ಕ್ಯಾನ್ಸರ್​ನಿಂದ ಗುಣ: ಕೇರಳದ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಕ್ಕೆ ಮುಡಿ ಕೊಟ್ಟು ಹರಕೆ ತೀರಿಸಿದ ವಿದೇಶಿ ಮಹಿಳೆ! Foreign woman

Foreign woman
Published on

Foreign woman : ಕ್ಯಾನ್ಸರ್​ನಿಂದ ಚೇತರಿಸಿಕೊಂಡ ಹಿನ್ನೆಲೆಯಲ್ಲಿ ಫ್ರಾನ್ಸ್​ನಿಂದ ಆಗಮಿಸಿದ ಸುಫಿನೇನಾ ಹೆಸರಿನ ಮಹಿಳೆಯೊಬ್ಬರು ಕೇರಳದ ಕೊಟ್ಟಾರಕ್ಕರದ ತ್ರಿಕ್ಕುಳಿಯೂರ್​ನ ವಿಲಂಗರದಲ್ಲಿರುವ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಮುಡಿ ಕೊಟ್ಟು ಕವಡಿ ಅರ್ಪಿಸಿದರು.

ಸುಫಿನೇನಾ ಅವರು ಬಹಳ ದಿನಗಳಿಂದ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದರು. ವಿಲಂಗರ ದೇವಸ್ಥಾನಕ್ಕೆ ಹೋಗಿ ಮುಡಿ ಕೊಟ್ಟರೆ ಗುಣವಾಗುತ್ತದೆ ಎಂಬ ವಿಚಾರವನ್ನು ಫ್ರಾನ್ಸ್‌ನಲ್ಲಿರುವ ತಮ್ಮ ಮಲಯಾಳಿ ಸ್ನೇಹಿತರಿಂದ ತಿಳಿದುಕೊಂಡರು. ನಂತರ ಮನಸ್ಸಿನಿಂದಲೇ ಪ್ರತಿಜ್ಞೆ ಮಾಡಿ, ಹರಕೆ ಕಟ್ಟಿಕೊಂಡರು. ಚಿಕಿತ್ಸೆ ಮುಂದುವರಿದಿದ್ದರಿಂದ ಭಾರತಕ್ಕೆ ಆಗಮಿಸುವುದು ವಿಳಂಬವಾಯಿತು.

ಈಗ ರೋಗ ಸಂಪೂರ್ಣವಾಗಿ ಗುಣಮುಖವಾಗಿದೆ. ಹೀಗಾಗಿ ಸುಫಿನೇನಾ ತನ್ನ ಪತಿಯೊಂದಿಗೆ ನಿನ್ನೆ (ಆಗಸ್ಟ್​ 12) ಬೆಳಗ್ಗೆ ಎರ್ನಾಕುಲಂಗೆ ಬಂದರು. ಪ್ರಯಾಣ ಏಜೆನ್ಸಿಯೊಂದರ ಮೂಲಕ ದೇವಸ್ಥಾನವನ್ನು ತಲುಪಿ, ಹರಕೆ ತೀರಿಸಿದರು. ಸುಫಿನೇನಾ ಅವರು ಮುಡಿ ಕೊಡಲು ಮುಂಚಿತವಾಗಿಯೇ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿತ್ತು.

ಮುಡಿಕೊಟ್ಟು ಸ್ನಾನ ಮಾಡಿದ ಬಳಿಕ ಕೇಸರಿ ಬಟ್ಟೆ ಧರಿಸಿ, ತಲೆಗೆ ಶ್ರೀಗಂಧ ಹಚ್ಚಿಕೊಂಡು, ಕವಡಿ ಹಿಡಿದು ದೇವಾಲಯದ ಸುತ್ತಲೂ ಭಕ್ತಿಯಿಂದ ಮೂರು ಬಾರಿ ಪ್ರದಕ್ಷಿಣೆ ಹಾಕಿದರು. ದೇವಾಲಯದ ಮುಂಭಾಗದಲ್ಲಿರುವ ಮುಖ್ಯ ಅರ್ಚಕರಿಗೆ ದಕ್ಷಿಣೆ ಅರ್ಪಿಸಿ ಪ್ರಸಾದ ಸ್ವೀಕರಿಸಿದರು.

ದೇವಾಲಯದ ಅಧಿಕಾರಿಗಳು ದಂಪತಿಗೆ ಸುಬ್ರಹ್ಮಣ್ಯ ದೇವರ ಸಣ್ಣ ವಿಗ್ರಹವನ್ನು ಕಾಣಿಕೆಯಾಗಿ ನೀಡಿದರು. ಅಂದಹಾಗೆ, ವಿಲಂಗರ ದೇವಾಲಯದಲ್ಲಿ ನಡೆಯುವ ಥೈಪುಯ ಕವಡಿಯಟ್ಟಂ ಪ್ರಸಿದ್ಧವಾಗಿದೆ. ವಿದೇಶಿಯರೂ ಸೇರಿದಂತೆ ವಿದೇಶಿಯರು ಕವಡಿ ಮೆರವಣಿಗೆಯಲ್ಲಿ ಭಾಗವಹಿಸಲು ಇಲ್ಲಿಗೆ ಬರುತ್ತಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net