ಮನೆ ಹಿತ್ತಲಲ್ಲಿ ಗಾಂಜಾ ಬೆಳೆದ ಕೇಸ್ ರದ್ದು

highcourt
Published on

ಬೆಂಗಳೂರು:  ಮನೆ ಹಿತ್ತಲಿನಲ್ಲಿ ಗಾಂಜಾ ಗಿಡಗಳನ್ನು ಬೆಳೆಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿದೆ.

ಪ್ರಕರಣ ರದ್ದು ಕೋರಿ ಬೆಂಗಳೂರಿನ ಜಯನಗರ ಮೂಲದ ಚಂದ್ರಶೇಖರ್ ಎಂಬುವವರು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ, ಮಾದಕ ದ್ರವ್ಯಗಳು ಮತ್ತು ಉದ್ದೀಪನ ವಸ್ತುಗಳ ರಡೆ ಕಾಯಿದೆ 1985ರ ಸೆಕ್ಷನ್ 20(2) ಮತ್ತು 20(ಬಿ)(2)(ಸಿ) ಅಡಿ ಹೂಡಲಾಗಿದ್ದ ಪ್ರಕರಣವನ್ನು ರದ್ದು ಮಾಡಿದೆ.

ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಾಲಯ,‘‘ ಆರೋಪಿಯೂ ತಮ್ಮ ಮನೆಯ ಹಿತಲಲ್ಲಿ ಗಾಂಜಾ ಬೆಳೆದಿದ್ದರು ಎಂಬುದನ್ನು ಸಾಬೀತಪಡಿಸಲು ಪ್ರಾಸಿಕ್ಯೂಷನ್ ವಿಲವಾಗಿದೆ. ಅರ್ಜಿದಾರರು ಗಾಂಜಾದ ಜತೆ ಗಿಡಗಳನ್ನು ಸೇರಿಸಿ ತೂಕ ಮಾಡಲಾಗಿದೆ ಎಂದು ಹೇಳಿದ್ದಾರೆ. ದಾಖಲೆಗಳನ್ನು ಪರಿಶೀಲಿಸಿದರೆ ಬೇರು, ಕಾಂಡಾ, ಎಲೆ ಎಲ್ಲವನ್ನೂ ಸೇರಿಸಿ ತೂಕ ಮಾಡಿರುವುದು ಕಂಡುಬರುತ್ತದೆ. ಸುಪ್ರೀಂಕೋರ್ಟ್, ಅಲಖ್ ರಾಮ್ ವರ್ಸಸ್ ಸ್ಟೇಟ್ ಆ್ ಯುಪಿ ಪ್ರಕರಣದಲ್ಲಿ ಸ್ವಾಭಾವಿಕವಾಗಿ ಬೆಳೆದ ಗಿಡಗಳನ್ನು ಅರ್ಜಿದಾರರೇ ಬೆಳೆದಿದ್ದಾರೆಂದು ಹೇಳಲಾಗದೆಂದು ಹೇಳಿದೆ. ಹಾಗಾಗಿ ಅರ್ಜಿದಾರರ ವಿರುದ್ಧ ಆರೋಪ ನಿರಾಧಾರವಾಗಿದೆ. ಹಾಗಾಗಿ ಅದನ್ನು ರದ್ದುಗೊಳಿಸಲಾಗುತ್ತಿದೆ’ ಎಂದು ಹೇಳಿದೆ.

ಅಲ್ಲದೆ, ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಪೀಠ, ಗಾಂಜಾವನ್ನು ತೂಕ ಮಾಡುವ ಮೂಲಕ ಕೇವಲ ಗಾಂಜಾ ಮತ್ತು ಎಲೆ, ಕಾಂಡ, ಬೇರುಗಳನ್ನು ಪ್ರತ್ಯೇಕಗೊಳಿಸಿಲ್ಲ.ಆದರೆ ಎಲ್ಲ ತೂಕ ಸೇರಿಸಿ ಆರೋಪಪಟ್ಟಿ ಸಲ್ಲಿಸಿರುವುದರಿಂದ ಅದು ಕಾನೂನಿಗೆ ವಿರುದ್ಧವಾದುದು ಎಂದು ಆದೇಶಿಸಿದೆ.

