ರೈತರು, ಕನ್ನಡಪರ ಹೋರಾಟಗಾರರ ಕೇಸ್ ವಾಪಸ್ ಪರಿಶೀಲನೆ

Parameswar
Published on

ಬೆಂಗಳೂರು: ರೈತರು, ಕನ್ನಡಪರ ಹೋರಾಟಗಾರರು ಸೇರಿದಂತೆ ಅಮಾಯಕರ ವಿರುದ್ಧ ದಾಖಲಾಗಿದ್ದ ಪ್ರಕರಣಗಳಲ್ಲಿ 300 ರಿಂದ 400 ರಷ್ಟನ್ನು ಹಿಂಪಡೆಯಬೇಕು ಎಂಬ ಮನವಿ ಬಂದಿದ್ದು, ಪರಿಶೀಲಿಸಲಾಗುತ್ತಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು.

ಸದಾಶಿವ ನಗರದ ಗೃಹ ಕಚೇರಿಯಲ್ಲಿ ಪೊಲೀಸ್ ಇಲಾಖೆ ಉನ್ನತಾಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಏಕಾಏಕಿ ಪ್ರಕರಣಗಳನ್ನು ಹಿಂಪಡೆಯುವುದಿಲ್ಲ. ಅದಕ್ಕಾಗಿ ತಮ್ಮಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಉಪಸಮಿತಿ ರಚಿಸಲಾಗಿದೆ. ಅಲ್ಲಿ ಪರಿಶೀಲಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಪೊಲೀಸರು ಪ್ರಕರಣ ಹಿಂಪಡೆಯಬಹುದೇ ಅಥವಾ ಬೇಡವೇ ಎಂಬ ಕುರಿತು ಸ್ಪಷ್ಟ ಶಿಫಾರಸ್ಸಿನೊಂದಿಗೆ ಕಡತ ಮಂಡಿಸಲಿದ್ದಾರೆ. ಉಪಸಮಿತಿ ಅದನ್ನು ಪರಿಶೀಲಿಸಲಿದೆ. ಸೂಕ್ತವಾಗಿದ್ದರೆ ಹಿಂಪಡೆಯುವ ಬಗ್ಗೆ ಪ್ರಕ್ರಿಯೆ ಮುಂದುವರೆಸಲು ಸಂಪುಟಕ್ಕೆ ಶಿಫಾರಸ್ಸು ಮಾಡಲಾಗುವುದು. ಇಲ್ಲವಾದರೆ ಪ್ರಕರಣವನ್ನು ಮುಂದುವರೆಸಲು ಪೊಲೀಸರಿಗೆ ಸೂಚಿಸಲಾಗುವುದು ಎಂದು ತಿಳಿಸಿದರು.

