬಹು ಆಯಾಮಗಳಿವೆ. ಸಂಘಟನೆ, ಚಲನಚಿತ್ರರಂಗ ಹಾಗೂ ಒಕ್ಕಲಿಗ (ಗಂಗಟ್ಕರ್) ಸಮುದಾಯ ಪ್ರಾಶಸ್ಱವನ್ನು ಆ ಮೂಲಕ ತುಂಬಿಕೊಟ್ಟಿದ್ದು, ಪ್ರಭಾವಿ ಒಕ್ಕಲಿರನ್ನು ಸಮಾಧಾನಪಡಿಸುವ ಪ್ರಯತ್ನ ಇದಾಗಿದೆ. ವಿಧಾನಸಭೆಯಿಂದ ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷಕ್ಕೆ ನಾಲ್ಕು ಸ್ಥಾನಗಳನ್ನು ಲಿಂಗಾಯತ, ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಹಂಚಿಕೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಕೆಲವು ಹೆಸರುಗಳು ಚರ್ಚೆಯಾದರೂ ಸಂಘಟನೆಗೆ ಪ್ರಾತಿನಿಧ್ಯವಾಗಿ ಜಗ್ಗೇಶ್ ಹೆಸರು ಅಂತಿಮವಾಯಿತು ಎಂದು ಮೂಲಗಳು ತಿಳಿಸಿವೆ.

ಯಶಸ್ವೀ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ನಟ ಜಗ್ಗೇಶ್ ಮೂಲಕ ಚಲಚಿತ್ರರಂಗದ ಜತೆಗೆ ಒಕ್ಕಲಿಗ ಸಮುದಾಯಕ್ಕೂ ಆದ್ಯತೆ ನೀಡಲಾಗಿದೆ. ಒಳ್ಳೆಯ ಆಯ್ಕೆಯಿಂದ ರಾಜ್ಯದಲ್ಲಿ ಪಕ್ಷಕ್ಕೆ ಬಲ ತುಂಬಿದ್ದು, ಮುಂಬರುವ ಚುನಾವಣೆಗೆ ಅನುಕೂಲವಾಗಲಿದೆ. | ಎನ್.ರವಿಕುಮಾರ್ ಎಂಎಲ್ಸಿ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ

16 ಅಭ್ಯರ್ಥಿಗಳನ್ನು ಘೋಷಿಸಿದ ಬಿಜೆಪಿ

ನವದೆಹಲಿ: ರಾಜ್ಯಸಭೆಗೆ 15 ರಾಜ್ಯಗಳಿಂದ 57 ಸ್ಥಾನಗಳಿಗೆ ಜೂನ್ 10ರಂದು ನಡೆಯುವ ಚುನಾವಣೆಗೆ ಬಿಜೆಪಿ 16 ಅಭ್ಯರ್ಥಿಗಳ ಪಟ್ಟಿಯನ್ನು ಭಾನುವಾರ ಬಿಡುಗಡೆ ಮಾಡಿದೆ. ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್ (ಕರ್ನಾಟಕ), ಪಿಯೂಷ್ ಗೋಯಲ್ (ಮಹಾರಾಷ್ಟ್ರ), ಮುಖಂಡರಾದ ಲಕ್ಷ್ಮಿಕಾಂತ್ ವಾಜಪೇಯಿ, ರಾಧಾ ಮೋಹನ್ ಅಗರ್ವಾಲ್, ಸುರೇಂದ್ರ ನಾಗರ್, ಬಾಬುರಾಮ್ ನಿಷಾದ್, ದರ್ಶನಾ ಸಿಂಗ್, ಸಂಗೀತಾ ಯಾದವ್ (ಉತ್ತರ ಪ್ರದೇಶ), ಅನಿಲ್ ಬೋಂಡೆ (ಮಹಾರಾಷ್ಟ್ರ), ಘನಶ್ಯಾಮ್ ತಿವಾರಿ (ರಾಜಸ್ಥಾನ), ಕಲ್ಪನಾ ಸೈನಿ (ಉತ್ತರಾಖಂಡ), ಸತೀಶ್ ಚಂದ್ರ ದುಬೆ ಮತ್ತು ಶಂಭು ಶರಣ ಪಟೇಲ್ (ಬಿಹಾರ), ಕಿಶನ್ ಲಾಲ್ ಪನ್ವಾರ್ (ಹರಿಯಾಣ), ಕವಿತಾ ಪಾಟಿದಾರ್ (ಮಧ್ಯಪ್ರದೇಶ), ಜಗ್ಗೇಶ್ (ಕರ್ನಾಟಕ). ಈ ಚುನಾವಣೆಯಲ್ಲಿ ಗೆಲ್ಲುವುದು ಮುಂದಿನ ಜುಲೈನಲ್ಲಿ ನಡೆಯುವ ರಾಷ್ಟ್ರಪತಿ ಚುನಾವಣೆಗೆ ಬಹಳ ಮಹತ್ವದ್ದಾಗಿದೆ.

