ರಾಜ್ಯ ಸರ್ಕಾರಿ ನೌಕರರಿಗೆ ಕ್ಯಾಷ್​ಲೆಸ್ ಆರೋಗ್ಯ ಸೇವೆ: ಮಾಸಾಂತ್ಯಕ್ಕೆ ಯೋಜನೆ ಜಾರಿ; ನೌಕರರು, ಅವಲಂಬಿತರು ಸೇರಿ 25 ಲಕ್ಷ ಜನರಿಗೆ ಅನುಕೂಲ

State Employee
Published on

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು

ಕರೊನಾ ಸಂಕಷ್ಟ ಕಾಲದಲ್ಲಿ ರಾಜ್ಯ ಸರ್ಕಾರಿ ನೌಕರರಿಗೊಂದು ಶುಭ ಸುದ್ದಿ ಇದೆ. ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತರಿಗೆ ನಗದು ರಹಿತ ಆರೋಗ್ಯ ಸೇವೆ ನೀಡುವ ಯೋಜನೆ ಈ ತಿಂಗಳ ಕೊನೆಯಲ್ಲಿ ಜಾರಿಗೆ ಬರಲಿದೆ. ಆ ಮೂಲಕ ಮೂರು ದಶಕಗಳ ನೌಕರರ ಹೋರಾಟಕ್ಕೆ ಫಲ ಸಿಗುತ್ತಿದೆ. ರಾಜ್ಯ ಸರ್ಕಾರಿ ನೌಕರರ ಆರೋಗ್ಯ ಯೋಜನೆ ಹೆಸರಿನಲ್ಲಿ ನಗದು ರಹಿತ ಸೇವೆ ನೀಡಲಾಗುತ್ತದೆ. ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತರು ಆಸ್ಪತ್ರೆಗಳಲ್ಲಿ ಒಳ ಅಥವಾ ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದರೆ ಯಾವುದೇ ಹಣ ಪಾವತಿ ಮಾಡುವಂತಿಲ್ಲ. ಈವರೆಗೆ ಹಣ ಪಾವತಿಸಿ ಆರೋಗ್ಯ ಸೇವೆ ಪಡೆದ ಬಳಿಕ ಮರುಪಾವತಿ ಪಡೆಯಬೇಕಾಗಿತ್ತು. ಬಿಬಿಎಂಪಿ ಮತ್ತು ಪೊಲೀಸ್ ಇಲಾಖೆಯಲ್ಲಿ ಮಾತ್ರ ನಗದು ರಹಿತ ಆರೋಗ್ಯ ಸೇವೆ ವ್ಯವಸ್ಥೆ ಇದೆ. ಅದಕ್ಕಿಂತ ಸುಧಾರಿತ ವ್ಯವಸ್ಥೆ ಜಾರಿ ಮಾಡಲಾಗುತ್ತಿದೆ. ಆರ್ಥಿಕ ಇಲಾಖೆ ಅಧಿಕಾರಿಗಳೇವಿಶೇಷ ಗಮನ ನೀಡಿರುವುದರಿಂದ ಯಾವುದೇ ಅಡೆತಡೆ ಇಲ್ಲದೆ ಯೋಜನೆ ಜಾರಿಗೆ ಬರುತ್ತಿದೆ.

ಎರಡು ದಿನದಲ್ಲಿ ವರದಿ: ನೌಕರರ ಹೋರಾಟ, ಸರ್ಕಾರಿ ನೌಕರರ ಸಂಘ ಸಾಕಷ್ಟು ಒತ್ತಡ ತಂದ ಪರಿಣಾಮ ಸರ್ಕಾರ ಒಪ್ಪಿಗೆ ನೀಡಿದೆ. ಸುವರ್ಣ ಆರೋಗ್ಯ ಟ್ರಸ್ಟ್ ಮೂಲಕ ಈ ನೂತನ ವ್ಯವಸ್ಥೆ ಜಾರಿಗೆ ಬರಲಿದೆ. ಟ್ರಸ್ಟ್ ಅಂತಿಮ ವರದಿಯನ್ನು ಆರ್ಥಿಕ ಇಲಾಖೆಗೆ ಎರಡು ದಿನದಲ್ಲಿ ಸಲ್ಲಿಸಲಿದೆ. ನಂತರ ಮುಖ್ಯಮಂತ್ರಿ ಈ ತಿಂಗಳ ಕೊನೆಗೆ ಯೋಜನೆ ಉದ್ಘಾಟಿಸಲಿದ್ದಾರೆ.

