

ಬೆಂಗಳೂರು: ಕಾರು ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ದ್ವಿಚಕ್ರ ವಾಹನ ಸವಾರ ಮೃತಪಟ್ಟಿದ್ದಾರೆ.
ಕಾಟನ್‌ಪೇಟೆ ನಿವಾಸಿ ಶಂಕರ್ ಅಲಿಯಾಸ್ ಪಾಚಪ್ಪ(೪೧) ಮೃತ ಸವಾರ. ಶುಕ್ರವಾರ ಬೆಳಗ್ಗೆ ೧೧.೩೦ರ ಸುಮಾರಿಗೆ ಉಲ್ಲಾಳ ಕೆರೆ ಬಳಿಯ ೧೦೦ ಅಡಿ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ತೆರಳುವಾಗ ಈ ಅಪಘಾತ ಸಂಭವಿಸಿದೆ. ತಮಿಳುನಾಡು ಮೂಲದ ಶಂಕರ್ ವೃತ್ತಿಯಲ್ಲಿ ಕಾರ್ಪೆಂಟರ್ ಆಗಿದ್ದು, ಹಲವು ವರ್ಷಗಳಿಂದ ಕಾಟನ್‌ಪೇಟೆಯಲ್ಲಿ ನೆಲೆಸಿದ್ದರು. ಶುಕ್ರವಾರ ಬೆಳಗ್ಗೆ ಕೆಲಸದ ನಿಮಿತ್ತ ಉಲ್ಲಾಳ ಕೆರೆ ಸಮೀಪದ ೧೦೦ ಅಡಿ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಹೋಗುವಾಗ ಹಿಂದಿನಿಂದ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ದ್ವಿಚಕ್ರ ವಾಹನ ಸಹಿತ ರಸ್ತೆಗೆ ಬಿದ್ದ ಶಂಕರ್ ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಹೆಚ್ಚಿನ ಚಿಕಿತ್ಸೆ ಹಿನ್ನೆಲೆಯಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ತಡರಾತ್ರಿ ಶಂಕರ್ ಮೃತಪಟ್ಟಿದ್ದಾರೆ. ಈ ಸಂಬಂಧ ಜ್ಞಾನಭಾರತಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.