

ಕೃಷ್ಣ ಪರಮಾತ್ಮನ ಕುರಿತು ವಿವಾದಾತ್ಮಕ ಹೇಳಿಕೆ ಕೊಟ್ಟ ಧೀರೇಂದ್ರ ಶಾಸ್ತ್ರಿ
ವಕೀಲ ಅಜಯ್ ಪ್ರತಾಪ್ ಸಿಂಗ್ರಿಂದ ಸಿವಿಲ್ ಕೋರ್ಟ್‌ನಲ್ಲಿ ದೂರು ದಾಖಲು
ಡಿಸೆಂಬರ್ 14ಕ್ಕೆ ವಿಚಾರಣೆ ಮುಂದೂಡಿದ ಕೋರ್ಟ್
ಆಗ್ರಾ; ನಮ್ಮ ರಾಮ ನೇರ ಮತ್ತು ಸರಳ, ನಿಮ್ಮ ಕೃಷ್ಣ ಡೊಂಕು. ಕೃಷ್ಣನ ಭಂಗಿ, ಅವನ ನಡಿಗೆ ಮತ್ತು ಹೆಸರು ಎಲ್ಲವೂ ವಕ್ರವಾಗಿದೆ. ಕೃಷ್ಣನ ಕೊಳಲು ನಾದ ಮಕ್ಕಳ ಆಟ. ರಾಮನಂತೆ ಧನಸ್ಸು ಹಿಡಿಯುವುದು, ಕೋತಿಗಳನ್ನು ಕುಣಿಸುವುದು ಸುಲಭವಲ್ಲ ಎಂದು ದೇವರುಗಳ ಮಧ್ಯೆ ಹೋಲಿಕೆ ಮಾಡಿದ್ದ ಧಾರ್ಮಿಕ ಪ್ರಚಾರಕ ಧೀರೇಂದ್ರ ಶಾಸ್ತ್ರಿ ವಿರುದ್ಧ ವಕೀಲರೊಬ್ಬರು ಕ್ರಿಮಿನಲ್ ಮಾನನಷ್ಟ ದೂರು ದಾಖಲಿಸಿದ್ದಾರೆ.
ವಕೀಲ ಅಜಯ್ ಪ್ರತಾಪ್ ಸಿಂಗ್ ಅವರು ಆಗ್ರಾ ಸಿವಿಲ್ ಕೋರ್ಟ್‌ನಲ್ಲಿ ಈ ದೂರು ದಾಖಲಿಸಿದ್ದು, ಧಾರ್ಮಿಕ ಪ್ರವಚನದ ವೇಳೆ ಶಾಸ್ತ್ರಿ ಅವರು ಶ್ರೀಕೃಷ್ಣನ ಬಗ್ಗೆ ಅವಹೇಳನಕಾರಿ ಟೀಕೆಗಳನ್ನು ಮಾಡಿದ್ದಾರೆ. ಇದು ಅವರ ವಂಶಸ್ಥರ ಧಾರ್ಮಿಕ ಭಾವನೆಗಳಿಗೆ ಹಾಗೂ ಸಾಮಾಜಿಕ ಗೌರವಕ್ಕೆ ಧಕ್ಕೆ ತಂದಿದೆ ಎಂದು ಆರೋಪಿಸಿದ್ದಾರೆ.
ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ಕರೇರಾದಲ್ಲಿ ನಡೆದ ರಾಮಕಥೆಯೊಂದರ ವೇಳೆ ಶಾಸ್ತ್ರಿ ಅವರು ಭಗವಾನ್ ರಾಮ ಮತ್ತು ಶ್ರೀಕೃಷ್ಣನ ದೈಹಿಕ ಭಂಗಿಗಳನ್ನು ಹೋಲಿಕೆ ಮಾಡಿ ಮಾತನಾಡಿದ್ದರು. ದೂರಿನ ಪ್ರಕಾರ, 'ಕೃಷ್ಣನನ್ನು ಅನುಸರಿಸುವವರಿಗೆ ಬೇಸರವಾಗಬಹುದು, ಆದರೆ ಕೃಷ್ಣ ತುಂಬಾ ಬಾಗಿದವನು. ಅವನು ನಿಂತಾಗಲೂ ಮೂರು ಕಡೆಗಳಲ್ಲಿ ಬಾಗುತ್ತಾನೆ' ಎಂದು ಶಾಸ್ತ್ರಿ ಹೇಳಿದ್ದರು.