ಹೇಗಿರಲಿದೆ ವ್ಯವಸ್ಥೆ?: ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತರು ಸೇರಿ ಒಟ್ಟಾರೆ 25 ಲಕ್ಷ ಜನ ಯೋಜನೆ ಫಲಾನುಭವಿಗಳಾಗಲಿದ್ದಾರೆ. ನೌಕರ ಅವರ ಪತಿ ಅಥವಾ ಪತ್ನಿ, ಮಕ್ಕಳು ಹಾಗೂ ತಂದೆ ಮತ್ತು ತಾಯಿಗೆ ಈ ವ್ಯವಸ್ಥೆಯ ಲಾಭ ಸಿಗಲಿದೆ. ಈಗಾಗಲೆ ಇಷ್ಟು ಜನರ ಡೇಟಾ ಸಂಗ್ರಹ ಕಾರ್ಯ ಮುಕ್ತಾಯವಾಗಿದೆ. ನೌಕರರಿಗೆ ಸರ್ಕಾರದ ವತಿಯಿಂದ ಸ್ಮಾರ್ಟ್ ಕಾರ್ಡ್ ನೀಡಲಾಗುತ್ತದೆ. ಅದನ್ನು ಆಸ್ಪತ್ರೆಯಲ್ಲಿ ನೀಡಿದರೆ ಸಾಕು ಚಿಕಿತ್ಸೆ ಸಿಗಲಿದೆ.

ವೆಚ್ಚ ಎಷ್ಟಾಗುತ್ತದೆ?: ನಗದುರಹಿತ ಆರೋಗ್ಯಸೇವೆ ನೀಡಲು ವಾರ್ಷಿಕ 1200 ಕೋಟಿ ರೂ. ಬೇಕಾಗುವ ಅಂದಾಜಿದೆ. ಈವರೆಗೆ ನೌಕರರು 100 ರೂ. ವೆಚ್ಚ ಮಾಡಿದರೆ ಅದರಲ್ಲಿ 20 ರೂ. ಮಾತ್ರ ಮರು ಪಾವತಿಯಾಗುತ್ತಿತ್ತು. ರಾಜ್ಯ ಸರ್ಕಾರ ವಾರ್ಷಿಕ 200 ಕೋಟಿ ರೂ.ಗಿಂತ ಹೆಚ್ಚು ವೆಚ್ಚ ಮಾಡುತ್ತಿರಲಿಲ್ಲ. ನಗದು ರಹಿತ ವ್ಯವಸ್ಥೆ ಜಾರಿಗೆ ಬಂದರೆ 1200 ಕೋಟಿ ರೂ.ಗಳಷ್ಟು ಬೃಹತ್ ಮೊತ್ತ ವೆಚ್ಚವಾಗುತ್ತದೆ.

ನೌಕರರ ವಂತಿಗೆ ಎಷ್ಟು?: ನೌಕರರು ತಮ್ಮ ಮೂಲ ವೇತನದ ಕನಿಷ್ಠ ಮೊತ್ತದ ಶೇ.1 ಮಾತ್ರ ವಂತಿಗೆಯಾಗಿ ಪಾವತಿಸಬೇಕಾಗುತ್ತದೆ. ಕನಿಷ್ಠ ಮೊತ್ತ ನಿಗದಿ ಮಾಡಿರುವುದರಿಂದ ನೌಕರರ ಹಣ ಉಳಿತಾಯವಾಗುತ್ತದೆ. ನೌಕರರು ನೀಡುವ ಮೊತ್ತ 200 ಕೋಟಿ ರೂ.ಗಳಾಗಬಹುದು. ಸರ್ಕಾರ 1000 ಕೋಟಿ ರೂ. ಪಾವತಿಸಲಿದೆ.

ಎಷ್ಟು ಆಸ್ಪತ್ರೆಗಳು?: ರಾಜ್ಯದಲ್ಲಿ ಸುಮಾರು 800 ಆಸ್ಪತ್ರೆಗಳನ್ನು ಈ ಯೋಜನೆಯ ಸೌಲಭ್ಯ ನೀಡಲು ಗುರುತಿಸಲಾಗಿದೆ. ಸುವರ್ಣ ಆರೋಗ್ಯ ಟ್ರಸ್ಟ್ ಇದರ ಸಂಪೂರ್ಣ ನಿರ್ವಹಣೆ ಮಾಡುತ್ತದೆ. ನೌಕರರ ಮಾಹಿತಿ ಇರುವ ಎಚ್​ಆರ್​ಎಂಎಸ್ ಅನ್ನು ಸುವರ್ಣ ಆರೋಗ್ಯ ಟ್ರಸ್ಟ್ ಜತೆಗೆ ಲಿಂಕ್ ಮಾಡಲಾಗುತ್ತದೆ. ಅದೇ ಮಾಹಿತಿ ಆಧಾರದಲ್ಲಿ ಸ್ಮಾರ್ಟ್ ಕಾರ್ಡ್​ಗಳು ಸಿದ್ಧವಾಗುತ್ತಿವೆ. ಜಿಲ್ಲಾ ಮಟ್ಟದಲ್ಲಿಯೇ ಅವುಗಳ ವಿತರಣೆ ಕಾರ್ಯ ಶೀಘ್ರ ಆರಂಭವಾಗಲಿದೆ.