ಮಾರ್ಗಸೂಚಿ ಸ್ಪಷ್ಟವಾಗಿ ಪಾಲನೆ

ಪ್ರಕರಣ ಹಿಂಪಡೆಯುವ ವಿಚಾರದಲ್ಲಿ ಸ್ಪಷ್ಟವಾಗಿ ಮಾರ್ಗಸೂಚಿ ಪಾಲನೆ ಮಾಡಲಾಗುತ್ತದೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಎಂಬ ಆದ್ಯತೆಗಳಿರುವುದಿಲ್ಲ ಎಂದು ಸ್ಪಷ್ಟಪಡಿಸಿದರು. ರಾಜ್ಯಾದ್ಯಂತ ಇರುವ ಬಾಕಿ ಪ್ರಕರಣಗಳನ್ನು ಇತ್ಯರ್ಥಪಡಿಸುವಂತೆ ಪೊಲೀಸರಿಗೆ ಸೂಚನೆ ನೀಡಿದ್ದೇನೆ. ಎಲ್ಲ ಜಿಲ್ಲೆಗಳ ಎಸ್ಪಿಗಳು, ನಗರ ಪ್ರದೇಶದ ಆಯುಕ್ತರು ಪರಿಶೀಲನೆ ನಡೆಸುತ್ತಿದ್ದಾರೆ. ಹುಬ್ಬಳ್ಳಿಯಲ್ಲಿ ಪರಿಶೀಲನೆ ನಡೆಸುವಾಗ 32 ಪ್ರಕರಣಗಳು ಕಂಡುಬಂದಿವೆ. ಅದರಲ್ಲಿ ರಾಮ ಜನ್ಮಭೂಮಿ ಹೋರಾಟ ಪ್ರಕರಣದಲ್ಲಿ ಭಾಗಿಯಾದವರೂ ಸೇರಿದ್ದಾರೆ. ಆದರೆ ಅದೊಂದೇ ಪ್ರಕರಣವನ್ನು ನಾವು ಕೆದಕಿಲ್ಲ. ರಾಜ್ಯಾದ್ಯಂತ ಪರಿಶೀಲನೆ ನಡೆಯುವಾಗ ಹುಬ್ಬಳ್ಳಿ ಪ್ರಕರಣವೂ ಕಂಡುಬಂದಿದೆ. ಅಯೋಧ್ಯೆ ರಾಮಮಂದಿರ ಉದ್ಘಾಟನೆ ವೇಳೆ ಇದು ಕಂಡುಬಂದಿರುವುದು ಕಾಕತಾಳೀಯವಷ್ಟೇ ಎಂದರು.

ರಾಜಕೀಯ ಮಾಡುವುದು ಅನಗತ್ಯ

ಬಿಜೆಪಿಯವರು ಇದನ್ನು ರಾಜಕೀಯಕ್ಕಾಗಿ ಬಳಸಿಕೊಳ್ಳುವುದು ಅನಗತ್ಯ. ಹಳೆಯ ಪ್ರಕರಣಗಳಲ್ಲಿ ಆರೋಪಿಗಳು ಖುಲಾಸೆಯಾದರೂ ಆಗಬೇಕು, ಶಿಕ್ಷೆಗಾದರೂ ಒಳಗಾಗಬೇಕು. ಎಷ್ಟು ದಿನ ಎಂದು ಅವು ಬಾಕಿ ಪ್ರಕರಣಗಳಲ್ಲಿ ನನೆಗುದಿಯಲ್ಲಿರಲು ಸಾಧ್ಯ? ಯಡಿಯೂರಪ್ಪ ಸೇರಿದಂತೆ ಬಿಜೆಪಿಯ ಮುಖಂಡರೂ ಅಧಿಕಾರ ನಡೆಸಿದ್ದಾರೆ. ಅವರಿಗೆ ಈ ವಿಚಾರ ಗೊತ್ತಿಲ್ಲವೇ ಎಂದು ಟಾಂಗ್ ಕೊಟ್ಟರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಸಿಬಿಐ ತನಿಖೆಗೆ ನೀಡಿದ್ದ ಅನುಮತಿಯನ್ನು ಹಿಂಪಡೆದಿದ್ದೇವೆ. ಮುಂದಿನ ತನಿಖೆಗೆ ಪ್ರಕರಣವನ್ನು ಲೋಕಾಯುಕ್ತಕ್ಕೆ ಒಪ್ಪಿಸಲಾಗಿದೆ. ಒಂದು ವೇಳೆ ಸಿಬಿಐನವರು ನಾವೇ ತನಿಖೆ ಮುಂದುವರೆಸುತ್ತೇವೆ ಎಂದರೆ ಅದರಿಂದಾಗುವ ಕಾನೂನು ವಿಚಾರಗಳ ಬಗ್ಗೆ ಮುಂದಿನ ದಿನಗಳಲ್ಲಿ ಪರಿಶೀಲನೆ ನಡೆಸಲಾಗುವುದು ಎಂದು ಡಾ.ಜಿ. ಪರಮೇಶ್ವರ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net