

ಬೆಂಗಳೂರು: ಕಾನೂನುಬಾಹಿರವಾಗಿ 10 ಮಂದಿಗೆ ಹಂಚಿಕೆ ಮಾಡಲಾಗಿರುವ ಸ್ನಾತಕೋತ್ತರ ವೈದ್ಯಕೀಯ ಸೀಟುಗಳನ್ನು ರದ್ದುಗೊಳಿಸಿ, ಆ ಸೀಟುಗಳನ್ನು ಮುಂದಿನ ಹಂತದ ಕೌನ್ಸೆಲಿಂಗ್‌ಗೆ ಲಭ್ಯವಾಗುವಂತೆ ಮಾಡಬೇಕು ಎಂದು ಹೈಕೋರ್ಟ್ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (ಕೆಇಎ) ನಿರ್ದೇಶಿಸಿದೆ.
ಅಲ್ಲದೆ, ಅಖಿಲ ಭಾರತ ಕೋಟಾಗೆ ಸೇರ್ಪಡೆಯಾಗಲು ಪ್ರಾಧಿಕಾರ ಇದೇ ಫೆ.9ರಂದು ಮೂರನೇ ಸುತ್ತಿನ ಕೌನ್ಸೆಲಿಂಗ್ ನಡೆಸಬೇಕು ಎಂದು ಹೇಳಿದೆ.
ಚಿತ್ರದುರ್ಗದ ಡಾ. ಅಕ್ಷಯ್ ಯು.ತುಪ್ಪದ್ ಮತ್ತಿತರ 11 ಸ್ನಾತಕೋತ್ತರ ವೈದ್ಯಕೀಯ ಸೀಟು ಆಕಾಂಕ್ಷಿಗಳು ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಅನು ಶಿವರಾಮನ್ ಮತ್ತು ನ್ಯಾಯಮೂರ್ತಿ ವಿಜಯ್‌ಕುಮಾರ್ ಪಾಟೀಲ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಾಲಯ, ಕೆಇಎ ತನ್ನ ಬ್ರೌಚರ್‌ನಲ್ಲಿ ಹೊರಡಿಸಿದ್ದ ನಿಯಮಗಳಿಗೆ ವಿರುದ್ಧವಾಗಿ ಅನರ್ಹರಿಗೆ ಹಂಚಿಕೆ ಮಾಡಿರುವ ಸ್ನಾತಕೋತ್ತರ ವೈದ್ಯಕೀಯ ಸೀಟುಗಳನ್ನು ರದ್ದುಗೊಳಿಸಬೇಕು.
ಆ ಸೀಟುಗಳು ಮುಂದಿನ ಸುತ್ತಿನ ಕೌನ್ಸೆಲಿಂಗ್‌ಗೆ ಲಭ್ಯವಾಗುವಂತೆ ಮಾಡಬೇಕು. ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳನ್ನು ಕೆಇಎ ಅಖಿಲ ಭಾರತ ಕೋಟಾ ಹಂಚಿಕೆಗೆ ಇದೇ 9ರಂದು ಸಂಜೆ 5 ಗಂಟೆಗೆ ನಡೆಸುವ ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಬೇಕು ಎಂದು ನಿರ್ದೇಶನ ನೀಡಿದೆ.
ಅಲ್ಲದೆ, ಅಖಿಲ ಭಾರತ ಕೋಟಾಗೆ ಸೇರ್ಪಡೆಯಾಗಲು ಅನುಕೂಲವಾಗುವಂತೆ ಕೆಇಎ ಅಭ್ಯರ್ಥಿಗಳ ಮೂಲ ದಾಖಲಾತಿಗಳನ್ನು ಒದಗಿಸಿಕೊಡಬೇಕು. ಮಾಪ್‌ಅಪ್ ಸುತ್ತಿನಲ್ಲಿ ಖಾಲಿ ಇದ್ದ ಹಲವು ಸೀಟುಗಳನ್ನು ಮುಂದಿನ ಸುತ್ತಿನ ಹಂಚಿಕೆಗೆ ಲಭ್ಯವಾಗುವಂತೆ ಮಾಡಬೇಕು.
ಹಾಗೆ ಮಾಡಿದರೆ ಅರ್ಹ ಅಭ್ಯರ್ಥಿಗಳು ಮೆರಿಟ್ ಆಧರಿಸಿ ಸೀಟುಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಾಗಲಿದೆ. ಒಂದು ವೇಳೆ ಅನರ್ಹರು ಈಗಾಗಲೇ ಕಾಲೇಜಿಗೆ ಸೇರ್ಪಡೆಯಾಗಿದ್ದರೆ ಕೆಇಎ ಅಂತಹವರ ಶುಲ್ಕವನ್ನು ಆದಷ್ಟು ಬೇಗ ಮರುಪಾವತಿಸಲು ಕ್ರಮ ಕೈಗೊಳ್ಳಬೇಕು ಎಂದೂ ಸೂಚನೆ ನೀಡಿದೆ.