ಖಲಿಸ್ತಾನಿ ಉಗ್ರರಿಗೆ ಕೆನಡಾ ನೆರವು

Untitled design
Published on

ಒಟ್ಟಾವಾ: ಭಯೋತ್ಪಾದಕರಿಗೆ ಹಣಕಾಸು ನೆರವು ಒದಗಿಸುತ್ತಿರುವವರ ಕುರಿತು ಕೆನಡಾ ಸರ್ಕಾರ ಬಿಡುಗಡೆ ಮಾಡಿದ ವರದಿ ಪ್ರಕಾರ ಕನಿಷ್ಠ ಎರಡು ಖಲಿಸ್ತಾನಿ ಉಗ್ರರ ಗುಂಪುಗಳಿಗೆ ಕೆನಡಾದಿಂದ ಆರ್ಥಿಕ ನೆರವು ಸಿಕ್ಕಿದೆ ಎಂದು ತಿಳಿಸಿದೆ. ಕೆನಡಾದ ಹೊಸ ಸರ್ಕಾರ ‘ಕೆನಡಾದಲ್ಲಿ ಹಣ ವರ್ಗಾವಣೆ ಮತ್ತು ಭಯೋತ್ಪಾದಕ ಹಣಕಾಸು ಅಪಾಯಗಳ 2025ರ ಮೌಲ್ಯಮಾಪನ‘ ಎಂಬ ಶೀರ್ಷಿಕೆಯ ವರದಿಯನ್ನು ಬಿಡುಗಡೆ ಮಾಡಿದೆ. ಈ ವರದಿಯಲ್ಲಿ ಖಲಿಸ್ತಾನಿ ಉಗ್ರಗಾಮಿ ಗುಂಪುಗಳಾದ ಬಬ್ಬರ್ ಖಾಲ್ಸಾ ಇಂಟರ್ ನ್ಯಾಷನಲ್ ಮತ್ತು ಅಂತಾರಾಷ್ಟ್ರೀಯ ಸಿಖ್ ಯುವ ಒಕ್ಕೂಟಗಳಿಗೆ ಹಣಕಾಸು ನೆರವು ಸಿಕ್ಕಿರುವುದಾಗಿ ತಿಳಿಸಲಾಗಿದೆ.

ರಾಜಕೀಯ ಪ್ರೇರಿತ ಹಿಂಸಾತ್ಮಕ ಉಗ್ರಗಾಮಿತ್ವ (ಪಿಎಂವಿಇ) ಹೊಸ ರಾಜಕೀಯ ವ್ಯವಸ್ಥೆಗಳನ್ನು ಸ್ಥಾಪಿಸಲು ಅಥವಾ ಅಸ್ತಿತ್ವದಲ್ಲಿರುವ ವ್ಯವಸ್ಥೆಗಳಲ್ಲಿ ಹೊಸ ರಚನೆಗಳು ಮತ್ತು ರೂಢಿಗಳನ್ನು ಸ್ಥಾಪಿಸಲು ಹಿಂಸಾಚಾರದ ಬಳಕೆಯನ್ನು ಪ್ರೋತ್ಸಾಹಿಸುತ್ತದೆ. ಹಮಾಸ್, ಹೆಜ್ಬೊಲ್ಲಾ ಮತ್ತು ಖಲಿಸ್ತಾನಿ ಹಿಂಸಾತ್ಮಕ ಉಗ್ರಗಾಮಿ ಗುಂಪುಗಳಾದ ಬಬ್ಬರ್ ಖಾಲ್ಸಾ ಇಂಟರ್​ನ್ಯಾಷನಲ್ ಮತ್ತು ಇಂಟರ್​ನ್ಯಾಷನಲ್ ಸಿಖ್ ಯೂತ್ ಫೆಡರೇಶನ್​ನಂತರ ಕೆನಡಾದ ಕ್ರಿಮಿನಲ್ ಕೋಡ್ ಅಡಿಯಲ್ಲಿ ಪಟ್ಟಿ ಮಾಡಿರುವ ಹಲವು ಭಯೋತ್ಪಾದಕ ಸಂಘಟನೆಗಳು ಪಿಎಂವಿಇ ಅಡಿ ಬರುತ್ತವೆ ಎಂದು ವರದಿ ತಿಳಿಸಿದೆ.

