6 ತಿಂಗಳಿಗೊಮ್ಮೆ ಬಲ್ಬ್ ಬದಲಾಯಿಸೋ ಕೆಲಸಕ್ಕೆ ಕೋಟಿ ಸಂಬಳ? ಅಸಲಿಯತ್ತು ಹೀಗಿದೆ…

bulb
Published on

ನವದೆಹಲಿ: ಈ ಕೆಲಸದಲ್ಲಿ ಮಾಡಲಿಕ್ಕಿರುವುದು ಲೈಟ್ ಬಲ್ಬ್ ಬದಲಾಯಿಸುವುದು ಮಾತ್ರ. ಆದರೂ ಸಂಬಳ ಮಾತ್ರ ಕೋಟಿ ಕೋಟಿ! ಹೌದು, ಮಾಮೂಲಿ, ಅದೇ ಕೆಲಸವನ್ನು ಮಾಡಿಕೊಂಡು ಬೋರ್ ಆದವರಿಗೆ ಕೆಲವೊಮ್ಮೆ ಯಾವುದಾದರು ಸರಳ ಕೆಲಸ ಮಾಡಿ ಬೇಕಾದಷ್ಟು ಹಣ ಗಳಿಸುವ ಮಾರ್ಗ ಇದೆಯಾ ಎಂದು ಅನಿಸಬಹುದು. 'ಜಗತ್ತಿನಲ್ಲಿ ಅಂತಹ ಕೆಲಸಗಳೂ ಇವೆ, ಬೇಕಾದಷ್ಟು ಸಂಪಾದನೆಯೂ ಆಗುತ್ತದೆ, ಈ ಕೆಲಸವೂ ಅಂತಹದ್ದೇ' ಎನ್ನುವ ವಿಡಿಯೋ ಒಂದು ವೈರಲ್ ಆಗಿತ್ತು. ಇಲ್ಲಿ ಹಾಳಾದ ಲೈಟ್ ಬಲ್ಸ್ ಬದಲಾಯಿಸುವುದು ಮಾತ್ರ ಕೆಲಸ. ಅಂದ ಹಾಗೆ ಈ ಉದ್ಯೋಗಾವಕಾಶ ಇರುವುದು ಅಮರಿಕದ ಸೌತ್ ಡಕೋಟಾ ಎಂಬಲ್ಲಿ.

ಆದರೆ, ಒಂದು ವಿಚಾರವಿದೆ. ಈ ಕೆಲಸ ಮಾಡಲು ನೂರಾರು ಮೀಟರ್ ಎತ್ತರವನ್ನು ಏರಬೇಕಾಗುತ್ತದೆ. ಇದರಿಂದಾಗಿ ಲೈಟ್ ಬಲ್ಬ್ ಬದಲಾಯಿಸುವುದೂ ಕೆಲವೊಮ್ಮೆ ಒಂದು ಸಾಹಸವಾಗಿ ಮಾರ್ಪಡಬಹುದಾಗಿದೆ. ಇತ್ತೀಚೆಗೆ ವೈರಲ್ ಆಗಿರುವ ಟ್ವಿಟರ್ ವೀಡಿಯೊದಲ್ಲಿ ಈ ಕೆಲಸವನ್ನು ಕೈಗೊಳ್ಳುವ ಜನರು 130,000 ಡಾಲರ್ (1 ಕೋಟಿ ರೂ.) ಗಳಿಸಬಹುದು ಎಂದು ಹೇಳಿಕೊಳ್ಳಲಾಗಿದೆ. ಆದರೆ ಅಸಲಿಯತ್ತು ಬೇರೆಯೇ ಇದೆ!

ಎಷ್ಟು ಎತ್ತರದಲ್ಲಿ ಗೊತ್ತೇ?

