

ಆದರೊಂದು ಪ್ರಶ್ನೆ. ನಮ್ಮಲ್ಲಿ ಶರಣಪರಂಪರೆ, ದಾಸ ಪರಂಪರೆ - ಇವುಗಳು ಬಂದದ್ದು ಹೇಗೆ? ಹೆಸರಿನಲ್ಲೂ ದಾಸ ಎಂದು ಸೇರಿಸಿಕೊಳ್ಳಬೇಕೇ? ಪುರಂದರದಾಸ, ಕನಕದಾಸ - ಇವರು ಗಳಿಗೆ ದಾಸ್ಯವೇ ರುಚಿಸಿತೇ? - ಎಂಬ ಪ್ರಶ್ನೆ ಬರುವುದುಂಟು. ತನ್ನನ್ನು ದಾಸನೆಂದು ಗುರುತಿಸಿಕೊಳ್ಳುವ ಈ ಗುಲಾಮಗಿರಿಬಂದದ್ದೇಕೆ? ಅಪ್ಪ-ಅಮ್ಮಂದಿರೇ ಹಾಗೆಹೆಸರಿಟ್ಟುಬಿಟ್ಟಿದ್ದರೆ ಅದಕ್ಕಿನ್ನೇನೂ ಮಾಡ ಲಾಗದ್ದು ಇದ್ದೀತು. ಆದರೆ ನವ-ನಾಮ ಕರಣವನ್ನು ಮಾಡಿಕೊಂಡು ದಾಸ ಎಂದು ಕರೆದುಕೊಳ್ಳುವುದು ಯಾವ ತೆರನ ದಾಸ್ಯ?! - ಎಂದೆನಿಸುವುದಿಲ್ಲವೇ? ಮುಸ್ಲಿಮರು ನಮ್ಮ ದೇಶದ ಮೇಲೆ ದಾಳಿ ಮಾಡಿದ ನಂತರವೇ ಆರಂಭವಾದದ್ದು, ನಮ್ಮ ದಾಸ್ಯವನ್ನೇ ಹೆಚ್ಚಿಸುವಂತೆ ಹೇಳಿಕೊಳ್ಳುವ ಈ ಹೀನಪದ್ಧತಿ. ಅದನ್ನೇ ಭಗವಂತನನ್ನು ಕುರಿತಾಗಿ ಹೇಳಲೂ ಆರಂಭಿಸಿದವು ನಮ್ಮ ಭಕ್ತಿಪಂಥಗಳು. ತವ ದಾಸೋಹಂ - ಎಂದು ಹಾಡುಕಟ್ಟುವುದು, ಗುರುವಿನ ಗುಲಾಮ ನಾಗುವತನಕ ದೊರೆಯದಣ್ಣ ಮುಕುತಿ ಎನ್ನುವುದು. ಈ ಪ್ರವೃತ್ತಿಗಳು ಬೆಳೆದದ್ದೇ ಮುಸ್ಲಿಮರ ಆಕ್ರಮಣವಾದ ಬಳಿಕ - ಎನ್ನುವ ಇತಿಹಾಸಕಾರರೂ ಇಲ್ಲದಿಲ್ಲ. ಆದರೆ ಇವೆಲ್ಲ ಅರ್ಥವಿಲ್ಲದ ಮಾತುಗಳು, ವಾಸ್ತವ ವಾಗಿ. ಏಕೆ? ರಾಮಾಯಣದಲ್ಲೇ ಹನುಮಂತನೇ ತನ್ನನ್ನು ರಾಮನ ದಾಸನೆಂದು ಘೊಷಿಸಿಕೊಂಡೇ ಲಂಕಾ-ಧ್ವಂಸ-ಕಾರ್ಯವನ್ನು ಮುಂದುವರಿಸಿ
ದನಲ್ಲವೇ? ಹನುಮಂತನಿರಲಿ, ಲಕ್ಷ್ಮಣನೇ ತಾನು ರಾಮನ ದಾಸ ನೆಂದು ಪರಿಚಯ ಮಾಡಿಕೊಳ್ಳುತ್ತಾನೆ. ಆದರೆ ರಾಮನೇ ಲಕ್ಷ್ಮಣನನ್ನು ಎಂದಾದರೂ ನೀನು ನನ್ನ ದಾಸನೆಂದು ಮೂದಲಿಸಿದ್ದನೇ, ಜಬರದಸ್ತು ಮಾಡಿದ್ದನೇ? - ಎಂಬ ಪ್ರಶ್ನೆಗಳೂ ಬರುವುವಲ್ಲವೇ? ರಾಮನೇ ಹಾಗೆ ವರ್ತಿಸಿಲ್ಲವೆಂದ ಮೇಲೆ ಲಕ್ಷ್ಮಣನೇ ಹಾಗೇಕೆ ಹೇಳಿಕೊಂಡ, ಹನುಮಂತನೊಂದಿಗೆ ಪ್ರಥಮಪರಿಚಯವಾದಾಗ? - ಎಂಬ ಪ್ರಶ್ನೆ ಯುಕ್ತವಾದುದೇ. ವಾಸ್ತವವಾಗಿ, ದಾಸ-ದಾಸ್ಯ ಎಂಬ ಪದಗಳು ನಮ್ಮ ಪರಂಪರೆಯಲ್ಲಿ ಬಂದ ಬಗೆಯೇ ಬೇರೆ. ಅದನ್ನು ಇಂಗ್ಲೀಷಿನ ಸ್ಲೇವ್ ಎಂಬ ಪದಕ್ಕೆ ಸಮಾನಾರ್ಥಕವೆಂದು ಭಾವಿಸಿರುವುದರಲ್ಲೇ ಮಹಾದೋಷವಾಗಿರುವುದು. ಗ್ರೀಕರ ಪುರಾತನ ದಾಖಲೆಗಳಲ್ಲೇ ಭಾರತದಲ್ಲಿ ಸ್ಲೇವರಿ ಎಂಬುದೇ ಇದ್ದಂತಿಲ್ಲವೆಂಬ ಮಾತಿದೆ. ದಾಸೀ-ಪುತ್ರನಿಗೆ ಸಲ್ಲುವ ಆಸ್ತಿಯ ಪಾಲಿನ ವಿಷಯ ಮನುಸ್ಮೃಯಲ್ಲಿದೆ! ಈ ವಿಷಯವತ್ತ ಇರಲಿ.