ಮಾಜಿ ಶಾಸಕನಿಗೆ ಒಲಿದ ಅದೃಷ್ಟ

ತುಮಕೂರು: ರಾಜ್ಯಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಘೊಷಣೆ ಯಾಗಿರುವ ಮಾಜಿ ಶಾಸಕ, ನಟ ಜಗ್ಗೇಶ್ 2008ರಲ್ಲಿ ಕಾಂಗ್ರೆಸ್​ನಿಂದ ಶಾಸಕರಾಗಿದ್ದರು. ತುರುವೇಕೆರೆ ಕ್ಷೇತ್ರದಿಂದ ಶಾಸಕರಾಗಿದ್ದ ಜಗ್ಗೇಶ್ 2004ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ನಿಂದ ಸ್ಪರ್ಧಿಸಿ ಸೋತಿದ್ದರು. 2008ರಲ್ಲಿ ಗೆದ್ದ 15 ದಿನಕ್ಕೆ ಆಪರೇಷನ್ ಕಮಲಕ್ಕೆ ಒಳಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ಬಿಎಸ್​ಎಂಟಿಸಿ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದರು. ವಿಧಾನ ಪರಿಷತ್​ಗೂ ನಾಮನಿರ್ದೇಶನಗೊಂಡಿದ್ದರು. 2018ರಲ್ಲಿ ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋತಿದ್ದರು. ತುರುವೇಕೆರೆ ತಾಲೂಕು ಮಾಯಸಂದ್ರದ ಸಮೀಪದ ಆನಡಗು(ಜಡೆಯಾ) ಗ್ರಾಮದ ಜಗ್ಗೇಶ್, ಕನ್ನಡ ಚಿತ್ರರಂಗದಲ್ಲಿ ಖ್ಯಾತಿ ಗಳಿಸಿರುವ ನಟ. ತುಮಕೂರು ಜಿಲ್ಲೆಯಲ್ಲಿ ಪ್ರಭಾವಿ ಒಕ್ಕಲಿಗ ಮುಖಂಡ ಎನಿಸಿರುವ ಎಸ್.ಪಿ.ಮುದ್ದಹನುಮೇಗೌಡರನ್ನು ಕಾಂಗ್ರೆಸ್ ಲೋಕಸಭೆಗೂ ಟಿಕೆಟ್ ನೀಡದೆ, ರಾಜ್ಯಸಭೆಗೂ ಕಳುಹಿಸಲು ಮೀನಮೇಷ ಎಣಿಸುತ್ತಿರುವ ನಡುವೆಯೇ ಜಗ್ಗೇಶ್​ಗೆ ಬಿಜೆಪಿ ಮಣೆ ಹಾಕಿರುವುದು ಮುಂಬರುವ ಚುನಾವಣೆಯಲ್ಲಿ ಬಹುಸಂಖ್ಯಾತ ಸಮುದಾಯದ ಮತ ಸೆಳೆಯುವ ತಂತ್ರ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.

