

Accident: ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಶನಿವಾರ ರಾತ್ರಿ ಕಾರು ನಿಯಂತ್ರಣ ತಪ್ಪಿ ಶಿಪ್ರಾ ನದಿಗೆ ಬಿದ್ದಿದ್ದು, ಕಾರಿನಲ್ಲಿ ಉನ್ಹೆಲ್ ಠಾಣೆಯ ಪಿಎಸ್ಐ ಅಶೋಕ್ ಶರ್ಮಾ ಸೇರಿ ಮೂವರು ಪೊಲೀಸ್ ಅಧಿಕಾರಿಗಳು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಸೋಮವಾರ(ಸೆ. 08) ಎನ್ಡಿಟಿವಿ ವರದಿ ಮಾಡಿದೆ.
ಘಟನೆಯಲ್ಲಿ ಪಿಎಸ್ಐ ಅಶೋಕ್ ಶರ್ಮಾ, ಸಬ್-ಇನ್ಸ್‌ಪೆಕ್ಟರ್ ಮದನ್‌ಲಾಲ್ ನಿನಾಮ ಸೇರಿದಂತೆ ಇಬ್ಬರು ಪೊಲೀಸ್ ಅಧಿಕಾರಿಗಳ ಮೃತದೇಹಗಳು ಪತ್ತೆಯಾಗಿದ್ದು, ವಾಹನ ಚಲಾಯಿಸುತ್ತಿದ್ದ ಮಹಿಳಾ ಕಾನ್‌ಸ್ಟೆಬಲ್ ಆರತಿ ಪಾಲ್‌ಗಾಗಿ ಹುಡುಕಾಟ ಮುಂದುವರೆದಿದೆ.
ಶನಿವಾರ ರಾತ್ರಿ 8:55 ರ ಸುಮಾರಿಗೆ ಜುನಾ ಸೋಮವಾರಿಯಾದಿಂದ ಬದ್ನಗರ ರಸ್ತೆಗೆ ಹೋಗುತ್ತಿದ್ದ ಬಿಳಿ ಬಣ್ಣದ ಕಾರು ನಿಯಂತ್ರಣ ತಪ್ಪಿ ನದಿಗೆ ಬಿದ್ದಿದ್ದು, ಅಪಘಾತ ಸಂಭವಿಸಿದೆ. ಬಾಲಕಿ ಕಾಣೆಯಾದ ಕೇಸ್ವೊಂದರ ಸಂಬಂಧ ತೆರಳುತ್ತಿದ್ದರು ಎನ್ನಲಾಗಿದೆ. ಈ ಘಟನೆಯ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆಳವಾದ ಹೊಂಡಗಳು ಮತ್ತು ಪ್ರವಾಹದಿಂದಾಗಿ ವಾಹನ ಸಿಲುಕಿಕೊಂಡು ಮೂವರು ಸಾವನ್ನಪ್ಪಿದ್ದಾರೆ.
ಸ್ಥಳದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ತಂಡ, 65 ಗೃಹರಕ್ಷಕ ದಳದ ಸಿಬ್ಬಂದಿ ಮತ್ತು ಸ್ಥಳೀಯ ಈಜುಗಾರರು ಶೋಧ ಕಾರ್ಯಾಚರಣೆಯನ್ನು ನಡೆಸಿದರು. ಹೆಚ್ಚುವರಿಯಾಗಿ, ಐದು ದೋಣಿಗಳನ್ನು ಸಹ ಬಳಸಲಾಗಿದೆ.
ಈ ಕುರಿತು ಎಸ್ಪಿ ಪ್ರದೀಪ್ ಶರ್ಮಾ ಮಾತನಾಡಿ, ಇದು ಅತ್ಯಂತ ದುರಂತ ಘಟನೆ. ಉನ್ಹೇಲ್ ಪೊಲೀಸ್ ಠಾಣೆಯ ಪಿಎಸ್ಐ ಅಶೋಕ್ ಶರ್ಮಾ, ಸಬ್-ಇನ್ಸ್‌ಪೆಕ್ಟರ್ ನಿನಾಮ ಹಾಗೈ ಮಹಿಳಾ ಕಾನ್‌ಸ್ಟೆಬಲ್ ಆರತಿ ಪಾಲ್ ಸೇರಿದಂತೆ ನಮ್ಮ ಮೂವರು ಪೊಲೀಸ್ ಅಧಿಕಾರಿಗಳನ್ನು ನಾವು ಕಳೆದುಕೊಂಡಿದ್ದೇವೆ. ಹದಿನಾಲ್ಕು ವರ್ಷದ ಬಾಲಕಿ ನಾಪತ್ತೆಯಾಗಿದ್ದಳು. ಮಾಹಿತಿ ಸಿಕ್ಕ ನಂತರ ಅವರು ಚಿಂತಾಮನ್ ಕಡೆಗೆ ತೆರಳಿದರು. ಪ್ರಯಾಣದ ಸಮಯದಲ್ಲಿ, ಮಹಿಳಾ ಕಾನ್‌ಸ್ಟೆಬಲ್ ಕಾರನ್ನು ಚಲಾಯಿಸುತ್ತಿದ್ದರು. ಕಾರು ಸಮತೋಲನ ಕಳೆದುಕೊಂಡು ದೊಡ್ಡ ಸೇತುವೆಯ ಕೆಳಗೆ ಬಿದ್ದಿತು. ನಮ್ಮ ಹುಡುಕಾಟ ತಂಡವು ರಾತ್ರಿಯಿಡೀ ಹುಡುಕುತ್ತಿದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)