

ಬೆಂಗಳೂರು: ಬಾಲಿವುಡ್ ಗಾಯಕ ಮಕ್ಸೂದ್ ಅಲಿ ಅಲಿಯಾಸ್ ಲಕ್ಕಿ ಅಲಿ ಮತ್ತು ಅವರ ಬೆಂಬಲಿಗ ನಗರದ ವಾಸುದೇವಪುರದಲ್ಲಿರುವ (ಕೆಂಚೇನಹಳ್ಳಿ) ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿ ಗಿಡಗಳನ್ನು ನಾಶಪಡಿಸುವ ಮೂಲಕ ಸುಮಾರು 75 ಲಕ್ಷ ರೂ. ನಷ್ಟ ಉಂಟುಮಾಡಿದ ಆರೋಪದಲ್ಲಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಅತ್ತೆ ದಾಖಲಿಸಿರುವ ಎಫ್‌ಐಆರ್‌ಗೆ ತಡೆಯಾಜ್ಞೆ ನೀಡಿರುವ ಆದೇಶವನ್ನು ಹೈಕೋರ್ಟ್ ವಿಸ್ತರಿಸಿದೆ. ಅಲ್ಲದೆ ಜ. 6ರಂದು ಪ್ರಕರಣ ಇತ್ಯರ್ಥಪಡಿಸಲಾಗುವುದು ಎಂದಿದೆ.
ಗಾಯಕ ಲಕ್ಕಿ ಅಲಿ ಮತ್ತು ಬೆಂಗಳೂರಿನ ಮೈಲಪ್ಪನಹಳ್ಳಿಯ ಶ್ರೀನಿವಾಸ್ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ರೋಹಿಣಿ ಸಿಂಧೂರಿ ಅವರ ಅತ್ತೆ ಜಿ. ಬುಜ್ಜಮ್ಮ ಪರ ಪ್ರತಿನಿಧಿಸಿರುವ ಹಿರಿಯ ವಕೀಲ ಕೆ.ಎನ್. ಫಣೀಂದ್ರ ಅವರು, ನ್ಯಾಯಾಲಯವು ತಮಗೆ ಔಪಚಾರಿಕ ನೋಟಿಸ್ ಜಾರಿ ಮಾಡದಿದ್ದರೂ ಮಾಧ್ಯಮಗಳು ಆ ರೀತಿ ಬಿಂಬಿಸಿವೆ. ಸೊಸೆ ರೋಹಿಣಿ ಸಿಂಧೂರಿ ಅವರ ಫೋಟೋವನ್ನು ಬಳಕೆ ಮಾಡಲಾಗಿದೆ. ಇದು ಏಕೆ ಎಂಬುದು ಗೊತ್ತಾಗುತ್ತಿಲ್ಲ? ಅರ್ಜಿದಾರರ ಪರವಾಗಿ ಮಧ್ಯಂತರ ತಡೆ ನೀಡುವಾಗ ದೂರುದಾರೆ ಬುಜ್ಜಮ್ಮ ಅವರ ಸೊಸೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಎಂಬ ಏಕೈಕ ವಿಚಾರವನ್ನು ನ್ಯಾಯಾಲಯ ಪರಿಗಣಿಸಿದೆ ಎಂದು ಆಕ್ಷೇಪಿಸಿದರು.
ಅರ್ಜಿಯಲ್ಲಿ ವಾಸ್ತವಿಕ ವಿಚಾರಗಳನ್ನು ಮರೆಮಾಚಲಾಗಿದೆ. 1991ರಲ್ಲಿ ಲಕ್ಕಿ ಅಲಿ ಮತ್ತು ಅವರ ಸಹೋದರ ಆಸ್ತಿ ಮಾರಾಟ ಮಾಡಿದ್ದಾರೆ. 1993ರಲ್ಲಿ ದಾವೆ ಹೂಡಿದ್ದರು. ನಂತರ ಸಂಧಾನ ನಡೆದಿತ್ತು. ಜಮೀನು ಸದ್ಯ ಖರೀದಿ ಮಾಡಿದವರ ವಶದಲ್ಲಿದ್ದು, ಅವರೇ ಪೂರ್ಣ ಮಾಲೀಕರಾಗಿದ್ದಾರೆ ಎಂದು ಹೇಳಲಾಗಿದೆ. ಮೊದಲ ಬಾರಿಯ ಸಂಧಾನದ ನಂತರ ಮತ್ತೊಮ್ಮೆ ಲಕ್ಕಿ ಅಲಿ ಅವರು ಇನ್ನೊಂದು ದಾವೆ ಹೂಡಿದ್ದಾರೆ ಎಂದರು.
ವಿಚಾರಣಾಧೀನ ನ್ಯಾಯಾಲಯವು ಆರು ವರ್ಷಗಳ ಹಿಂದೆ ನಮ್ಮ ಪರವಾಗಿ ಲಕ್ಕಿ ಅಲಿ ವಿರುದ್ಧವಾಗಿ ಪ್ರತಿಬಂಧಕ ಆದೇಶ ಮಾಡಿತ್ತು. ಮೆರಿಟ್ ಆಧಾರದಲ್ಲಿ ಅಕ್ಟೋಬರ್‌ನಲ್ಲಿ ಪ್ರತಿಬಂಧಕ ಆದೇಶ ತೆರವಾಗಿದೆ. ನಾವು ಎಂಎಫ್‌ಎ (ಮಿಸಲೇನಿಯಸ್ ಫಸ್ಟ್ ಅಪೀಲ್) ಹಾಕಿದ್ದು, ತಕ್ಷಣ ಅವರು ಕೇವಿಯಟ್ ಹಾಕಿದ್ದಾರೆ. ಡಿ.4ರಂದು ಈ ನ್ಯಾಯಾಲಯವು ಪ್ರತಿಬಂಧಕಾದೇಶ ಮಾಡಿದೆ. ಈ ನಡುವೆ ಲಕ್ಕಿ ಅಲಿ ಮತ್ತು ಅವರ ಕಡೆಯವರು ಜಮೀನಿನ ಕಾಂಪೌಂಡ್ ನಾಶಪಡಿಸಿದ್ದಾರೆ. ಅರ್ಜಿಯಲ್ಲಿ ಉಲ್ಲೇಖಿಸಿರುವ ಆಧಾರಗಳಲ್ಲಿ ವಾಸ್ತವಿಕ ವಿಚಾರಗಳನ್ನು ಬಚ್ಚಿಡಲಾಗಿದೆ ಎಂದು ದೂರಿದರು.