ಕೋಲಾರದಿಂದ ದೂರ ಮಾಡಲು ಸಾಧ್ಯವಿಲ್ಲ

muniyappa
ಕೆ.ಎಚ್.ಮುನಿಯಪ್ಪ
Published on

ಕೋಲಾರ: ಕೋಲಾರ ಲೋಕಸಭಾ ಕ್ಷೇತ್ರದಿಂದ 7 ಬಾರಿ ಸಂಸದನಾಗಿ ಆಯ್ಕೆಯಾಗಿದ್ದೇನೆ. ಸೋತಾಗಲೂ ಹೆಚ್ಚಿನ ಮತದಾರರು ನನ್ನನ್ನು ಬೆಂಬಲಿಸಿದ್ದಾರೆ. ನನ್ನ ಉಸಿರು ಇರುವವರೆಗೂ ಕ್ಷೇತ್ರದಿಂದ ನನ್ನನ್ನು ದೂರ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಘಟಬಂಧನ್ ನಾಯಕರಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದರು.

ನಗರದ ಹಾರೋಹಳ್ಳಿ ಮತಗಟ್ಟೆಯಲ್ಲಿ ಮತ ಚಲಾಯಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಪ್ರಚಾರಕ್ಕೆ ಕರೆಯದೆ ಕೋಲಾರದಿಂದ ದೂರವಿಡುವ ತಂತ್ರ ನಡೆದಿದೆ ಎಂದು ನಿಮ್ಮ ಬೆಂಬಲಿಗರೇ ಬಹಿರಂಗವಾಗಿ ಆಕ್ರೋಶವ್ಯಕ್ತಪಡಿಸಿದ್ದಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ನಾನು ಕರೆದ ಕಡೆ ಬಂದು ಪ್ರಚಾರ ಮಾಡಿದ್ದೇನೆ. ಕಾಂಗ್ರೆಸ್ ಗೆಲ್ಲಿಸುವುದು ನಮ್ಮ ಗುರಿ ಎಂದರು.
ಇAಡಿ -ಎನ್‌ಡಿಎ ಸಮಾನ ಸ್ಥಾನ ಪಡೆಯುವ ಸಾಧ್ಯತೆ ಇದೆ ಎಂದು ಸಮೀಕ್ಷೆಗಳಲ್ಲಿ ತಿಳಿದು ಬಂದಿದೆ. ಜನತೆ ನಾವು ನೀಡಿರುವ ಗ್ಯಾರಂಟಿಗಳಿಗೆ ಒಲವು ತೋರಿದ್ದಾರೆ. ಕೇಂದ್ರದಲ್ಲಿ ನಮ್ಮ ಮೈತ್ರಿಕೂಟ ಅಧಿಕಾರಕ್ಕೆ ಬರುವುದು ಖಚಿತ ಎಂದರು.
ವಿಧಾನಸಭಾ ಚುನಾವಣೆಗೂ ಮುನ್ನ ನೀಡಿದ್ದ ಪ್ರಣಾಳಿಕೆಯಂತೆ ಐದು ಗ್ಯಾರಂಟಿ ನೀಡಿದ್ದೇವೆ. ಗ್ಯಾರಂಟಿಗಳಿಗಾಗಿ ೨೦೨೪ನೇ ಸಾಲಿಗೆ ಬಜೆಟ್‌ನಲ್ಲಿ 59 ಸಾವಿರ ಕೋಟಿ ರೂ. ಮೀಸಲಿಟ್ಟಿದ್ದೇವೆ. ಜತೆಗೆ ಲೋಕಸಭಾ ಚುನಾವಣೆಯಲ್ಲೂ ರೈತರ ಸಾಲಮನ್ನಾ, ಸ್ವಾಮಿನಾಥನ್ ವರದಿಯಂತೆ ಬೆಂಬಲ ಬೆಲೆ, ಮಹಾಲಕ್ಕ್ಷಿಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ 1 ಲಕ್ಷ ರೂ., ಯುವಕರಿಗೆ ತರಬೇತಿಗೆ 1 ಲಕ್ಷ ನೆರವು, 25 ಲಕ್ಷ ವಿಮೆ ಗ್ಯಾರಂಟಿ ನೀಡಿದ್ದೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net