ಅಭಿಷೇಕ್ ಬ್ಯಾನರ್ಜಿ, ಬಂಗಾಳ ಸಚಿವ ಬ್ರತ್ಯ ಬಸು ವಿರುದ್ಧ ಕೇಸ್​!

abhishek
Published on

ಅಗರ್ತಲ : ತೃಣಮೂಲ ಕಾಂಗ್ರೆಸ್​(ಟಿಎಂಸಿ)ನ ಜನರಲ್ ಸೆಕ್ರೆಟರಿ ಅಭಿಷೇಕ್​ ಬ್ಯಾನರ್ಜಿ, ಪಶ್ಚಿಮ ಬಂಗಾಳದ ಶಿಕ್ಷಣ ಸಚಿವ ಬ್ರತ್ಯ ಬಸು, ಸಂಸದೆ ಡೋಲಾ ಸೇನ್, ಪಕ್ಷದ ವಕ್ತಾರ ಕುನಾಲ್​ ಘೋಷ್​ ಮತ್ತು ಇತರರ ಮೇಲೆ ತ್ರಿಪುರ ಪೊಲೀಸರು ಕೇಸು ದಾಖಲಿಸಿದ್ದಾರೆ. ಕರ್ತವ್ಯನಿರತ ಪೊಲೀಸರೊಂದಿಗೆ ದುರ್ವರ್ತನೆ ನಡೆಸಿದ ಆರೋಪದ ಮೇಲೆ, ಐಪಿಸಿ ಸೆಕ್ಷನ್ 186 ರಡಿ ಸುಯೋ ಮೋಟೋ ಎಫ್​ಐಆರ್​ ದಾಖಲಿಸಲಾಗಿದೆ ಎಂದು ಖೋವಾಯಿ ಜಿಲ್ಲೆ ಎಸ್ಪಿ ಕಿರಣ್​ ಕುಮಾರ್​ ತಿಳಿಸಿದ್ದಾರೆ.

ಮೂರು ದಿನಗಳ ಹಿಂದೆಯಷ್ಟೆ ಢಲಾಯಿ ಜಿಲ್ಲೆಯ ಅಂಬಸ್ಸಾದಿಂದ ಅಗರ್ತಲಕ್ಕೆ ಹಿಂತಿರುಗುತ್ತಿದ್ದ ಟಿಎಂಸಿ ಸದಸ್ಯರು ಮತ್ತು ಆಡಳಿತಾರೂಢ ಬಿಜೆಪಿ ಬೆಂಬಲಿಗರ ನಡುವೆ ಘರ್ಷಣೆ ಉಂಟಾಗಿತ್ತು. 14 ಟಿಎಂಸಿ ಕಾರ್ಯಕರ್ತರನ್ನು ಕರೊನಾ ನಿಯಮ ಉಲ್ಲಂಘನೆ ಮತ್ತು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಡಚಣೆ ಮಾಡಿದ್ದಕ್ಕಾಗಿ ಖೊವಾಯಿ ಜಿಲ್ಲಾ ಪೊಲೀಸರು ಬಂಧಿಸಿದ್ದರು. ಬಂಧಿತರಿಗೆ ಸ್ಥಳೀಯ ಕೋರ್ಟ್​ ಅದೇ ದಿನ ಮಧ್ಯಂತರ ಜಾಮೀನು ನೀಡಿ ಬಿಡುಗಡೆ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಕೊಲ್ಕತದಿಂದ ತ್ರಿಪುರಕ್ಕೆ ಪ್ರಯಾಣ ಬೆಳೆಸಿದ್ದ ಅಭಿಷೇಕ್​ ಬ್ಯಾನರ್ಜಿ, ಜಾಮೀನು ಸಿಕ್ಕ ತಮ್ಮ ಕಾರ್ಯಕರ್ತರೊಂದಿಗೆ ಅದೇ ದಿನ ವಾಪಸಾಗಿದ್ದರು ಎನ್ನಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net