

ಬೆಂಗಳೂರು: ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ವಿಭಜಕದಿಂದ ಹಾರಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದು ಉರುಳಿ ಬಿದ್ದು ಬೆಂಕಿ ಹೊತ್ತಿಕೊಂಡು ಉರಿದ ಪರಿಣಾಮ ಮಹಿಳೆ ಹಾಗೂ ಇಬ್ಬರು ಮಕ್ಕಳು ಸಜೀವ ದಹನವಾಗಿರುವ ದಾರುಣ ಪ್ರಕರಣ ನೈಸ್ ರಸ್ತೆಯ ಸೋಮಪುರ ಕ್ಲೋವರ್ ಲೀಫ್ ಬಳಿ ಮಂಗಳವಾರ ಮುಂಜಾನೆ ನಡೆದಿದೆ.
ರಾಮಮೂರ್ತಿನಗರದ ವಿಜಿನಾಪುರ ನಿವಾಸಿಗಳಾದ ಸಿಂಧೂ(೩೧) ಹಾಗೂ ಆಕೆಯ ಇಬ್ಬರು ಮಕ್ಕಳಾದ ಕುಶವಿ(೨) ಮತ್ತು ಪ್ರಣವಿ(೬) ಮೃತ ದುರ್ದೈವಿಗಳು. ಕಾರು ಚಾಲಕನಾದ ಪತಿ ಮಹೇಂದ್ರನ್(೩೫) ಗಂಭೀರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಮಿಳುನಾಡಿನ ಸೇಲಂ ಮೂಲದ ಮಹೇಂದ್ರನ್ ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದಾರೆ. ಕೆಲ ವರ್ಷಗಳಿಂದ ಪತ್ನಿ ಹಾಗೂ ಮಕ್ಕಳೊಂದಿಗೆ ನಗರದ ವಿಜಿನಾಪುರದಲ್ಲಿ ನೆಲೆಸಿದ್ದರು. ಟಾಟಾ ನೆಕ್ಸಾನ್ ಕಾರಿನಲ್ಲಿ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಮಂಗಳವಾರ ಮುಂಜಾನೆ ೨.೫೦ರ ಸುಮಾರಿಗೆ ನೈಸ್ ರಸ್ತೆಯಲ್ಲಿ ಮೈಸೂರು ರಸ್ತೆ ಕಡೆಯಿಂದ ಕನಕಪುರ ರಸ್ತೆ ಕಡೆಗೆ ಬರುವಾಗ ಮಾರ್ಗದ ಸೋಮಪುರ ಕ್ಲೋವರ್ ಲೀಫ್ ಬಳಿ ನಿಯಂತ್ರಣ ತಪ್ಪಿದ ಕಾರು, ರಸ್ತೆ ವಿಭಜದ ಮೇಲೆ ಹತ್ತಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದು ಉರುಳಿ ಬಿದ್ದಿದೆ. ಡಿಕ್ಕಿಯ ರಭಸಕ್ಕೆ ಲಾರಿ ಉರುಳಿ ಬಿದ್ದಿದ್ದು, ಕಾರಿನಿಂದ ಇಂಧನ ಸೋರಿಕೆಯಾಗಿ ಕಾರು ಬೆಂಕಿಹೊತ್ತಿಕೊಂಡು ಉರಿಯಲು ಆರಂಭಿಸಿದೆ. ಈ ವೇಳೆ ಪತ್ನಿ ಸಿಂಧೂ ಮತ್ತು ಪುತ್ರಿ ಕುಶವಿ ಸಜೀವ ದಹನವಾಗಿದ್ದಾರೆ.
ಅಷ್ಟರಲ್ಲಿ ಅದೇ ಮಾರ್ಗದಲ್ಲಿ ಬಂದ ವಾಹನ ಸವಾರರು ನೆರವಿಗೆ ಧಾವಿಸಿ ಚಾಲಕ ಮಹೇಂದ್ರನ್ ಮತ್ತು ಮತ್ತೊಬ್ಬ ಪುತ್ರಿ ಪ್ರಣವಿಯನ್ನು ಕಾರಿನಿಂದ ಹೊರಗೆ ಕರೆತಂದಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ತಂದೆ-ಮಗಳನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ, ಚಿಕಿತ್ಸೆ ಫಲಿಸದೆ ಪ್ರಣವಿ ಮೃತಪಟ್ಟಿದ್ದಾಳೆ. ಈ ನಡುವೆ ಅಪಘಾತದ ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ಅಷ್ಟರಲ್ಲಿ ತಾಯಿ-ಮಗಳು ಸುಟ್ಟು ಕರಲಾಗಿದ್ದಾರೆ. ವಿಷಯ ತಿಳಿದು ತಲಘಟ್ಟಪುರ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.
ಅತೀವೇಗವೆ ಅಪಘಾತಕ್ಕೆ ಕಾರಣ?
ಅಪಘಾತಕ್ಕೆ ಅತಿಯಾದ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯೇ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಚಾಲಕ ಮಹೇಂದ್ರನ್ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಮುಂದುವರಿದಿದೆ. ಪತ್ನಿ ಮತ್ತು ಮಕ್ಕಳೊಂದಿಗೆ ಎಲ್ಲಿಗೆ ಹೋಗಿದ್ದರು ಎಂಬುದರ ಬಗ್ಗೆ ಸದ್ಯಕ್ಕೆ ಮಾಹಿತಿ ಲಭ್ಯವಿಲ್ಲ. ಈ ಸಂಬಂಧ ತಲಘಟ್ಟಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಫ್‌ಎಸ್‌ಎಲ್ ತಜ್ಞರು ಭೇಟಿ
ಮಹೇಂದ್ರನ್ ಚಾಲನೆ ಮಾಡುತ್ತಿದ್ದ ಕಾರು ರಸ್ತೆ ವಿಭಜದಿಂದ ಹಾರಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಲಾರಿಗೆ ಡಿಕ್ಕಿಹೊಡೆದ ರಭಸಕ್ಕೆ ಲಾರಿ ಸಹ ಉರುಳಿ ಬಿದ್ದಿದೆ. ಅದೃಷ್ಟವಶಾತ್ ಲಾರಿ ಚಾಲಕ ಸಣ್ಣ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಭೀಕರ ಅಪಘಾತದ ವಿಚಾರ ತಿಳಿದು ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಎಫ್‌ಎಸ್‌ಎಲ್ ತಜ್ಞರು ಬೆಳಗ್ಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.