ಕುದುರೆ ವ್ಯಾಪಾರ ಕೆನೆತ

ಬೆಂಗಳೂರು: ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಮಂಗಳವಾರ ಕೊನೆಯ ದಿನವಾಗಿದ್ದು, ರಾಜ್ಯದ ರಾಜಕೀಯ ಅಂಗಳದಲ್ಲಿ ಮತ್ತೆ ‘ಕುದುರೆ ವ್ಯಾಪಾರ’ದ ಕೆನೆತ ಜೋರಾಗಿದೆ. ಉಳ್ಳವರು, ಬಲಾಢ್ಯರಿಗೆ ಮಣೆ ಹಾಕುವ ಬದಲು ರಾಜ್ಯಸಭೆ ಘನತೆ-ಗೌರವ ಹಾಗೂ ನಾಡಿನ ಹಿರಿಮೆ-ಗರಿಮೆಗೆ ತಕ್ಕುನಾದ, ಸಮರ್ಥ ವ್ಯಕ್ತಿಯನ್ನು ಆಯ್ಕೆ ಮಾಡಬೇಕೆಂಬ ಕೂಗೆದ್ದಿದೆ. ಮುಖ್ಯಮಂತ್ರಿ, ವಿಧಾನಮಂಡಲದ ಪ್ರತಿಪಕ್ಷ ನಾಯಕರು, ಮೂರು ಪಕ್ಷಗಳ ಪ್ರಮುಖರಿಗೆ ವಿವಿಧ ವಲಯಗಳ ಪ್ರಾಜ್ಞರು ನೇರವಾಗಿ ಪತ್ರ ಬರೆದು ಮೂರು ಪಕ್ಷಗಳನ್ನು ಸಾಕ್ಷಿಪ್ರಜ್ಞೆಯನ್ನು ಓರೆಗೆ ಹಚ್ಚಿದ್ದಾರೆ. ಈ ಮಧ್ಯೆ ರಾಜ್ಯಸಭೆ ಸ್ಥಾನದ ಮೇಲೆ ಕಣ್ಣಿಟ್ಟವರ ಪಟ್ಟಿಯಲ್ಲಿ ಕುಪೇಂದ್ರರೆಡ್ಡಿ ಮತ್ತು ಲೆಹರ್​ಸಿಂಗ್ ಸಿರೋಯಿ ಹೆಸರುಗಳು ಸೇರಿದ್ದು, ಪ್ರಮುಖ ಪಕ್ಷಗಳ ಬಳಿಗೆ ದಂಡಯಾತ್ರೆ ಶುರುವಿಟ್ಟುಕೊಂಡಿದ್ದಾರೆ.

