ಐಟಿ ದಾಳಿಯಲ್ಲಿ ಸಿಕ್ಕ ಹಣಕ್ಕೂ ಕಾಂಗ್ರೆಸ್‌ಗೂ ನಂಟು !; ಮಾಜಿ ಸಚಿವರ ಆರೋಪ

C N Ashwath Narayan
Published on

ಬೆಂಗಳೂರು: ಪಂಚರಾಜ್ಯಗಳ ಚುನಾವಣೆ ಖರ್ಚಿಗಾಗಿ ಕಾಂಗ್ರೆಸ್ ಹೈಕಮಾಂಡ್‌ಗೆ ಕರ್ನಾಟಕ ಕಲೆಕ್ಷನ್ ಪಾಯಿಂಟ್ ಆಗಿದೆ. ಇದಕ್ಕೆ ಪೂರಕವಾದ ಬೆಳವಣಿಗೆ ನಡೆದಿದೆ ಎಂದು ಮಾಜಿ ಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಆರೋಪಿಸಿದರು.

ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, ಭ್ರಷ್ಟಾಚಾರಮುಕ್ತ ಹಾಗೂ ಪಾರದರ್ಶಕ ಆಡಳಿತ ನೀಡುತ್ತೇವೆ ಎಂದು ಚುನಾವಣೆಯಲ್ಲಿ ಕಾಂಗ್ರೆಸ್ ಹೇಳಿತ್ತು. ಅಧಿಕಾರಕ್ಕೆ ಬಂದ ನಾಲ್ಕು ತಿಂಗಳಲ್ಲೇ ಕಾಂಗ್ರೆಸ್ ಸರ್ಕಾರದ ಮುಖವಾಡ ಕಳಚಿಬಿದ್ದಿದೆ ಎಂದು ಟೀಕಿಸಿದರು.

ಬಿಜೆಪಿ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಸುಳ್ಳು ಆರೋಪ ಹೊರಿಸಿದರು. ಅಧಿಕಾರಕ್ಕೆ ಬಂದ ತನಿಖೆ ನೆಪದಲ್ಲಿ ಮುಗಿದ ಕಾಮಗಾರಿಗಳ ಬಿಲ್ ಪಾವತಿ ವಿಳಂಬ ಮಾಡುತ್ತಿದ್ದು, ಕಮಿಷನ್‌ಗೆ ಒತ್ತಡ ಹೇರಲಾಗುತ್ತಿದೆ ಎಂದು ಕೆಲವು ಗುತ್ತಿಗೆದಾರರು ರಾಜ್ಯಪಾಲರಿಗೆ ದೂರು ಸಲ್ಲಿಸಿದರು.

ಕೈಗೆ ಸಂಬಂಧ

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ವೇಳೆ ಗುತ್ತಿಗೆದಾರ ಅಂಬಿಕಾಪತಿ ನಿವಾಸದಲ್ಲಿ 42 ಕೋಟಿ ರೂ. ನಗದು ಪತ್ತೆ ಹಚ್ಚಿದ್ದಾರೆ. ಈ ಹಣಕ್ಕೂ ಕೈಗೂ ನೇರ ಸಂಬಂಧವಿದ್ದು, ಆಂತರಿಕವಾದ ನಂಟಿದೆ ಎಂದು ಡಾ.ಸಿ.ಎನ್.ಅಶ್ವತ್ಥ ನಾರಾಯಣ ಗಂಭೀರ ಆರೋಪ ಮಾಡಿದರು.

ಕಾಂಗ್ರೆಸ್ ಸರ್ಕಾರ ಅದೆಷ್ಟು ಭ್ರಷ್ಟಾಚಾರ ಮುಕ್ತ, ಪಾರದರ್ಶಕ ಆಡಳಿತ ನೀಡುತ್ತಿದೆ ಎಂಬುದು ಮತ್ತೊಮ್ಮೆ ಹೊರಬಿದ್ದಿದೆ. ವರ್ಗಾವಣೆ ದಂಧೆಯಾಯಿತು, ಕಮಿಷನ್ ಕೊಟ್ಟವರಿಗಷ್ಟೇ ಬಿಲ್ ಪಾವತಿಯಾಗುತ್ತಿದೆ ಎನ್ನುವುದಕ್ಕೆ ಗುತ್ತಿಗೆದಾರನ ಮನೆಯಲ್ಲಿ ಸಿಕ್ಕ ನಗದು ನಿದರ್ಶನವೆಂದರು.

ಪಂಚರಾಜ್ಯಗಳ ಚುನಾವಣೆ ಖರ್ಚಿಗಾಗಿ ಈ ಹಣ ಸಾಗಿಸುವ ಹವಣಿಕೆಯಲ್ಲಿದ್ದರು ಎನ್ನಲಾಗಿದ್ದು, ಕಾಂಗ್ರೆಸ್ ಹೈಕಮಾಂಡ್ ತೃಪ್ತಿಪಡಿಸಲು ರಾಜ್ಯ ನಾಯಕರು ಸಾಕಷ್ಟು ಕಸರತ್ತು ನಡೆಸುತ್ತಿರುವಂತಿದೆ ಎಂದು ಕಾಲೆಳೆದರು.

ಬಿಜೆಪಿ ಹೇಳಿಕೆ ದೃಢ

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹೈಕಮಾಂಡ್ ಪಾಲಿಗೆ ಎಟಿಎಂ ಸರ್ಕಾರವಾಗಲಿದೆ ಎಂದು ಬಿಜೆಪಿ ಚುನಾವಣೆಯಲ್ಲಿ ಹೇಳಿದ್ದು ದೃಢವಾಗುತ್ತಿದೆ.

ಹೈಕಮಾಂಡ್‌ಗೆ ಕಪ್ಪಕಾಣಿಕೆ ಸಲ್ಲಿಸಲು ವರ್ಗಾವಣೆ ದಂಧೆ ನಡೆಸಿತು. ಬಾಕಿ ಬಿಲ್ ಚುಕ್ತಾ ಮಾಡಲು ಕಮಿಷನ್ ವಸೂಲಿ ಮಾಡುತ್ತಿದ್ದು, ಕೇವಲ ನಾಲ್ಕು ತಿಂಗಳಲ್ಲಿ ಕಾಂಗ್ರೆಸ್‌ನ ನಿಜಬಣ್ಣ ಬಯಲಾಗಿದೆ.

ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರು ಕಾಂಗ್ರೆಸ್ ಎಂಬ ಆರೋಪಗಳಿಗೆ ಪುಷ್ಟಿ ನೀಡುವ ನಿದರ್ಶನಗಳು ಸಾಕಷ್ಟಿದ್ದು, ಜನರು ಗಮನಿಸುತ್ತಿದ್ದಾರೆ ಎಂದು ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net