ಲಕ್ಷ್ಮಣನು ಕಾರಣವನ್ನು ಕೊಡದೆ ಈ ಮಾತನ್ನು ಹೇಳಿಲ್ಲ. (ರಾಮನ) ಗುಣಗಳಿಂದಾಗಿ (ಆತನಲ್ಲಿ) ದಾಸ್ಯವನ್ನು ಹೊಂದಿದ್ದೇನೆ ಎಂದಾತ ಹೇಳಿಕೊಳ್ಳುತ್ತಾನೆ. (ಗುಣೈರ್ ದಾಸ್ಯಮ್ ಉಪಾಗತಃ). ಅಲ್ಲಿಗೆ ಹಿರಿಯಣ್ಣನಾದ ರಾಮ ತನ್ನ ತಮ್ಮನೆಂದು ಲಘುವಾಗಿ ನೋಡುತ್ತಿಲ್ಲ. ಅಹಾ ರಾಮನ ಗುಣಗಳು
ಎಂತಹವು! ಎಂದು ಅಚ್ಚರಿಗೊಂಡು, ಅವಕ್ಕೆ ಮಾರುಹೋಗಿ, ಲಕ್ಷ್ಮಣನು ಸ್ವತಃ ದಾಸ್ಯವನ್ನು ಸ್ವೀಕರಿಸಿದ್ದಾನೆ! ರಾಮನು ಕೃತಜ್ಞ, ಬಹುಜ್ಞ, ಸರ್ವಭೂತಹಿತೈಷಿ - ಎಂದೇ ಆತನಲ್ಲಿ ನನಗೆ ಸಂತೋಷ- ಪೂರ್ವವಾದ ಕಿಂಕರ- ಭಾವ, ಕೈಂಕರ್ಯದ ಧನ್ಯತೆ -ಎನ್ನುತ್ತಾನೆ, ಲಕ್ಷ್ಮಣ.ಮತ್ತೊಂದರ್ಥದಲ್ಲಿ ನಾವೆಲ್ಲರೂ ದಾಸರೇ. ನಮ್ಮ ಇಂದ್ರಿಯಗಳಿಗೇ ನಾವು ದಾಸರಾಗಿಲ್ಲವೇ? ಅಲ್ಲದೆ, ಒಳ್ಳೆಯ ಅರ್ಥದಲ್ಲಿಯೂ ದಾಸ್ಯ-ವೃತ್ತಿಯೆಂಬುದುಂಟು. ಮನಸ್ಸು ಹೇಳಿದಂತೆ ಇಂದ್ರಿಯಗಳು ಆಡುವುದು ದಾಸ್ಯವಲ್ಲವೇ? ಮಿದುಳು ಹೇಳಿದಂತೆ ಇಡೀ ಶರೀರವು ಕೇಳುವುದು ದಾಸ್ಯವಲ್ಲವೇ? ‘ದೊಡ್ಡ ಬದುಕು ಒಂದಿದ್ದು, ಅದರಂತೆ ಉಳಿದವು ಆಡುವಂತಿದ್ದಲ್ಲಿ, ಅಂತಹ ದಾಸ್ಯವು ಅವಶ್ಯವೇ’ - ಎನ್ನುವ ಶ್ರೀರಂಗಮಹಾಗುರುಗಳ ಮಾತು ಮನನೀಯವಾಗಿದೆ. ಧರ್ಮವೇ ಮೈತಾಳಿ ಬಂದಂತಿದ್ದ ರಾಮನ ಗುಣಗಳಿಗೆ ಮನಸೋತು, ಸಂತೋಷದಿಂದ ದಾಸ್ಯವನ್ನು ಅಂಗೀಕರಿಸಿರುವ ಲಕ್ಷ್ಮಣನ ಆದರ್ಶವು ಹಿರಿದಾದುದಲ್ಲವೇ? ನಮಗೂ ದಾರಿದೀಪವಲ್ಲವೇ?