

| ಕೀರ್ತಿನಾರಾಯಣ ಸಿ. ಬೆಂಗಳೂರು
ಸೇವೆಯಲ್ಲಿರುವಾಗಲೇ ಮೃತಪಟ್ಟ ಸರ್ಕಾರಿ ನೌಕರನ ಅವಲಂಬಿತ ಕುಟುಂಬ ಸದಸ್ಯರೊಬ್ಬರಿಗೆ ಅನುಕಂಪದ ಆಧಾರದಲ್ಲಿ ಸಿಗಬೇಕಾದ ಉದ್ಯೋಗಕ್ಕೆ ಕರೊನಾ ಕುತ್ತು ತಂದೊಡ್ಡಿದೆ. ಎರಡು ವರ್ಷ ಪರೀಕ್ಷೆಗಳು ಸ್ಥಗಿತಗೊಂಡಿದ್ದರಿಂದ ವಿದ್ಯಾರ್ಹತೆ ಹೊಂದಲಾಗದ ಅಭ್ಯರ್ಥಿಗಳೀಗ ಅನುಕಂಪದ ಹುದ್ದೆಗಾಗಿ ಸರ್ಕಾರಿ ಕಚೇರಿಗಳಿಗೆ ಅಲೆಯಬೇಕಾದ ಪರಿಸ್ಥಿತಿ ಉದ್ಬವಿಸಿದೆ.
2019-20 ಹಾಗೂ 2020-21ನೇ ಸಾಲಿನಲ್ಲಿ ಕರೊನಾ ಲಾಕ್ಡೌನ್ ವಿಧಿಸಿದ್ದರಿಂದ ದ್ವಿತೀಯ ಪಿಯು ಪರೀಕ್ಷೆಗಳು ನಡೆಯಲಿಲ್ಲ. ಪ್ರಥಮ ಪಿಯು ಅಂಕಗಳನ್ನು ಆಧರಿಸಿ ವಿದ್ಯಾರ್ಥಿಗಳನ್ನು ಪಾಸ್ ಮಾಡಲಾಗಿತ್ತು. ಡಿಪ್ಲೊಮಾ, ಇಂಜಿನಿಯರಿಂಗ್, ಪದವಿ ಹಾಗೂ ಇನ್ನಿತರ ತತ್ಸಮಾನ ವಿದ್ಯಾರ್ಹತೆಗಳ ಫಲಿತಾಂಶ ಕೂಡ ವಿಳಂಬವಾಗಿತ್ತು. ಈ ಎರಡು ವರ್ಷಕ್ಕೆ ಅನ್ವಯಿಸುವಂತೆ ಅನುಕಂಪದ ಆಧಾರದಲ್ಲಿ ಅಭ್ಯರ್ಥಿಗಳು ಸಲ್ಲಿಸಿರುವ ಅರ್ಜಿಗಳ ವಿದ್ಯಾರ್ಹತೆಯನ್ನು ವಿಶೇಷ ಪ್ರಕರಣಗಳೆಂದು ಪರಿಗಣಿಸಿ ಹುದ್ದೆ ಕೊಡುವಂತೆ ಸರ್ಕಾರ ಆದೇಶಿಸಿತ್ತು. ಆದರೆ, 2019-20ನೇ ಸಾಲಿಗೂ ಮುನ್ನ ಪರೀಕ್ಷೆಗೆ ಹಾಜರಾಗಿ ಅನುತ್ತೀರ್ಣಗೊಂಡಿದ್ದ ಅಭ್ಯರ್ಥಿಗಳಿಗೆ ಈಗ ತೊಂದರೆಯಾಗಿದೆ.
