

ತುಮಕೂರು: ಗುಬ್ಬಿ ತಾಲೂಕಿನ ಕೊಂಡ್ಲಿ ಕ್ರಾಸ್ ಬಳಿ ಕ್ಯಾಂಟರ್ ಲಾರಿ ಹಾಗೂ ಕಾರು ನಡುವೆ ಬುಧವಾರ ಭೀಕರ ಅಪಘಾತ ಸಂಭವಿಸಿದ್ದು, ಮಹಿಳೆ ಸೇರಿ ನಾಲ್ವರು ಮೃತಪಟ್ಟಿದ್ದಾರೆ.
ನಾರಾಯಣಪ್ಪ (50), ಇವರ ಪತ್ನಿ ನಾಗರತ್ನ(45), ಮಗ ಸಾಗರ್ (21) ಮತ್ತು ಸಂಬಂಧಿ ರಾಮಣ್ಣ (25) ಮೃತ ದುರ್ದೈವಿಗಳು. ಮೃತರೆಲ್ಲರೂ ಚಿಕ್ಕನಾಯಕನಹಳ್ಳಿ ತಾಲೂಕಿನ ನಡುವಿನಹಳ್ಳಿ ಗ್ರಾಮದವರು. ನಡುವಿನ ಹಳ್ಳಿಯಿಂದ ಬೆಂಗಳೂರಿಗೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಗುಬ್ಬಿ ತಾಲೂಕಿನ ಕೊಂಡ್ಲಿ ಕ್ರಾಸ್ ಬಳಿ ಕ್ಯಾಂಟರ್ ಲಾರಿ ಡಿಕ್ಕಿಯಾಗಿದೆ.
ಅಪಘಾತದ ರಭಸಕ್ಕೆ ಗಂಭೀರಗಾಯಗೊಂಡ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ನಾಗರತ್ನ ಕೊನೆಯುಸಿರೆಳೆದರು. ಮೃತದೇಹಗಳನ್ನುಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ. ಗುಬ್ಬಿ ಠಾಣೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ. (ದಿಗ್ವಿಜಯ ನ್ಯೂಸ್)