ಬಿಡಾಡಿ ದನಗಳನ್ನು ರಕ್ಷಿಸಲು ಹೋಗಿ ಕಾರು ಪಲ್ಟಿ: ಪ್ರಾಣ ಬಿಟ್ಟ ಐವರು

shravasti
Published on

ಕಾನ್ಪುರ: ಬಿಡಾಡಿ ದನಗಳನ್ನು ರಕ್ಷಿಸಲು ಹೋಗಿ ಕಾರು ಪಲ್ಟಿಯಾಗಿ ಐವರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಶ್ರಾವಸ್ತಿಯಲ್ಲಿ ನಡೆದಿದೆ.

ನೀಲಾಂಶ್​ ಗುಪ್ತಾ (25) ನಿತಿ ಗುಪ್ತಾ (18), ವೈಭವ್ (28), ಮತ್ತು ಇಬ್ಬರು ಮಕ್ಕಳು( ಗುರುತು ಪತ್ತೆಯಾಗಿಲ್ಲ) ಮೃತ ದುರ್ದೈವಿಗಳಾಗಿದ್ದು, ಎಲ್ಲರೂ ನೇಪಾಳಗಂಜ್ ಜಿಲ್ಲೆಯ ತ್ರಿಭುವನ್ ಚೌಕ್‌ನ ನಿವಾಸಿಗಳೆಂದು ಹೇಳಲಾಗಿದೆ.

ಇದನ್ನೂ ಓದಿ: ಏಕಾಏಕಿ ಬಿಜೆಪಿ ಸಂಸದನ ಕಚೇರಿ ಧ್ವಂಸಗೊಳಿಸಿ, ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಪುಂಡರು

ಶನಿವಾರ ತಡರಾತ್ರಿ ಕಾರು ಬಲರಾಂಪುರದಿಂದ ನೇಪಾಳಗಂಜ್​ಗೆ ಹೋಗುತ್ತಿತ್ತು. ಏತನ್ಮಧ್ಯೆ, ಇಕೌನಾ ಪೊಲೀಸ್ ಠಾಣಾ ವ್ಯಾಪ್ತಿಯ ಸೀತಾದ್ವಾರದ ಬಳಿ ಬಿಡಾಡಿ ಪ್ರಾಣಿಯನ್ನು ರಕ್ಷಿಸುವ ಪ್ರಯತ್ನದಲ್ಲಿ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಹಾರಿ ಸಮೀಪದಲ್ಲಿದ್ದ ಹಳ್ಳದಲ್ಲಿ ಪಲ್ಟಿಯಾಗಿದೆ.

ಘಟನೆ ಬಗ್ಗೆ ಮಾಹಿತಿ ಪಡೆದ ಐಕೌನಾ ಪೊಲೀಸರು ಸಮೀಪದ ಗ್ರಾಮಸ್ಥರ ಸಹಾಯದಿಂದ ಸ್ಥಳಕ್ಕಾಗಮಿಸಿ ವಾಹನದಲ್ಲಿ ಸಿಲುಕಿದ್ದ ಗಾಯಾಳುಗಳನ್ನು ಹೊರತೆಗೆದರೂ ಅಷ್ಟರಲ್ಲಾಗಲೇ ಐವರು ಮೃತಪಟ್ಟಿದ್ದರು. ಇನ್ನು, ಗಂಭೀರವಾಗಿ ಗಾಯಗೊಂಡ ಇಬ್ಬರನ್ನು ಬಹ್ರೈಚ್ ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಗಿದ್ದು, ಗಾಯಾಳುಗಳ ಸ್ಥಿತಿ ಚಿಂತಾಜನಕವಾಗಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net