2018-19ನೇ ಸಾಲಿನಲ್ಲಿ ಪಿಯು ಪರೀಕ್ಷೆ ಬರೆದು ಒಂದು ಅಥವಾ ಎರಡು ವಿಷಯದಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು, 2019-20ನೇ ಸಾಲಿನಲ್ಲಿ ಪರೀಕ್ಷೆ ಬರೆದು ಉತ್ತೀರ್ಣರಾಗಲು ಸಿದ್ಧತೆ ನಡೆಸಿದ್ದರು. ಆದರೆ, ಕರೊನಾ ಲಾಕ್ಡೌನ್ ಕಾರಣಕ್ಕೆ ಪರೀಕ್ಷೆಗಳೇ ನಡೆಯಲಿಲ್ಲ. ಅನುತ್ತೀರ್ಣಗೊಂಡಿದ್ದ ಅಭ್ಯರ್ಥಿಗಳು 2021-22ನೇ ಸಾಲಿನಲ್ಲಿ ಪರೀಕ್ಷೆ ಬರೆದು ಉತ್ತೀರ್ಣರಾಗಿದ್ದಾರೆ. ಪಾಸ್ ಆಗಿರುವ ದಾಖಲಾತಿಗಳು ಕೈ ಸೇರಿದ ನಂತರ ಅನುಕಂಪದ ಆಧಾರದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಕೋವಿಡ್ ಕಾಲದ ವಿಶೇಷ ಪ್ರಕರಣ ಎಂದು ಪರಿಗಣಿಸಲು ಅಧಿಕಾರಿಗಳು ನಿರಾಕರಿಸುತ್ತಿರುವುದರಿಂದ ನೌಕರಿ ಪಡೆಯಲು ಸಾಧ್ಯವಾಗುತ್ತಿಲ್ಲ. ಸರ್ಕಾರ ಸ್ಪಷ್ಟ ಆದೇಶ ಹೊರಡಿಸದ ಹಿನ್ನೆಲೆಯಲ್ಲಿ ಸರ್ಕಾರಿ ಕಚೇರಿಗಳ ಕೇಸ್ ವರ್ಕರ್ಗಳಿಗೂ ತಲೆನೋವಾಗಿದೆ.
ಅದರಲ್ಲೂ, ಕೋವಿಡ್ ಕಾಲದಲ್ಲಿ ಸಾವಿರಾರು ಸರ್ಕಾರಿ ಅಧಿಕಾರಿ ಮತ್ತು ನೌಕರರು ಸೋಂಕಿನಿಂದ ಮೃತಪಟ್ಟಿದ್ದಾರೆ. ಅವರ ಅವಲಂಬಿತ ಕುಟುಂಬ ಸದಸ್ಯರು ಅನುಕಂಪದ ಹುದ್ದೆಗೆ ಸಲ್ಲಿಸಿರುವ ಅರ್ಜಿಗಳನ್ನು ಪರಿಗಣಿಸಬೇಕೆ ಬೇಡವೇ ಎಂಬ ಬಗ್ಗೆ ಎಲ್ಲ ಇಲಾಖೆಗಳಲ್ಲೂ ಗೊಂದಲ ಬಗೆಹರಿದಿಲ್ಲ.
* 2019-20ಕ್ಕೂ ಮುನ್ನ ಪಿಯು ಪರೀಕ್ಷೆಯಲ್ಲಿ ಫೇಲಾಗಿ 2021-22ರಲ್ಲಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಸಲ್ಲಿಸಿರುವ ಅನುಕಂಪದ ಆಧಾರದ ಹುದ್ದೆಗೆ ಅರ್ಜಿಗಳನ್ನು ವಿಶೇಷ ಪ್ರಕರಣದಡಿ ಪರಿಗಣಿಸಿ ಸರ್ಕಾರ ಆದೇಶ ಹೊರಡಿಸಬೇಕು.
* ಕುಟುಂಬದ ಮುಖ್ಯಸ್ಥನನ್ನು ಕಳೆದುಕೊಂಡು ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬದ ನೆರವಿಗಾಗಿ ಒಬ್ಬ ಸದಸ್ಯನಿಗೆ ಅನುಕಂಪದ ನೌಕರಿ ನೀಡಬೇಕು.
* ಕೋವಿಡ್ ಕಾಲದ 2 ವರ್ಷ ಎಲ್ಲ ಪರೀಕ್ಷೆಗಳು ವಿಳಂಬವಾಗಿ ಫಲಿತಾಂಶ ಬಂದಿರುವ ಕಾರಣಕ್ಕೆ ಆ ಅವಧಿಯಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ವಿಶೇಷ ಪ್ರಕರಣದಡಿ ಪರಿಗಣಿಸಿರುವುದರಿಂದ ಅನುತ್ತೀರ್ಣ ಅಭ್ಯರ್ಥಿಗಳ ಅರ್ಜಿಗಳನ್ನೂ ಪರಿಗಣಿಸಬೇಕಿದೆ.
