

ಬೆಂಗಳೂರು: ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಅಡಿಯಲ್ಲಿರುವ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ (ಐಟಿಐ) ಖಾಲಿ ಇರುವ ಕಿರಿಯ ತರಬೇತಿ ಅಧಿಕಾರಿಗಳು (ಜೆಟಿಒ) ಹುದ್ದೆಯ ಆಯ್ಕೆ ಪಟ್ಟಿಯನ್ನು ಹೈಕೋರ್ಟ್ ಆದೇಶದಂತೆ ಪರಿಷ್ಕರಿಸಿ ತಾತ್ಕಾಲಿಕ ಪಟ್ಟಿ ಪ್ರಕಟಿಸಿರೂ, ಅಂತಿಮ ಪಟ್ಟಿ ಪ್ರಕಟಿಸಲು ಕೆಪಿಎಸ್ಸಿ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿ ಕೆಪಿಎಸ್ಸಿ ಮುಂಭಾಗ ನೂರಾರು ಅಭ್ಯರ್ಥಿಗಳು ಸೋಮಾವಾರ ಪ್ರತಿಭಟಿಸಿರು.
ನೊಂದ ಅಭ್ಯರ್ಥಿಗಳು ಕೆಪಿಎಸ್ಸಿ ಮುಂಭಾಗ ಜಮಾಯಿಸಿ ಕಣ್ಣೀರು ಹಾಕಿದ್ದು, ಆಯೋಗದ ವಿಳಂಬ ಧೋರಣೆ ಖಂಡಿಸಿದ್ದಾರೆ. 2019ರಲ್ಲಿ ಪ್ರಕಟಿಸಿದ್ದ ಅಂತಿಮ ಆಯ್ಕೆ ಪಟ್ಟಿಯನ್ನು ಹೈಕೋರ್ಟ್ ನಿರ್ದೇಶನದಂತೆ ಕೆಪಿಎಸ್ಸಿ ಪರಿಷ್ಕರಿಸಿದೆ. ಆದರೆ, ಅಂತಿಮ ಪಟ್ಟಿ ಪ್ರಕಟಿಸಲು ಕೆಪಿಎಸ್ಸಿ ವಿಳಂಬ ಮಾಡುತ್ತಿರುವುದರಿಂದ, ಹುದ್ದೆಗೆ ಆಯ್ಕೆಯಾದರೂ ಕೆಲಸ ಸಿಗದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಐಟಿಐಗಳಲ್ಲಿ 23 ವಿವಿಧ ವೃಂದಗಳಲ್ಲಿ ಖಾಲಿ ಇರುವ ಜೆಟಿಒಗಳ ನೇಮಕಾತಿಗೆ 2018 ಫೆ. 19 ರಂದು ಕೆಪಿಎಸ್ಸಿ ಅಧಿಸೂಚನೆ ಹೊರಡಿಸಿತ್ತು. ಅರ್ಜಿ ಸಲ್ಲಿಸಿದ್ದ 50 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ 2018 ಡಿ. 27 ರಿಂದ 2019 ಜ. 3ರವರೆಗೆ ಪರೀಕ್ಷೆ ನಡೆದಿತ್ತು. 399 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಲಾಗಿತ್ತು. ಆದರೆ, ಅತಿ ಹೆಚ್ಚು ಅಂಕ ಪಡೆದಿದ್ದರೂ ಸೇವಾನುಭವ ಪ್ರಮಾಣಪತ್ರದ ಕಾರಣಕ್ಕೆ ಆಯ್ಕೆಯಾದವರು ಹೈಕೋರ್ಟ್ ಮೆಟ್ಟಿಲೇರಿದ್ದರು.
2023ರ ಜುಲೈ 24ರಂದು ಮಧ್ಯಂತರ ಆದೇಶ ನೀಡಿದ್ದ ಹೈಕೋರ್ಟ್, ಪಟ್ಟಿ ಪರಿಷ್ಕರಿಸಲು ಸೂಚಿಸಿತ್ತು. ಅದರಂತೆ, ಇದೇ ಮೇ 7ರಂದು ಆಯ್ಕೆ ಪಟ್ಟಿಯನ್ನು ಪರಿಷ್ಕರಿಸಿ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಲಾಗಿದೆ. ಹೈಕೋರ್ಟ್ ಆದೇಶ ನೀಡಿ 11 ತಿಂಗಳು ಕಳೆದಿದ್ದರೂ, ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಲು ಕೆಪಿಎಸ್ಸಿಗೆ ಇನ್ನೂ ಸಾಧ್ಯವಾಗಿಲ್ಲ. ಈ ಹುದ್ದೆಗಳಿಗೆ ಮಾಜಿ ಸೈನಿಕ ಕೋಟಾದಲ್ಲಿ ಆಯ್ಕೆಯಾದ ಕೆಲವರ ವಯಸ್ಸು 57 ದಾಟಿದೆ. ವಯೋಮಿತಿ ಸಡಿಲಿಕೆಯ ಅವಕಾಶದಲ್ಲಿ ಆಯ್ಕೆ ಆದವರ ವಯಸ್ಸು 49 ದಾಟಿದೆ. ಕೆಲವರು ಮೃತಪಟ್ಟಿದ್ದಾರೆ. ಕೆಪಿಎಸ್ಸಿಯ ವಿಳಂಬ ಧೋರಣೆಗೆ ಬೇಸತ್ತು, ದಯಾ ಮರಣಕ್ಕೆ ಅನುಮತಿ ನೀಡುವಂತೆ ಕೆಪಿಎಸ್ಸಿ ಕಾರ್ಯದರ್ಶಿಗೆ ಮನವಿ ಸಲ್ಲಿಸಿದ್ದೇವೆ' ಎಂದು ಪ್ರತಿಭಟನೆ ನಿರತರು ಅಳಲು ತೋಡಿಕೊಂಡರು.