ದ್ವಾಪರ ಯುಗದಲ್ಲಿ ಮಾನವ ರೂಪದಲ್ಲಿ ಜನಿಸಿದ ಶ್ರೀಕೃಷ್ಣನ ವಂಶಸ್ಥರು ಭಾರತದಲ್ಲಿ ಇನ್ನೂ ನೆಲೆಸಿದ್ದಾರೆ. ತಮ್ಮ ವಾದವನ್ನು ಸಮರ್ಥಿಸಲು ಅವರು ಜಾದೂನ್, ಜಡೇಜಾ ಮತ್ತು ಭಾಟಿ ಸಮುದಾಯಗಳಂತಹ ಐತಿಹಾಸಿಕ ಉಲ್ಲೇಖಗಳನ್ನು ಉಲ್ಲೇಖಿಸಿದ್ದಾರೆ. ಅಜಯ್ ಪ್ರತಾಪ್ ಸಿಂಗ್ ಅವರು ತಾವೂ ಕೂಡ ತಾಯಿಯ ಕಡೆಯಿಂದ ಶ್ರೀಕೃಷ್ಣನ ವಂಶಸ್ಥರೆಂದು ಹೇಳಿಕೊಂಡಿದ್ದು, ಈ ಹೇಳಿಕೆಗಳು ಕೃಷ್ಣನ ವಂಶಸ್ಥರ ಧಾರ್ಮಿಕ ಭಾವನೆಗಳನ್ನು ನೋಯಿಸಿವೆ ಹಾಗೂ ಅವರ ಸಾಮಾಜಿಕ ಪ್ರತಿಷ್ಠೆಗೆ ಕಳಂಕ ತಂದಿವೆ ಎಂದು ವಕೀಲರು ಆರೋಪಿಸಿದ್ದಾರೆ.
ಸಿವಿಲ್ ಜಡ್ಜ್ ಕಾಂಚನ್ ಕುಮಾರ್ ಅವರ ಮುಂದೆ ಈ ದೂರಿನ ಪ್ರಾಥಮಿಕ ವಿಚಾರಣೆ ನಡೆಯಿತು. ನ್ಯಾಯಾಲಯವು ಪ್ರಕರಣವನ್ನು ದಾಖಲಿಸಿಕೊಂಡು, ಮುಂದಿನ ವಿಚಾರಣೆಯನ್ನು ಡಿಸೆಂಬರ್ 14ಕ್ಕೆ ನಿಗದಿಪಡಿಸಿದೆ.
ವಿವಾದವೂ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಎಚ್ಚೆತ್ತ ಧೀರೇಂದ್ರ ಶಾಸ್ತ್ರಿ, ನಾನು ಮಾತನಾಡಿರುವದರ ಹಿಂದೆ ಯಾವುದೇ ದುರುದ್ದೇಶವಿಲ್ಲ. ನನ್ನ ಹೆಸರಿನಲ್ಲೂ ಕೃಷ್ಣನಿದ್ದಾನೆ. ನಾನು ಕೂಡ ಭಾಗವತ ಕಥೆ ಹೇಳುವ ಕೃಷ್ಣ ಭಕ್ತ. ಶ್ರೀರಾಮ ಮತ್ತು ಶ್ರೀಕೃಷ್ಣ ಇಬ್ಬರೂ ಒಂದೇ ಪರಮಾತ್ಮನ ವಿಭಿನ್ನ ಅವತಾರ. ನನ್ನ ಮಾತಿನಿಂದ ನೋವಾಗಿದ್ದರೆ ಕ್ಷಮೆ ಇರಲಿ ಎಂದು ಹೇಳಿದ್ದರು.