2020ರ ಮಾರ್ಚ್ನಲ್ಲಿ ದ್ವಿತೀಯ ಪಿಯು ಪರೀಕ್ಷೆ ಬರೆದಿದ್ದ. ಅದರಲ್ಲಿ ನಾಲ್ಕು ವಿಷಯ ಪಾಸ್ ಆಗಿ ಎರಡು ವಿಷಯದಲ್ಲಿ ಫೇಲ್ ಆಗಿದ್ದ. ಪೊಲೀಸ್ ಸಿಬ್ಬಂದಿಯಾಗಿದ್ದ ಆತನ ತಂದೆ ಡಿಸೆಂಬರ್ನಲ್ಲಿ ತೀರಿಕೊಂಡರು. ಎರಡು ವರ್ಷ ಪರೀಕ್ಷೆ ನಡೆಯದ ಕಾರಣಕ್ಕೆ 2022ರಲ್ಲಿ ನಡೆದ ಪರೀಕ್ಷೆ ಬರೆದು ಪಾಸ್ ಆಗಿದ್ದಾನೆ. ಆದರೆ, ಪರೀಕ್ಷೆ ಪಾಸಾದ ದಿನಾಂಕ ಹಾಗೂ ಅಂಕಪಟ್ಟಿ ಕೋವಿಡ್ ವಿಶೇಷ ಪ್ರಕರಣದಡಿ ಘೋಷಿಸಿದ ದಿನಾಂಕದ ಒಳಗಿಲ್ಲ ಎಂದು ನಿರಾಕರಿಸಲಾಗುತ್ತಿದೆ. ಕುಟುಂಬ ನೋಡಿಕೊಳ್ಳಬೇಕಿರುವುದರಿಂದ ನೌಕರಿ ಕೊಡಬೇಕಿದೆ. | ಪೊಲೀಸ್ ಅಧಿಕಾರಿ
ಒಂದೇ ವರ್ಷ 1,000 ನೌಕರರ ಸಾವು: 2020 ಮಾರ್ಚ್ನಿಂದ 2021ರ ಜೂನ್ವರೆಗೆ 1000ಕ್ಕೂ ಹೆಚ್ಚು ಕಾಯಂ ಹಾಗೂ ಗುತ್ತಿಗೆ ನೌಕರರು ಕೋವಿಡ್ನಿಂದ ಮೃತ ಪಟ್ಟಿದ್ದರು. 518ಕ್ಕೂ ಅಧಿಕ ಕಾಯಂ ಸರ್ಕಾರಿ ನೌಕರರು ಮೃತಪಟ್ಟಿದ್ದರು. ಪೊಲೀಸ್, ಆರೋಗ್ಯ, ಶಿಕ್ಷಣ, ಕೃಷಿ, ಕಂದಾಯ, ಪಂಚಾಯತ್ರಾಜ್, ಲೋಕೋಪಯೋಗಿ, ನೀರಾವರಿ, ಪಶು ಸಂಗೋಪನೆ, ಅರಣ್ಯ ಇಲಾಖೆಗಳ ನೌಕರರು ಹೆಚ್ಚು.
ಸರ್ಕಾರಿ ನೌಕರ ಸೇವೆಯಲ್ಲಿರುವಾಗಲೇ ಮೃತಪಟ್ಟಿದ್ದರೆ 1996ರ ನಿಯಮಗಳನ್ವಯ ಆತನ ಅವಲಂಬಿತರದಲ್ಲಿ ಒಬ್ಬರಿಗೆ ಅನುಕಂಪದ ಆಧಾರದಲ್ಲಿ ಉದ್ಯೋಗ ಕೊಡಲು ಅವಕಾಶ ಇದೆ.
ನೌಕರ ಮೃತಪಟ್ಟ ಒಂದು ವರ್ಷದ ಒಳಗಾಗಿ ಉದ್ಯೋಗ ಬಯಸಿ ಅರ್ಜಿ ಸಲ್ಲಿಸಬೇಕು. ವಿದ್ಯಾರ್ಹತೆ ದಾಖಲಾತಿಗಳನ್ನು ಕೊಡಬೇಕು. 1 ವರ್ಷ ಮೀರಿ ಸಲ್ಲಿಸಿದರೆ ಪರಿಗಣಿಸಲ್ಲ.
ಕೆಸಿಎಸ್ಆರ್ 1996ರ ನಿಯಮ 4(3) ಮತ್ತು 4(4)ರ ಅನುಸಾರ ಎಸ್ಎಸ್ಎಲ್ಸಿ ವಿದ್ಯಾರ್ಹತೆ ಇದ್ದರೂ ಅಥವಾ ಇಲ್ಲದಿದ್ದರೂ ಗ್ರೂಪ್ ಡಿ ಹುದ್ದೆ ಕೊಡಬಹುದು.
ಪದವಿಪೂರ್ವ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿದ್ದಲ್ಲಿ ಗ್ರೂಪ್ ಸಿ ವೃಂದದ ದ್ವಿತೀಯ ದರ್ಜೆ ಸಹಾಯಕ, ಕಿರಿಯ ಸಹಾಯಕ ಹುದ್ದೆಗೆ ನೇಮಕ ಮಾಡಲು ಅವಕಾಶ.