ಭಾರತದ ಜತೆ ರಾಜತಾಂತ್ರಿಕ ಬಿಕ್ಕಟ್ಟು

ಖಲಿಸ್ತಾನವನ್ನು ಪ್ರತಿನಿಧಿಸುವ ಗುಂಪುಗಳ ಮೇಲೆ ಕೆನಡಾ ಮೃದುಧೋರಣೆ ಹೊಂದಿದೆ ಎಂದು ಭಾರತ ಹಿಂದಿನಿಂದಲೂ ಆರೋಪಿಸುತ್ತಾ ಬರುತ್ತಿದೆ. ಖಲಿಸ್ತಾನಿ ಸಂಘಟನೆಗೆ ಸೇರಿದ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತ ಭಾಗಿಯಾಗಿದೆ ಎಂದು ಕೆನಡಾದ ಮಾಜಿ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಭಾರತ ಮತ್ತು ಕೆನಡಾ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಸೃಷ್ಟಿಯಾಗಿದೆ. ಕೆನಡಾದ ಹೊಸ ಸರ್ಕಾರ ತಮ್ಮ ದೇಶದಲ್ಲಿ ಖಲಿಸ್ತಾನಿಗಳಿಗೆ ಇದ್ದು, ಅವರಿಗೆ ಬೆಂಬಲ ದೊರೆಯುತ್ತಿದೆ ಎಂದು ಒಪ್ಪಿಕೊಂಡಿರುವುದರಿಂದ ಉಭಯ ದೇಶಗಳ ನಡುವಿನ ಸಂಬಂಧ ಮತ್ತಷ್ಟು ಸಂಕೀರ್ಣಗೊಳ್ಳುವ ಸಾಧ್ಯತೆ ಇದೆ.

ಎನ್​ಪಿಒಗಳ ಮೂಲಕ ವರ್ಗಾವಣೆ

ಖಲಿಸ್ತಾನಿ ಉಗ್ರರ ಗುಂಪುಗಳು ಕೆನಡಾ ಸೇರಿದಂತೆ ಹಲವು ದೇಶಗಳಲ್ಲಿ ಹಣ ಸಂಗ್ರಹಿಸುತ್ತಿವೆ ಎಂದು ಶಂಕಿಸಲಾಗಿದೆ. ಈ ಗುಂಪುಗಳು ಕೆನಡಾದಿಂದ ಹಣ ವರ್ಗಾವಣೆ ಮಾಡಲು ಹಲವು ವಿಧಾನಗಳನ್ನು ಅನುಸರಿಸುತ್ತಿವೆ. ಖಲಿಸ್ತಾನಿ ಉಗ್ರರು ದತ್ತಿ ಮತ್ತು ಲಾಭರಹಿತ ಸಂಸ್ಥೆಗಳ (ಎನ್​ಪಿಒ) ಮೂಲಕ ಹಣ ಸಂಗ್ರಹಿಸಿ ವರ್ಗಾವಣೆ ಮಾಡುತ್ತಿವೆ. ಈ ಗುಂಪುಗಳು ಈ ಹಿಂದೆ ಕೆನಡಾದಲ್ಲಿ ವ್ಯಾಪಕವಾದ ನಿಧಿ ಸಂಗ್ರಹಣ ಜಾಲವನ್ನು ಹೊಂದಿದ್ದವು. ಆದರೆ ಈಗ ಆ ಉದ್ದೇಶಕ್ಕೆ ನಿಷ್ಠೆ ಹೊಂದಿರುವ ಕೆಲವು ನಿರ್ದಿಷ್ಟ ಗುಂಪುಗಳಿಗೆ ಸಣ್ಣ ಪ್ರಮಾಣದ ಜನರು ಮಾತ್ರ ನೆರವು ನೀಡುತ್ತಿದ್ದಾರೆ ಎಂದು ವರದಿ ತಿಳಿಸಿದೆ. 1980ರ ದಶಕದ ಮಧ್ಯಭಾಗದಿಂದ ಕೆನಡಾದಲ್ಲಿ ರಾಜಕೀಯ ಪ್ರೇರಿತ ಹಿಂಸಾತ್ಮಕ ಉಗ್ರವಾದದ ಬೆದರಿಕೆಯು ಭಾರತದ ಪಂಜಾಬ್​ನಲ್ಲಿ ಪ್ರತ್ಯೇಕ ಖಲಿಸ್ತಾನ್ ಸ್ವತಂತ್ರ ರಾಷ್ಟ್ರವನ್ನು ಸೃಷ್ಟಿಸಲು ಹಿಂಸಾತ್ಮಕ ಮಾರ್ಗಗಳ ಮೂಲಕ ಪ್ರಯತ್ನಿಸುತ್ತಿರುವ ಖಲಿಸ್ತಾನಿ ಉಗ್ರವಾದಿಗಳ ಮೂಲಕ ಪ್ರಕಟವಾಗುತ್ತಿದೆ ಎಂದು ಒಟ್ಟಾವಾದ ಗುಪ್ತಚರ ಸಂಸ್ಥೆ ವರದಿ ನೀಡಿದ ಬೆನ್ನಲ್ಲೇ ಸರ್ಕಾರ ತನ್ನ ವರದಿಯನ್ನು ಪ್ರಕಟಿಸಿದೆ.