ಕುಪೇಂದ್ರರೆಡ್ಡಿ ಜೆಡಿಎಸ್ ಸಂಭಾವ್ಯ ಅಭ್ಯರ್ಥಿ ಎಂದು ಬಿಂಬಿತವಾಗಿದ್ದು, ಕಾಂಗ್ರೆಸ್ ಪಕ್ಷದ ಹಲವು ನಾಯಕರನ್ನು ಭಾನುವಾರ ಭೇಟಿಯಾಗಿ ರ್ಚಚಿಸಿರುವುದು ಕುತೂಹಲ ಕೆರಳಿಸಿದೆ. ಆಡಳಿತ ಬಿಜೆಪಿ ರಾಜ್ಯ ಕೋರ್ ಕಮಿಟಿ ಶಿಫಾರಸು ಮಾಡಿದ ಪಟ್ಟಿಯಲ್ಲಿ ಲೆಹರ್​ಸಿಂಗ್ ಹೆಸರಿದ್ದು, ಅವರೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದರು ಎನ್ನಲಾಗುತ್ತಿದೆ. ಮೂರು ಪ್ರಮುಖ ರಾಜಕೀಯ ಪಕ್ಷಗಳ ನಿಲುವು-ಒಲವು ಸದ್ಯಕ್ಕೆ ಅಸ್ಪಷ್ಟವಾಗಿದೆ. ಆದರೆ ಹೆಚ್ಚುವರಿ ಮತಗಳನ್ನು ಯಾವ ರೀತಿ ‘ಸದ್ಬಳಕೆ’ ಮಾಡಿಕೊಳ್ಳಲಿದ್ದಾರೆ ಎನ್ನುವುದರತ್ತ ರಾಜ್ಯ ‘ನಿಗಾ’ ನೆಟ್ಟಿದೆ. ಮೂರು ಪಕ್ಷಗಳು ಆಕ್ಷೇಪ, ಅಪವಾದದಿಂದ ಮುಕ್ತವಾಗಲು ಆಂತರಿಕವಾಗಿ ಹೊಂದಾಣಿಕೆ ಮಾಡಿಕೊಳ್ಳುವ ಸಂಶಯವೂ ವ್ಯಕ್ತವಾಗಿದೆ. ನಾಲ್ಕು ಅಭ್ಯರ್ಥಿಗಳು ಮಾತ್ರ ಕಣಕ್ಕಿಳಿದರೆ ಅವಿರೋಧವಾಗಿ ಆಯ್ಕೆಯಾಗಲಿದ್ದು, ಮೂವರಿಗೆ ಮತಗಳ ಕೋಟಾ ಲೆಕ್ಕಾಚಾರ ಮತ್ತೊಬ್ಬರಿಗೆ ಮೂರು ಪಕ್ಷಗಳದ್ದು ಮೌನಂ ಸಮ್ಮತಿ ಲಕ್ಷಣ ಆದರೂ ಅಚ್ಚರಿಯಿಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.

ನಿರ್ಮಲಾ, ಜಗ್ಗೇಶ್​ಗೆ ಜಾಕ್​ಪಾಟ್; ಕಾಂಗ್ರೆಸ್​ನಿಂದ ಜೈರಾಮ್ ರಮೇಶ್, ಜೆಡಿಎಸ್​ನಿಂದ ಕುಪೇಂದ್ರ ರೆಡ್ಡಿ

ಜೈರಾಂ ರಮೇಶ್, ಕುಪೇಂದ್ರ ರೆಡ್ಡಿ

ಬೆಂಗಳೂರು: ರಾಜ್ಯದಿಂದ ರಾಜ್ಯಸಭೆಯ 4 ಸ್ಥಾನಗಳಿಗೆ ಚುನಾವಣೆ ಕಣ ಬಹುತೇಕ ಅಂತಿಮಗೊಂಡಿದ್ದು, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಚಿತ್ರ ನಟ ಜಗ್ಗೇಶ್, ಕೇಂದ್ರದ ಮಾಜಿ ಸಚಿವ ಜೈರಾಮ್ ರಮೇಶ್ ಹಾಗೂ ಉದ್ಯಮಿ ಕುಪೇಂದ್ರ ರೆಡ್ಡಿ ಅಭ್ಯರ್ಥಿಗಳಾಗಲಿದ್ದಾರೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಉತ್ತರ ಪ್ರದೇಶದಿಂದ ರಾಜ್ಯಸಭೆ ಪ್ರವೇಶಿಸಲಿದ್ದು, ಒಬಿಸಿ ಮಹಿಳೆ ಹಾಗೂ ಹೊಸ ಮುಖಕ್ಕೆ ಮಣೆಹಾಕಲಿದ್ದಾರೆ ಎನ್ನಲಾಗಿತ್ತು. ಬದಲಿಗೆ ಹಾಲಿ ಸದಸ್ಯ ಕೆ.ಸಿ. ರಾಮಮೂರ್ತಿಗೆ ಕೊಕ್ ನೀಡಿ ನಟ ಜಗ್ಗೇಶ್​ಗೆ ಟಿಕೆಟ್ ನೀಡುವ ಮೂಲಕ ಜಾತಿವಾರು ಲೆಕ್ಕಾಚಾರ ಹಾಕಿದ್ದಾರೆ. ಒಕ್ಕಲಿಗ (ಗಂಗಟ್ಕರ್) ಸಮುದಾಯದ ಜಗ್ಗೇಶ್​ಗೆ ಟಿಕೆಟ್ ನೀಡಿ, ಪರಿಷತ್ ಚುನಾವಣೆ ಯಲ್ಲಿ ಪ್ರಾಶಸ್ಱ ನೀಡಿಲ್ಲವೆಂಬ ಕೊರಗು ನಿವಾರಿಸಿದೆ. ಜತೆಗೆ, ಮುಂಬರುವ ಚುನಾವಣೆಗಳ ದೃಷ್ಟಿಯಿಂದ ಪ್ರಬಲ ಒಕ್ಕಲಿಗ ಸಮುದಾಯವನ್ನು ತೃಪ್ತಿಪಡಿಸುವ ಕಸರತ್ತು ನಡೆಸಿದಂತಿದೆ.

