

ನವದೆಹಲಿ: ಸಾಮಾಜಿಕ ಮಾಧ್ಯಮ ಪೋಸ್ಟ್ಗಳನ್ನು ಅವುಗಳ ಮಾಲೀಕರಿಗೆ ನೋಟಿಸ್ ನೀಡದೇ ಅಥವಾ ಅವರ ವಿಚಾರಣೆ ನಡೆಸದೇ ತೆಗೆದು ಹಾಕಬಹುದೇ ಎನ್ನುವ ಬಗ್ಗೆ ವಿವರಣೆ ನೀಡುವಂತೆ ಸುಪ್ರೀಂ ಕೋರ್ಟ್ ಸೋಮವಾರ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಯಾವುದೇ ಪೋಸ್ಟ್ನ ಮಾಲೀಕರ ವೈಯಕ್ತಿಕ ಗುರುತನ್ನು ಪತ್ತೆ ಹಚ್ಚಲು ಸಾಧ್ಯವಾದರೆ ಆಗ ಅಂಥವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಕ್ಕೂ ಮುನ್ನ ನೋಟಿಸ್ ನೀಡಿ ಅವರ ವಿಚಾರಣೆ ನಡೆಸಬೇಕು ಎಂಬುದು ಮೇಲ್ನೋಟಕ್ಕೆ ತಮ್ಮ ಅಭಿಪ್ರಾಯವಾಗಿದೆ ಎಂದು ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯ್ ಮತ್ತು ಎ.ಜಿ. ಮಾಸಿಹ್ ಹೇಳಿದರು. ಈ ಹಿನ್ನೆಲೆಯಲ್ಲಿ, ಸಾಫ್ಟ್ವೇರ್ ಫ್ರೀಡಂ ಲಾ ಸೆಂಟರ್ ಸಲ್ಲಿಸಿದ್ದ ಅರ್ಜಿ ಸಂಬಂಧ ಕೋರ್ಟ್ ಪೀಠ ಕೇಂದ್ರಕ್ಕೆ ನೋಟಿಸ್ ನೀಡಿತು. ಎಕ್ಸ್ ಮುಂತಾದ ಸಾಮಾಜಿಕ ಮಾಧ್ಯಮ ವೇದಿಕೆಗಳು ಸರ್ಕಾರದ ನಿರ್ದೇಶನದ ಮೇರೆಗೆ ಖಾತೆದಾರರ ಅನುಮತಿಯಿಲ್ಲದೇ ಪದೇ ಪದೇ ಟ್ವೀಟ್ಗಳನ್ನು ತೆಗೆದುಹಾಕುತ್ತಿವೆ ಎಂದು ಅರ್ಜಿದಾರರು ವಾದಿಸಿದ್ದರು.