ಡ್ರಗ್ಸ್ ಕಳ್ಳಸಾಗಾಣಿಕೆ?

ಭಯೋತ್ಪಾದನೆ ಗುಂಪುಗಳಿಗೆ ಹಣಕಾಸು ನೆರವು ಒದಗಿಸುವ ಜತೆಯಲ್ಲೇ ಅಕ್ರಮವಾಗಿ ಮಾದಕವಸ್ತು ಕಳ್ಳಸಾಗಣೆ ಮಾಡುವುದು, ಅಕ್ರಮ ಹಣ ವರ್ಗಾವಣೆ, ವ್ಯಾಪಾರ ವಂಚನೆ ಮತ್ತು ತೆರಿಗೆ ಅಪರಾಧಗಳು ಕೆನಡಾಗೆ ಬೆದರಿಕೆಯಾಗಿವೆ. ಇವುಗಳಿಂದ ಹಲವು ಶತಕೋಟಿ ಡಾಲರ್ ಹಣ ಅಕ್ರಮ ವ್ಯವಹಾರದಲ್ಲಿ ತೊಡಗಿಸಿಕೊಂಡಿರುವವರಿಗೆ ದೊರೆಯುತ್ತೆ ಎಂದು ವರದಿ ತಿಳಿಸಿದೆ. ಈ ವರದಿಗೆ ಪುಷ್ಠಿ ಕೊಡುವಂತೆ ಕೆಲವು ತಿಂಗಳ ಹಿಂದೆ ಪೀಲ್​ನ ಪ್ರಾದೇಶಿಕ ಪೊಲೀಸರು ಡ್ರಗ್ಸ್ ಕಳ್ಳಸಾಗಣೆ ಮಾಡುತ್ತಿದ್ದ 7 ಭಾರತೀಯರು ಸೇರಿ 9 ಜನರನ್ನು ಬಂಧಿಸಿ ಅವರಿಂದ 479 ಕೆ.ಜಿ. ತೂಕದ ಕೊಕೇನ್ ವಶಪಡಿಸಿಕೊಂಡಿದ್ದರು. ತನಿಖೆ ವೇಳೆ ಮೆಕ್ಸಿಕೋದ ಡ್ರಗ್ಸ್ ಡೀಲರ್​ಗಳಿಂದ ಅಮೆರಿಕ ಮಾರ್ಗವಾಗಿ ಕೆನಡಾಗೆ ಟ್ರಕ್ ಮೂಲಕ ಡ್ರಗ್ಸ್ ತರಲಾಗುತ್ತಿತ್ತು. ಈ ಜಾಲದಲ್ಲಿ ಖಲಿಸ್ತಾನಿ ಬೆಂಬಲಿಗರ ಕೈವಾಡ ಇರುವ ಕುರಿತು ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸರು ತಿಳಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net