

ಬೆಂಗಳೂರು: ನಕಲಿ ಚಿನ್ನವನ್ನು ಅಸಲಿ ಚಿನ್ನವೆಂದು ನಂಬಿಸಿ ಅಡಮಾನವಿರಿಸಿ ಕೆನರಾ ಬ್ಯಾಂಕ್‌ನಿಂದ 14 ಲಕ್ಷ ರೂ. ಸಾಲ ಪಡೆದು ವಂಚಿಸಿದವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರೆಸಿಡೆನ್ಸಿ ರಸ್ತೆಯ ಕೆನರಾ ಬ್ಯಾಂಕ್ ಹಿರಿಯ ವ್ಯವಸ್ಥಾಪಕ ಟಿ.ಪ್ರಕಾಶ್, ನೀಡಿದ ದೂರಿನ ಮೇರೆಗೆ ಕೈಕೊಂಡರಹಳ್ಳಿಯ ಸಿದ್ಧಲಿಂಗಪ್ಪ, ಕಮಲನಗರದ ರಾಜೇಶ್ ಮತ್ತು ಚಿನ್ನ ಪರಿವೀಕ್ಷಕ ಲಕ್ಷ್ಮೀ ನಾರಾಯಣ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿ ಸಿದ್ಧಗಂಗಪ್ಪ, 272.90 ಗ್ರಾಂ 10 ಬಳೆಗಳು, 6 ಕಡಗ ಅಡಮಾನವಿರಿಸಿ 11.10 ಲಕ್ಷ ರೂ. ಮತ್ತು ಆರೋಪಿ ರಾಜಯ್ಯ 86.30 ಗ್ರಾಂ 5 ಬಳೆಗಳನ್ನು ಅಡಮಾನವಿರಿಸಿ 3.02 ಲಕ್ಷ ರೂ. ಸಾಲ ಪಡೆದಿದ್ದರು. ಸೆಂಟ್ರಲ್ ಅಪ್ರೈಸರ್ ಏಜೆನ್ಸಿ ಲಕ್ಷ್ಮೀ ನಾರಾಯಣ, ಆರೋಪಿಗಳೊಂದಿಗೆ ಕೈ ಜೋಡಿಸಿ 359.02 ಗ್ರಾಂ ನಕಲಿ ಚಿನ್ನಾಭರಣಗಳನ್ನು ಅಸಲಿ ಎಂದು ಪ್ರಮಾಣೀಕರಿಸಿದ್ದಾನೆ.
ಇತ್ತೀಚೆಗೆ ಚಿನ್ನದ ಆಡಿಟ್ ಮಾಡುವಾಗ ಈ ನಕಲಿ ಚಿನ್ನದ ಬಂಡವಾಳ ಬಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.