

ಶಿವಮೊಗ್ಗ:ಗೇರುಬೀಜ ಉದ್ಯಮದಲ್ಲಿ ರಾಜ್ಯವನ್ನು ದೇಶದಲ್ಲಿಯೇ ಪ್ರಥಮ ಸ್ಥಾನದಲ್ಲಿ ನಿಲ್ಲಿಸಿ ದೇಶದ ಆರ್ಥಿಕತೆಗೆ ನಮ್ಮ ಕೊಡುಗೆ ನೀಡಬೇಕು ಎಂದು ಕರ್ನಾಟಕ ಗೋಡಂಬಿ ಉತ್ಪಾದಕರ ಸಂಘದ ಅಧ್ಯಕ್ಷ ಎಸ್.ಅನಂತ ಕೃಷ್ಣರಾವ್ ಹೇಳಿದರು.
ಗೋಡಂಬಿ ಉತ್ಪಾದಕರ ಸಂಘಟನೆ ಶತಮಾನೋತ್ಸವ ಪೂರೈಸಿದ ಸಂದರ್ಭದಲ್ಲಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಲ್ಲಿ ಏರ್ಪಡಿಸಿದ್ದ ಗೇರುಬೀಜ ಬೆಳೆ ಪ್ರಚಾರ ಮತ್ತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ರಾಜ್ಯದ ಕನಿಷ್ಠ 30 ಕಡೆಗಳಲ್ಲಿ ಗೋಡಂಬಿ ಮಾರುಕಟ್ಟೆ ಬೆಳೆಸುವ ಆಲೋಚನೆ ಇದೆ. ದೇಶದ ಆರ್ಥಿಕತೆಗೆ ಗೇರುಬೀಜ ಉದ್ಯಮ ಅತಿ ಹೆಚ್ಚಿನ ಕೊಡುಗೆ ನೀಡಲಿದೆ ಎಂದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಮಾತನಾಡಿ, ಗೇರುಬೀಜ ಉದ್ಯಮದ ಮಾರುಕಟ್ಟೆ ವಿಸ್ತರಣೆಗೆ ನಮ್ಮ ಸಂಘದ ಬೆಂಬಲ ಮತ್ತು ಪ್ರೋತ್ಸಾಹ ಸದಾ ಇರುತ್ತದೆ. ಆಯುರ್ವೇದದಲ್ಲಿ ಹೇಳಿರುವಂತೆ ಗೋಡಂಬಿಯ ನಿಯಮಿತ ಸೇವನೆ ಉತ್ತಮವಾದುದು. ವಿಟಮಿನ್ ಮತ್ತು ಪೊಟ್ಯಾಸಿಯಂಗಳಿಂದ ಮೂಳೆಗಳು ಸಶಕ್ತವಾಗಿ, ಚರ್ಮ, ಕೂದಲಿನ ಆರೋಗ್ಯ ಉತ್ತಮವಾಗುತ್ತದೆ ಎಂದು ಹೇಳಿದರು.
ಗೋಡಂಬಿ ಸಂಸ್ಕರಣೆಯಿಂದ ಮಹಿಳೆಯರಿಗೆ ಉದ್ಯೋಗಾವಕಾಶ ಹೆಚ್ಚುತ್ತದೆ. ದೇಶದ ಗ್ರಾಮೀಣ ಆರ್ಥಿಕತೆಗೆ ಗೇರು ಉದ್ಯಮ ಗಣನೀಯ ಕೊಡುಗೆ ನೀಡುತ್ತಿದೆ. ಉದ್ಯಮದ ಎಲ್ಲ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಲು ಸಂಘ ಬದ್ಧವಾಗಿದೆ ಎಂದರು.
ಶಿವಮೊಗ್ಗ ಹೋಟೆಲ್ ಮಾಲೀಕರ ಅಸೋಸಿಯೇಷನ್ ಅಧ್ಯಕ್ಷ ಯು.ಎಂ.ಶಂಕರನಾರಾಯಣ ಹೊಳ್ಳ, ಕೆಸಿಎಂಎ ಉಪಾಧ್ಯಕ್ಷ ತುಕಾರಾಂ ಪ್ರಭು, ಕಾರ್ಯದರ್ಶಿ ಅಮಿತ್ ಪೈ, ಖಜಾಂಚಿ ಗಣೇಶ್ ಕಾಮತ್, ಜಂಟಿ ಕಾರ್ಯದರ್ಶಿ ಸನತ್ ಪೈ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯ್‌ಕುಮಾರ್, ಕಾರ್ಯದರ್ಶಿ ಎ.ಎಂ.ಸುರೇಶ್, ಖಜಾಂಚಿ ಆರ್.ಮನೋಹರ, ನಿರ್ದೇಶಕರಾದ ಗಣೇಶ್ ಅಂಗಡಿ, ಪ್ರದೀಪ್ ಯಲಿ, ಶರತ್ ಇತರರಿದ್ದರು.