ಮತ್ತೊಬ್ಬ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ಆಸೆ ಕೈಬಿಟ್ಟಿರುವ ಸಂದೇಶ ನೀಡಿದ್ದು, ಅಂತಿಮ ಗಳಿಗೆಯಲ್ಲಿ ಏನು ಬೇಕಾದರೂ ಆಗಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ತಲಾ 45 ಮತಗಳ ಕೋಟಾದಂತೆ ಬಿಜೆಪಿಯಿಂದ ಇಬ್ಬರ ಆಯ್ಕೆ ನಿರಾಯಾಸ. ಪರಿಸ್ಥಿತಿ ನೋಡಿಕೊಂಡು ಮನಸ್ಸು ಬದಲಿಸಿ ಹೆಚ್ಚುವರಿ 32 ಮತಗಳ ಬಳಕೆಗೆ ಪ್ರಯತ್ನಿಸುವ ಸಂಭವವಿದೆ.

ಕೈಪಡೆಗಿರುವ ಸಂಖ್ಯಾಬಲದ ಪ್ರಕಾರ ಒಬ್ಬ ಅಭ್ಯರ್ಥಿ ಆಯ್ಕೆ ಸಲೀಸು. ಹೆಚ್ಚುವರಿ 24 ಮತಗಳ ಮೇಲೆ ಜೆಡಿಎಸ್ ಕಣ್ಣಿಟ್ಟಿದೆ ಎಂದು ಹೇಳಲಾಗುತ್ತಿದೆ. ಕೈಪಕ್ಷ ಸಾಥ್ ನೀಡಲಿದೆ ಎಂಬ ಲೆಕ್ಕಾಚಾರದಲ್ಲಿ 32 ಮತಗಳ ಬಲವುಳ್ಳ (13 ಮತಗಳ ಕೊರತೆ) ಜೆಡಿಎಸ್ ನಾಯಕರು ಅಭ್ಯರ್ಥಿ ಕಣಕ್ಕಿ ಳಿಸಲು ನಿರ್ಧರಿಸಿದ್ದಾರೆ. ಕುಪೇಂದ್ರರೆಡ್ಡಿ ಹೆಸರು ಸೋಮವಾರ ಘೋಷಣೆಯಾಗಲಿದೆ. 4 ಅಭ್ಯರ್ಥಿಗಳಿದ್ದರೆ ಅವಿರೋಧ ಆಯ್ಕೆಯಾಗಲಿದೆ. ಮಂಗಳವಾರ ಮಧ್ಯಾಹ್ನದೊಳಗೆ ರಾಜಕೀಯ ವಿಪ್ಲವ ನಡೆದು 5ನೇ ಅಭ್ಯರ್ಥಿ ಕಣಕ್ಕಿಳಿದರೆ ಚುನಾವಣೆ ಕಣ ರಂಗೇರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net