

ಲಖನೌ: ಕರೊನಾ ತಡೆಗಟ್ಟುವ ಸಮಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದ್ದವು. ಲಾಕ್ಡೌನ್ ವೇಳೆ ಹೊರಗಡೆ ಸುತ್ತಾಡಿ, ಲಾಕ್ಡೌನ್ ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಪ್ರಕರಣಗಳನ್ನೂ ದಾಖಲಿಸಿಕೊಳ್ಳಲಾಗಿತ್ತು. ರಾಜ್ಯದ ಸಾಮಾನ್ಯ ವರ್ಗದ ಜನರ ಹಿತದೃಷ್ಟಿಯಿಂದಾಗಿ ಇದೀಗ ಯೋಗಿ ಆದಿತ್ಯಾನಾಥ ಸರ್ಕಾರವು ಲಾಕ್ಡೌನ್ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಹಿಂಪಡೆಯುವ ನಿರ್ಧಾರ ಮಾಡಿದೆ.
ಲಾಕ್ಡೌನ್ ಸಮಯದಲ್ಲಿ ಪೆಂಡಮಿಕ್ ಕಾಯ್ದೆ ಜಾರಿಯಲ್ಲಿತ್ತು. ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಸೆಕ್ಷನ್ 188 ರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಉತ್ತರ ಪ್ರದೇಶ ರಾಜ್ಯವೊಂದರಲ್ಲೇ ಸುಮಾರು 2.5 ಲಕ್ಷ ಜನರ ವಿರುದ್ಧ ಲಾಕ್ಡೌನ್ ನಿಯಮ ಉಲ್ಲಂಘನೆ ಪ್ರಕರಣ ದಾಖಲಾಗಿದೆ. ಅವರೆಲ್ಲರೂ ಕೋರ್ಟ್, ಪೊಲೀಸ್ ಠಾಣೆಗೆ ಓಡಾಡುವ ಸ್ಥಿತಿ ಬಂದೊದಗಿತ್ತು. ಅವರಲ್ಲಿ ಸಣ್ಣ ಪುಟ್ಟ ವ್ಯಾಪಾರಿಗಳು ಹಾಗೂ ಮಧ್ಯಮ ವರ್ಗದ ಜನರೇ ಹೆಚ್ಚಿದ್ದಾರೆ.
ಮೊದಲೇ ಆರ್ಥಿಕ ಸಂಕಷ್ಟಕ್ಕೆ ಈಡಾಗಿರುವ ಕುಟುಂಬಗಳಿಗೆ ಇದೀಗ ಈ ಪ್ರಕರಣದಿಂದಾಗಿ ಇನ್ನಷ್ಟು ಹೊರೆ ಮಾಡುವುದು ಬೇಡವೆಂದು ರಾಜ್ಯ ಸರ್ಕಾರ ನಿರ್ಧರಿಸಿದೆ. ಅದೇ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿದೆ.
ಲಾಕ್ಡೌನ್ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಹಿಂಪಡೆದಿರುವ ಮೊದಲ ರಾಜ್ಯವಾಗಿ ಉತ್ತರ ಪ್ರದೇಶ ಹೊರಹೊಮ್ಮಿದೆ. ಉತ್ತರ ಪ್ರದೇಶದಂತೆಯೇ ಬೇರೆ ರಾಜ್ಯಗಳೂ ಮಹತ್ತರ ನಿರ್ಧಾರ ತೆಗೆದುಕೊಳ್ಳಲಿವೆಯೇ ಎನ್ನುವುದನ್ನು ಕಾದು ನೋಡಬೇಕು. (ಏಜೆನ್ಸೀಸ್)