Canada: ಕೆನಡಾ ಸರ್ಕಾರ ಮಹತ್ವದ ನಿರ್ಧಾರ: ವಲಸಿಗರಿಗೆ ಕಡಿವಾಣ!

Canada
Published on

ಒಟ್ಟಾವಾ: ಕೆನಡಾ(Canada) ಸರ್ಕಾರ ವಲಸೆ ನಿಯಂತ್ರಣಕ್ಕೆ ಮಹತ್ವದ ನಿರ್ಧಾರ ಕೈಗೊಂಡಿದೆ.ತನ್ನ ದೇಶಕ್ಕೆ ಅನುಮತಿಸುವ ವಲಸಿಗರ ಸಂಖ್ಯೆಯನ್ನು ತೀವ್ರವಾಗಿ ಕಡಿಮೆ ಮಾಡಲು ಸಿದ್ಧವಾಗಿದೆ. ಚುನಾವಣೆ ಹೊತ್ತಲ್ಲಿ ಟ್ರುಡೊಸರ್ಕಾರ ಇಂತಹ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವುದರ ಹಿಂದೆ ಮತ್ತೆ ಅಧಿಕಾರಕ್ಕೆ ಬರುವ ಉದ್ದೇಶ ಹೊಂದಿದೆ ಎಂದು ಅಲ್ಲಿನ ಮಾಧ್ಯಮಗಳು ಅಭಿಪ್ರಯಪಟ್ಟಿವೆ.

ಇದನ್ನೂ ಓದಿ:

ಕೆನಡಾ 2024 ರಲ್ಲಿ 4,85,000 ಜನರನ್ನು ಖಾಯಂ ನಿವಾಸಿಗಳಾಗಿ ಗುರುತಿಸಿದೆ. ಆದರೆ, 2025ರಲ್ಲಿ ಈ ಸಂಖ್ಯೆಯನ್ನು 3,80,000ಕ್ಕೆ ಸೀಮಿತಗೊಳಿಸಲಾಗಿದೆ. 2027 ರ ವೇಳೆಗೆ ಕೇವಲ 3,65,000 ಜನರು ಮಾತ್ರ ಪ್ರವೇಶ ಪಡೆಯುತ್ತಾರೆ. ಈ ಹಿನ್ನೆಲೆಯಲ್ಲಿ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ನಾವು ಕೆನಡಾದಲ್ಲಿ ತಾತ್ಕಾಲಿಕ ವಿದೇಶಿ ಉದ್ಯೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತಿದ್ದೇವೆ. ಕಂಪನಿಗಳಿಗೆ ಸಂಬಂಧಿಸಿದಂತೆ ನಾವು ಕೆಲವು ಕಠಿಣ ನಿಯಮಗಳನ್ನು ತರುತ್ತೇವೆ. ನೇಮಕಾತಿ ವಿಷಯದಲ್ಲಿ ಸ್ಥಳೀಯರಿಗೆ ಏಕೆ ಆದ್ಯತೆ ನೀಡಿಲ್ಲ ಎಂಬುದನ್ನು ಕಂಪನಿಗಳು ಬಹಿರಂಗಪಡಿಸಬೇಕು’ಎಂದಿದ್ದಾರೆ.

ಕೆನಡಾದಲ್ಲಿ ಮುಂದಿನ ವರ್ಷ ಚುನಾವಣೆ ನಡೆಯಲಿದೆ. ಇದರ ಕುರಿತು ನಡೆಸಿದ ಸಮೀಕ್ಷೆಗಳಲ್ಲಿ ಟ್ರುಡೊ ನೇತೃತ್ವದ ಲಿಬರಲ್ ಪಾರ್ಟಿ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಹಿಂದುಳಿದಿದೆ. ವಲಸೆಯಿಂದಾಗಿ ಹೆಚ್ಚುತ್ತಿರುವ ನಿರುದ್ಯೋಗದ ಜೊತೆಗೆ, ದೇಶೀಯ ವಸತಿ ಕೊರತೆ ತೀವ್ರವಾಗಿದೆ. ಇದರಿಂದಾಗಿ ಆಡಳಿತಾರೂಢ ಸರ್ಕಾರ ಸ್ಥಳೀಯರ ಮನಗೆಲ್ಲಲು ಮುಂದಾಗಿದೆ. ಅದರ ಭಾಗವಾಗಿ, ವಿದೇಶಿ ವಿದ್ಯಾರ್ಥಿಗಳಿಗೆ ಅಧ್ಯಯನ ಪರವಾನಗಿ ಮತ್ತು ಕಾರ್ಮಿಕರ ಕೆಲಸದ ಪರವಾನಗಿಗಳ ಮೇಲೆ ಹೆಚ್ಚಿನ ನಿರ್ಬಂಧಗಳನ್ನು ತರುವುದಾಗಿ ಇತ್ತೀಚೆಗೆ ಘೋಷಿಸಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net