ಮಂಡ್ಯ: ನಂದಿನಿ ಮೊಸರಿನ ಪ್ಯಾಕೆಟ್ನಲ್ಲಿ ಜಿಯೋ ಸಿಮ್ ಸಿಕ್ಕಿದೆ ಎಂಬ ವಿಡಿಯೋ ವೈರಲ್ ಆಗಿದ್ದ ಪ್ರಕರಣಕ್ಕೆ ಈಗ ಟ್ವಿಸ್ಟ್ ಸಿಕ್ಕಿದೆ. ಸಿಮ್ ಕಾರ್ಡ್ ಮೊಸರಿನ ಪ್ಯಾಕೆಟ್ ಒಳಗೆ ಇರದೆ, ಹೊರಭಾಗಕ್ಕೆ ಅಂಟಿಕೊಂಡಿತ್ತು ಎಂಬುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ಈ ಸಂಬಂಧ ವಿಡಿಯೋ ಮಾಡಿದ್ದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮದ್ದೂರು ತಾಲೂಕಿನ ಚನ್ನಸಂದ್ರ ಗ್ರಾಮದ 35 ವರ್ಷದ ಅರುಣ್ ಕುಮಾರ್ ಎಂಬುವವರು ನಂದಿನಿ ಮೊಸರಿನ ಪ್ಯಾಕೆಟ್ನಲ್ಲಿ ಜಿಯೋ ಸಿಮ್ ಸಿಕ್ಕಿದೆ ಎಂದು ವಿಡಿಯೋ ಮಾಡಿದ್ದರು. ಈ ವಿಡಿಯೋ ಕರ್ನಾಟಕದಾದ್ಯಂತ ವೈರಲ್ ಆಗಿ, ನಂದಿನಿ ಉತ್ಪನ್ನಗಳ ಗುಣಮಟ್ಟದ ಬಗ್ಗೆ ಜನರಲ್ಲಿ ಅನುಮಾನ ಮೂಡಿಸಿತ್ತು.
ಈ ಘಟನೆ ಸಂಬಂಧ ಮನ್ಮುಲ್ ಮಾರುಕಟ್ಟೆ ವ್ಯವಸ್ಥಾಪಕ ಪ್ರಸಾದ್ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಮದ್ದೂರು ಪೊಲೀಸ್ ವೃತ್ತ ನಿರೀಕ್ಷಕ ನವೀನ್ ಮತ್ತು ತಂಡ ಶುಕ್ರವಾರ ಸಂಜೆ ಅರುಣ್ ಕುಮಾರ್ ಅವರನ್ನು ವಶಕ್ಕೆ ಪಡೆದಿದ್ದಾರೆ.
ಪೊಲೀಸರ ವಿಚಾರಣೆ ವೇಳೆ ಸಿಮ್ ಕಾರ್ಡ್ ಅರುಣ್ ಅವರ ಭಾವನ ಹೆಸರಿನಲ್ಲಿ ನೋಂದಣಿಯಾಗಿದ್ದು, ಅವರ ಪತ್ನಿ ಎನ್.ಸುಧಾ ಬಳಸುತ್ತಿದ್ದರು ಎಂಬುದು ಗೊತ್ತಾಗಿದೆ. ಮಂಗಳವಾರ ಸಂಜೆ ಅರುಣ್ ಬಸ್ ನಿಲ್ದಾಣದ ಬಳಿಯ ನಂದಿನಿ ಪಾರ್ಲರ್ನಿಂದ ಮೊಸರಿನ ಪ್ಯಾಕೆಟ್ ಖರೀದಿಸಿದ್ದರು. ಅವರ ದ್ವಿಚಕ್ರ ವಾಹನದ ಪೌಚ್ನಲ್ಲಿದ್ದ ಸಿಮ್ ಕಾರ್ಡ್ ಆಕಸ್ಮಿಕವಾಗಿ ಮೊಸರಿನ ಪ್ಯಾಕೆಟ್ನ ಹೊರಭಾಗಕ್ಕೆ ಅಂಟಿಕೊಂಡಿತ್ತು.
ನಂತರ ಅರುಣ್ ಪ್ಯಾಕೆಟ್ ಕತ್ತರಿಸಿ ಮೊಸರನ್ನು ಪಾತ್ರೆಗೆ ಹಾಕಿದಾಗ ಹೊರಭಾಗಕ್ಕೆ ಅಂಟಿಕೊಂಡಿದ್ದ ಸಿಮ್ ಕಾರ್ಡ್ ಕೂಡ ಪಾತ್ರೆಗೆ ಬಿದ್ದಿದೆ. ಇದನ್ನು ಗಮನಿಸದ ಅವರು ಸಿಮ್ ಕಾರ್ಡ್ ಪ್ಯಾಕೆಟ್ ಒಳಗಿನಿಂದಲೇ ಬಂದಿದೆ ಎಂದು ಭಾವಿಸಿ ಆತುರದಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.