

ಬೆಂಗಳೂರು: ಸಿಟಿ ಸಿವಿಲ್ ನ್ಯಾಯಾಲಯದ ಹೌಸ್ ಕೀಪಿಂಗ್ ನೌಕರರಿಗೆ ಇಪಿಎಫ್ ಜಮೆ ಮಾಡದೆ ವಂಚನೆ ಮಾಡಿದ್ದ ಗುತ್ತಿಗೆ ಕಂಪನಿ ವಿರುದ್ಧ ಹಲಸೂರು ಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿಟಿ ಸಿವಿಲ್ ಕೋರ್ಟ್‌ನ ಸಹಾಯಕ ರಿಜಿಸ್ಟ್ರಾರ್ ನೀಡಿದ ದೂರಿನ ಮೇರೆಗೆ ಮೈಸೂರು ರಸ್ತೆ ಪಂತರಪಾಳ್ಯದ ವೀರಭದ್ರೇಶ್ವರ ಹೌಸ್ ಕೀಪಿಂಗ್ ಆಪರೇಟರ್ ಸಿದ್ದಪ್ಪ ಎಸ್. ಅಂಗಡಿ ವಿರುದ್ಧ ಕೇಸ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 2019ನೇ ಸಾಲಿನಿಂದ ಸಿಟಿ ಸಿವಿಲ್ ನ್ಯಾಯಾಲಯಕ್ಕೆ ಮಾನವ ಸಂಪನ್ಮೂಲ ಒದಗಿಸಲು ಸಿದ್ದಪ್ಪ ಹೊರಗುತ್ತಿಗೆ ಪಡೆದಿದ್ದ.
2021ರ ಏ.1 ರಿಂದ 2024ರ ಮಾ.31ರ ವರೆಗೆ ಇಪಿಎಫ್ ಪಾವತಿ ಮಾಡಿರುವ ಬಗ್ಗೆ ವರದಿ ಕೇಳಲಾಗಿತ್ತು. ಅಲ್ಲದೆ, ಸಿಟಿ ಸಿವಿಲ್ ಕೋರ್ಟ್ ಕಡೆಯಿಂದ ಏಜೆನ್ಸಿಗೆ 25,09,398 ರೂ.ಗಳನ್ನು ಪಾವತಿಸಲಾಗಿತ್ತು. ಸಿದ್ದಪ್ಪ ಇಪಿಎಫ್ ಕಚೇರಿಗೆ ಕೇವಲ 13,04,154 ರೂ. ಜಮೆ ಮಾಡಿದ್ದು, ಉಳಿದ 12 ಲಕ್ಷ ರೂ. ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.