

ಸೊರಬ: ಧರ್ಮ, ಜಾತಿ ಮತ್ತು ಪಕ್ಷ ವ್ಯಸನಿಗಳಿಂದ ದೇಶಕ್ಕೆ ಅಪಾಯವೇ ಜಾಸ್ತಿ. ಅವರಿಂದ ದೇಶಕ್ಕೆ ಭವಿಷ್ಯವಿಲ್ಲ ಎಂದು ಮುಖಂಡ ತೇಜಸ್ವಿ ಪಟೇಲ್ ಅಭಿಪ್ರಾಯಪಟ್ಟರು.
ವಿಶ್ವಮಾನವ ಶಕ್ತಿ ಸತ್ಯ ಶೋಧಕ ಸಮಾಜದಿಂದ ಪಟ್ಟಣದಲ್ಲಿ ಭಾನುವಾರ ಏರ್ಪಡಿಸಿದ್ದ 8ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಹಾಗೂ ಸಂಸ್ಥೆಯಿಂದ ಮಾಜಿ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಅವರಿಗೆ ಮರಣೋತ್ತರವಾಗಿ ನೀಡಿದ ನವಕರ್ನಾಟಕ ನಿರ್ಮಾಪಕ ರತ್ನ ಪುರಸ್ಕಾರ ಸ್ವೀಕರಿಸಿ ಮಾತನಾಡಿದರು.
ಯೋಗ್ಯ ವ್ಯಕ್ತಿಗೆ ಮತ ಹಾಕಿದರೆ ದೇಶ ಸುಭದ್ರವಾಗಿರುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರನ್ನು ಒಳಗೊಂಡು ಯೋಜನೆ ರೂಪಿಸಿದರೆ ಭಾರತದ ಆರ್ಥಿಕತೆ ಹೆಚ್ಚಾಗುತ್ತದೆ. ಶ್ರಮಿಕ, ರೈತ, ಮಾಲೀಕರು ಮಧ್ಯೆ ಅಂತರ ಕಡಿಮೆಯಾದರೆ ಆರ್ಥಿಕತೆ ವೃದ್ಧಿಸುತ್ತದೆ ಎಂದು ವಿಶ್ಲೇಷಿಸಿದರು.
ಮಾಜಿ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಅವರು ಸಂಬಂಧಿಕರನ್ನು ರಾಜಕಾರಣದಲ್ಲಿ ಬೆಳೆಸಲಿಲ್ಲ. ಜನರು ಬಯಸುವ ವ್ಯಕ್ತಿ ರಾಜಕಾರಣದಲ್ಲಿ ಬೆಳೆಯಬೇಕು ಎನ್ನುವ ಉದ್ದೇಶ ಅವರದಾಗಿತ್ತು. ಗೇಣಿದಾರರ ಪರ ಚಿಂತನೆ ಮಾಡಿದ ಅವರು ಗೋಪಾಲ ಗೌಡ, ರಾಮಮನೋಹರ ಲೋಹಿಯಾ, ಗಾಂಧೀಜಿ ಅವರನ್ನು ಒಪ್ಪಿಕೊಳ್ಳುತ್ತಲೇ ಅಧಿಕಾರಾವಧಿಯಲ್ಲಿ ತಳ ಸಮುದಾಯದ ಪರ ಆಡಳಿತ ನಡೆಸಿದ್ದರು ಎಂದು ಸ್ಮರಿಸಿದರು.
ಕಸಾಪ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್, ವಿಶ್ವಮಾನವ ಶಕ್ತಿ ಸತ್ಯ ಶೋಧಕ ಸಮಾಜದ ಸಂಚಾಲಕ ಆರ್.ಬಿ.ಚಂದ್ರಪ್ಪ, ಪ್ರಮುಖರಾದ ರಘು ಸ್ವಾದಿ, ಚಂದ್ರಶೇಖರ್ ಚೌಟಿ, ಹನುಮಂತಪ್ಪ, ಕೆ.ಜಿ.ಲೋಲಾಕ್ಷಮ್ಮ, ಟಿ.ಉಮೇಶ್, ನಿವೃತ ಶಿಕ್ಷಕ ಮಧುಸೂದನ್, ಕೃಷ್ಣಾನಂದ, ಪ್ರವೀಣ್, ಸೋಮಪ್ಪ, ಶಿವಾನಂದ ಪಾಣಿ, ಲಕ್ಷ್ಮಣರಾವ್ ಯಂಕೇನ್, ಕೆ.ರೇಣುಕಮ್ಮ ಮಂಜಪ್ಪ, ಮೋಹನ್ ದಾಸ್, ಉಮೇಶ ಪಾಟೀಲ್, ಮಂಜುನಾಥ ಗೌಡ, ಯಶವಂತ್, ಧರ್ಮಪ್ಪ, ಕೆರಿಯಪ್ಪ ಇದ್ದರು.