ಅರ್ಜಿದಾರರ ಪರ ವಕೀಲರು, ಅರ್ಜಿದಾರರು ತಮ್ಮ ಆಸ್ತಿಯ ಹಿತ್ತಲಿನಲ್ಲಿ ಬೆಳೆದ ಇತರ ಸಾಮಾನ್ಯ ಕಳೆಗಳಲ್ಲಿ 5 ಗಾಂಜಾ ಗಿಡಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆ ಗಿಡಗಳು ಅಡ್ಡ-ಪರಾಗಸ್ಪರ್ಶದಿಂದ ಬೆಳೆದಿರಬಹುದು. ಗಾಂಜಾ ಗಿಡದ ಕೃಷಿಯನ್ನು ಚಿತ್ರಿಸುವ ಯಾವುದೇ ದಾಖಲೆಗಳಿಲ್ಲ. ಸಸ್ಯಗಳನ್ನು ತೂಕ ಮಾಡುವಾಗ, ಅವುಗಳನ್ನು ಗಾಂಜಾ ವಿಂಗಡಿಸಲಾಗಿಲ್ಲ ಮತ್ತು ಬೇರುಗಳು, ಕಾಂಡಗಳು, ಎಲೆಗಳು ಮತ್ತು ಮೊಗ್ಗುಗಳೊಂದಿಗೆ 5 ಗಿಡಗಳನ್ನು 27.360 ಕೆಜಿ ತೂಕ ಮಾಡಲಾಗಿದೆ. ಇದು ಕಾನೂನಿಗೆ ವಿರುದ್ಧವಾಗಿದೆ ಎಂದು ಹೇಳಿದರು.

ಅದಕ್ಕೆ ಆಕ್ಷೇಪ ಎತ್ತಿದ್ದ ಪ್ರಾಸಿಕ್ಯೂಷನ್ ಅರ್ಜಿಯನ್ನು ವಿರೋಧಿಸಿ ಪೊಲೀಸರು ಸಸ್ಯಗಳನ್ನು ವಶಪಡಿಸಿಕೊಂಡಿದ್ದಾರೆ ಮತ್ತು ವಶಪಡಿಸಿಕೊಳ್ಳುವಲ್ಲಿ ಒಳಗೊಂಡಿರುವ ಗಾಂಜಾ ಪ್ರಮಾಣವು ವಿಚಾರಣೆಯ ವಿಷಯವಾಗಿದೆ. ಆರೋಪಪಟ್ಟಿ ಸಲ್ಲಿಸಲಾಗಿದೆ, ಅರ್ಜಿದಾರರು ವಿಚಾರಣೆ ಎದುರಿಸಲಿ ಎಂದು ಹೇಳಿತು.

ಪ್ರಕರಣದ ಹಿನ್ನೆಲೆ )

ಅರ್ಜಿದಾರರು ತಮ್ಮ ಮನೆಯ ಹಿತಲಲ್ಲಿ ಗಾಂಜಾ ಬೆಳೆದಿದ್ದಾರೆಂಬ ಮಾಹಿತಿ ಹಿನ್ನೆಲೆಯಲ್ಲಿ ಪೊಲೀಸರು 2023ರ ಸೆ.1ರಂದು ಮೆನೆಗೆ ಭೇಟಿ ನೀಡಿ ಶೋಧ ಕಾರ್ಯ ನಡೆಸಿದರು. ಆಗ ಅವರ ಜಾಗದಲ್ಲಿ 5ರಿಂದ 6 ಗಾಂಜಾ ಗಿಡಗಳು ಇರುವುದು ಕಂಡು ಬಂದಿತು. ಪೊಲೀಸರು ಶೋಧ ಕಾರ್ಯ ಮತ್ತು ವಶಕ್ಕೆ ಪಡೆದ ನಂತರ ತನಿಖೆ ನಡೆಸಿ ಅರ್ಜಿದಾರರ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದರು. ಅದನ್ನು ರದ್ದುಗೊಳಿಸಲು ಕೋರಿ ಅರ್ಜಿದಾರರು ನ್ಯಾಯಾಲಯ ಮೊರೆ ಹೋಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net