

ಚಿಕ್ಕಮಗಳೂರು: ಇಡೀ ದೇಶವೇ ಬೆಚ್ಚಿಬೀಳುವ ದುಷ್ಕೃತ್ಯ ಕರ್ನಾಟಕದಲ್ಲಿ ಸಂಭವಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ. ತಾಯಿಯನ್ನು ಕಳೆದುಕೊಂಡು ದುಃಖದಲ್ಲಿದ್ದ 15ರ ಬಾಲೆ ಮೇಲೆ 30ಕ್ಕೂ ಹೆಚ್ಚು ಮಂದಿ ನಾಲ್ಕೈದು ತಿಂಗಳಿಂದ ಸಾಮೂಹಿಕ ಅತ್ಯಾಚಾರವೆಸಗಿದ್ದು, 15ಕ್ಕೂ ಅಧಿಕ ಆರೋಪಿಗಳ ಗುರುತೇ ಆಕೆಗಿಲ್ಲ.
ಲೈಂಗಿಕ ದೌರ್ಜನ್ಯವೆಸಗುತ್ತಾ ಆ ಕೃತ್ಯದ ದುಶ್ಯವನ್ನ ವಿಡಿಯೋ ರೆಕಾರ್ಡ್ ಮಾಡಿ ದುಷ್ಕರ್ಮಿಗಳು ಬ್ಲಾಕ್‌ಮೇಲ್ ಮಾಡಿ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದ್ದಾರೆ. ಇಂತಹ ಹೀನ ಕೃತ್ಯ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಗೋಚವಳ್ಳಿ ಗ್ರಾಮದಲ್ಲಿ ಸಂಭವಿಸಿದೆ.
ಸಂತ್ರಸ್ತ ಬಾಲಕಿ ಹೇಳಿಕೆ ಆಧಾರಿಸಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಅವರು ಶನಿವಾರ ರಾತ್ರಿ ಶೃಂಗೇರಿ ಸಿಡಿಪಿಒ ಎನ್.ಜಿ.ರಾಘವೇಂದ್ರ ಅವರ ಮೂಲಕ ನೀಡಿದ ದೂರನ್ನು ಆಧರಿಸಿ ಒಟ್ಟು 17 ಆರೋಪಿಗಳ ವಿರುದ್ಧ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.