ಕೆಆರ್‌ಎಸ್ ಪಕ್ಷದ ಮುಖಂಡರ ವಿರುದ್ಧ ಪ್ರಕರಣ ದಾಖಲು

krs protest
ಕೇಂದ್ರ ಸರ್ಕಾರ ಕೂಡಲೇ ರಾಜ್ಯದ ಜಿಎಸ್‌ಟಿ ಬಾಕಿ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ದೀಪಕ್, ಪ್ರಭು, ಮಂಜುನಾಥ್, ಕೇಶವಮೂರ್ತಿ, ಬಿ.ಜಿ.ಕುಂಬಾರ್, ವಿ.ಆರ್.ಮರಾಠೆ ಮುಂತಾದವರು ಪ್ರತಿಭಟನೆ ನಡೆಸಿದರು.
Published on

ಬೆಂಗಳೂರು: ನ್ಯಾಯಾಲಯದ ಆದೇಶ ಉಲ್ಲಂಘಿಸಿ ಸಾರ್ವಜನಿಕ ರಸ್ತೆಯಲ್ಲಿ ಪ್ರತಿಭಟನೆ ಮೆರವಣಿಗೆ ಮಾಡಿ ಸುಗಮ ಸಂಚಾರಕ್ಕೆ ಅಡ್ಡಿಪಡಿಸಿದ ಕರ್ನಾಟಕ ರಾಷ್ಟ್ರ ಸಮಿತಿ(ಕೆಆರ್‌ಎಸ್) ಪಕ್ಷದ ರಾಜ್ಯಾಧ್ಯಕ್ಷ ಸೇರಿ ೧೦ ಮಂದಿ ಮುಖಂಡರ ವಿರುದ್ಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಿಎಸ್‌ಐ ಭೀಮಸೇನಾ ಘಾಟಗೆ ನೀಡಿದ ದೂರಿನ ಮೇರೆಗೆ ಕೆಆರ್‌ಎಸ್ ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣಾ ರೆಡ್ಡಿ, ಮುಖಂಡರಾದ ರಘು ಜಾಣಗೆರೆ, ಅಮಿತ್ ರೆಬೆಲ್ಲೋ, ಗಣೇಶ, ಚಿಕ್ಕೇಗೌಡ, ಸಿ.ಎನ್.ದೀಪಕ್, ಚಂದ್ರು, ಕರೇಗೌಡ, ಜನನಿ ಹಾಗೂ ಪ್ರಮಿಳಾ ಸೇರಿ ಇತರರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಕೆಆರ್‌ಎಸ್ ಪಕ್ಷದ ಬೆಂಗಳೂರು ಪಶ್ಚಿಮ ಜಿಲ್ಲೆಯ ಅಧ್ಯಕ್ಷ ಅಮಿತ್ ರೆಬೊಲ್ಲೋ ಅವರು ಸೆ.೩೦ರಂದು ಫ್ರೀಡಂ ಪಾರ್ಕಿನಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಲು ಅನುಮತಿ ಕೋರಿ ಸೆ.೨೯ರಂದು ಉಪ್ಪಾರಪೇಟೆ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿದ್ದರು. ಆದರೆ, ಸೆ.೩೦ರಂದು ಫ್ರೀಡಂ ಪಾರ್ಕಿನಲ್ಲಿ ಎರಡು ಬೇರೆ ಪ್ರತಿಭಟನೆಗಳಿಗೆ ಅನುಮತಿ ನೀಡಿದ್ದ ಕಾರಣ ಪೊಲೀಸರು ಕೆಆರ್‌ಎಸ್ ಪಕ್ಷಕ್ಕೆ ಅನುಮತಿ ನಿರಾಕರಿಸಿದ್ದರು. ಆದರೂ ಪಕ್ಷದ ಪದಾಧಿಕಾರಿಗಳು ಹೈಕೋರ್ಟ್ ಆದೇಶಕ್ಕೆ ಗೌರವ ನೀಡದೆ ಮತ್ತು ಪೊಲೀಸರ ಸೂಚನೆ ಉಲ್ಲಂಘಿಸಿ ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆ ಬಗ್ಗೆ ಪಕ್ಷದ ಫೇಸ್‌ಬುಕ್ ಹಾಗೂ ಇತರೆ ಸಾಮಾಜಿಕ ಜಾಲತಾಣಗಳ ಮೂಲಕ ಕಾರ್ಯಕರ್ತರನ್ನು ಪ್ರಚೋದಿಸಿದ್ದರು. ಫ್ರೀಡಂ ಪಾರ್ಕಿಗೆ ಬರುವಂತೆ ಸಂದೇಶಗಳು ಹಾಗೂ ವಿಡಿಯೋಗಳನ್ನು ಹಂಚಿಕೊಂಡಿದ್ದರು. ಅದರಂತೆ ಸೆ.೩೦ರಂದು ಗಾಂಧಿನಗರದ ೬ನೇ ಮತ್ತು ೨ನೇ ಮುಖ್ಯರಸ್ತೆಗಳಲ್ಲಿ ಸುಮಾರು ೬೦-೭೦ ಮಂದಿ ಕೆಆರ್‌ಎಸ್ ಪಕ್ಷದ ಕಾರ್ಯಕರ್ತರು ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನಾ ಮೆರವಣಿಗೆ ಮಾಡಿದ್ದರು. ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡ್ಡಿಪಡಿಸಿದ ಆರೋಪದಡಿ ಪ್ರತಿಭಟನಾಕಾರರನ್ನು ಬಂಧಿಸಿದ್ದ ಉಪ್ಪಾರಪೇಟೆ ಠಾಣೆ ಪೊಲೀಸರು ಬಳಿಕ ಠಾಣಾ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದರು.

ಬಿಡುಗಡೆ ಬಳಿಕವೂ ಪ್ರಕರಣದ ತನಿಖೆ ಹಾಗೂ ತನಿಖೆಯಲ್ಲಿ ಭಾಗಿಯಾಗಿದ್ದ ಅಧಿಕಾರಿಗಳಿಗೆ ಪ್ರಾಣ ಬೆದರಿಕೆ ಹಾಕಿರುವುದು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿರುವುದನ್ನು ಮುಂದುವರಿಸಿದ್ದರು. ಹೀಗಾಗಿ ಆರೋಪಿಗಳ ವಿರುದ್ಧ ಹೆಚ್ಚುವರಿ ಸೆಕ್ಷನ್‌ಗಳನ್ನು ಅಳವಡಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net