ನೌಕರರ ಮೂರು ದಶಕಗಳ ಹೋರಾಟಕ್ಕೆ ಫಲ ಸಿಗುತ್ತಿದೆ. ಸರ್ಕಾರ ದೊಡ್ಡ ಯೋಜನೆಯ ಜಾರಿಗೆ ಒಪ್ಪಿರುವುದು ಉತ್ತಮ ಬೆಳವಣಿಗೆ. ನೌಕರರು ಸ್ವಾಭಿಮಾನದಿಂದ ಬದುಕುವಂತಾಗುತ್ತದೆ. ಇದೊಂದು ಕ್ರಾಂತಿಕಾರಕ ತೀರ್ವನವಾಗಿದೆ.

| ಸಿ.ಎಸ್.ಷಡಾಕ್ಷರಿ ಅಧ್ಯಕ್ಷ, ರಾಜ್ಯ ಸರ್ಕಾರಿ ನೌಕರರ ಸಂಘ

ಸರ್ಕಾರಿ ನೌಕರರ ದಿನಾಚರಣೆ: ಏ.21ರಂದು ನಡೆಸಬೇಕಾಗಿದ್ದ ರಾಜ್ಯ ಸರ್ಕಾರಿ ನೌಕರರ ದಿನಾಚರಣೆಯನ್ನು ನವೆಂಬರ್ ಮೂರನೇ ವಾರದಲ್ಲಿ ನಡೆಸಲು ಸರ್ಕಾರ ಆದೇಶ ನೀಡಿದೆ. ಕರೊನಾ ಕಾರಣಕ್ಕೆ ಮುಂದೂಡಲಾಗಿತ್ತು. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್​ನಲ್ಲಿ ನಡೆಯಲಿದೆ. ಅದೇ ಸಂದರ್ಭದಲ್ಲಿ 10 ನೌಕರರಿಗೆ ರಾಜ್ಯ ಮಟ್ಟದ ಸವೋತ್ತಮ ಪ್ರಶಸ್ತಿ ಪ್ರದಾನವಾಗಲಿದೆ. ಜಿಲ್ಲಾ ಮಟ್ಟದಲ್ಲಿಯೂ ತಲಾ 10 ಜನರಿಗೆ ಪ್ರಶಸ್ತಿ ನೀಡಲಾಗುತ್ತದೆ.

ನೌಕರರ ಅದಾಲತ್: ನೌಕರರ ಸಮಸ್ಯೆಗಳಿಗೆ ಸಂಬಂಧಿಸಿ ಪ್ರತಿ ಜಿಲ್ಲೆಯಲ್ಲಿ ಯೂ ತಿಂಗಳಿಗೊಮ್ಮೆ ಅದಾಲತ್ ನಡೆಸಲು ಸರ್ಕಾರ ಮತ್ತು ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಸೂಚನೆ ನೀಡಿದೆ. ನೌಕರರ ವಿವಿಧ ಸಮಸ್ಯೆಗಳು, ನೌಕರರ ವಿರುದ್ಧದ ತನಿಖೆಗಳು, ವಿಚಾರಣೆಗಳು ಸಾವಿರಾರು ಸಂಖ್ಯೆಯಲ್ಲಿ ಬಾಕಿ ಉಳಿದಿವೆ. ಅವುಗಳ ಇತ್ಯರ್ಥ ಮಾಡುವುದು ಸರ್ಕಾರದ ಉದ್ದೇಶವಾಗಿದೆ.

ಅನುಕೂಲಗಳೇನು?

  • ನೌಕರರು ಯಾವುದೇ ಸಂದರ್ಭ ಹಣವಿಲ್ಲದಿದ್ದರೂ ಆಸ್ಪತ್ರೆಗೆ ದಾಖಲಾಗಬಹುದು
  • ಆರೋಗ್ಯ ಸೇವೆಗಾಗಿ ಸಾಲ ಮಾಡಿಕೊಂಡು ಪಡಿಪಾಟಲು ಪಡಬೇಕಾಗಿಲ್ಲ
  • ಚಿಕಿತ್ಸೆ ಪಡೆದ ನಂತರ ಮರು ಪಾವತಿಗಾಗಿ ಕಚೇರಿಗೆ ಅಲೆದಾಡುವ ಅಗತ್ಯವಿಲ್ಲ
  • ಯಾವುದೇ ಆಸ್ಪತ್ರೆಯಲ್ಲಿ ಬೇಕಾದರೂ ಚಿಕಿತ್ಸೆ ಪಡೆಯಲು ಅನುಕೂಲ
  • ಸರ್ಕಾರಿ ಆಸ್ಪತ್ರೆಗಳ ಮೇಲೆ ಅವಲಂಬನೆ ತಪ್ಪಲಿದೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net