ಇನ್ನು ಬದಲಾಯಿಸಬೇಕಾದ ಲೈಟ್ ಬಲ್ಬ್ ಗಳು ಸಾಮಾನ್ಯವಲ್ಲ. ಮತ್ತು ಈ ವಿಶೇಷ ಕೆಲಸವನ್ನು ಮಾಡುವ ಜನರಿಗೆ ಎತ್ತರದ ಕಾರ್ಯಾಚರಣೆಗಳಿಗೆ ತರಬೇತಿ ನೀಡಲಾಗುತ್ತದೆ ಎಂದು ವಿಡಿಯೋ ವೀಕ್ಷಕರಿಗೆ ತಿಳಿಸುತ್ತದೆ. "ಇದು ಸಾಮಾನ್ಯ ಬಲ್ಬ್ ಅಲ್ಲ. ಎಲ್ಲರೂ ಈ ಕೆಲಸವನ್ನು ಮಾಡಲು ಸಾಧ್ಯವಿಲ್ಲ. 600 ಮೀಟರ್ ಗಿಂತ ಹೆಚ್ಚಿನ ಎತ್ತರದ ಸಿಗ್ನಲ್ ಟವರ್ ಗಳಿಗೆ ಲೈಟ್ ಬಲ್ಬ್ ಗಳನ್ನು ಬದಲಿಸಲಾಗುತ್ತದೆ" ಎಂದು ವಿಡಿಯೋ ಕ್ಲಿಪ್ ಉಲ್ಲೇಖಿಸುತ್ತದೆ.

"ಈ ರೀತಿಯ ಸಿಗ್ನಲ್ ಟವರ್ ಸಾಮಾನ್ಯ ಎತ್ತರದ ಗೋಪುರಗಳಿಗಿಂತ ಭಿನ್ನವಾಗಿದೆ. ಇದನ್ನು ಲೋಹದ ಬ್ರಾಕೆಟ್ನಿಂದ ನಿರ್ಮಿಸಲಾಗಿದೆ. ಎತ್ತರ ಹೆಚ್ಚಿದಷ್ಟೂ ಬ್ರಾಕೆಟ್ ತೆಳುವಾಗಿರುತ್ತದೆ - ಮತ್ತು ಯಾವುದೇ ರಕ್ಷಣಾತ್ಮಕ ವ್ಯವಸ್ಥೆ ಇರುವುದಿಲ್ಲ. ಬಲ್ಬ್ ಬದಲಾಯಿಸುವವರು ಜೀವ ಕಾಪಾಡಿಕೊಳ್ಳಲು ಹಗ್ಗವನ್ನು ಮಾತ್ರ ಅವಲಂಬಿಸಿದ್ದಾರೆ" ಎಂದು ಅದರಲ್ಲಿ ಉಲ್ಲೇಖವಾಗಿದೆ.

ಮೊದಲನೆಯದಾಗಿ, ಈ ಕೆಲಸದಲ್ಲಿರುವ ವ್ಯಕ್ತಿಯು ಎತ್ತರಕ್ಕೆ ಭಯಪಡಬಾರದು. 1500 ಅಡಿ ಎತ್ತರದ ಗೋಪುರವನ್ನು ಹತ್ತುವಾಗ ಮತ್ತು ಇಳಿಯುವಾಗ ಕಾರ್ಮಿಕರು ಅತ್ಯಂತ ಜಾಗರೂಕರಾಗಿ ಇರಬೇಕು. ಅದಲ್ಲದೇ ಈ ಕೆಲಸವು ಆರು ಗಂಟೆಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳಬಹುದು ಎಂದು ಕ್ಲಿಪ್ ತಿಳಿಸುತ್ತದೆ. ಬಲ್ಬ್ ಬದಲಾಯಿಸುವ ವ್ಯಕ್ತಿ ದೈಹಿಕವಾಗಿ ಸದೃಢನಾಗಿರಬೇಕಾಗಿದ್ದು ಗೋಪುರದ ಮೇಲ್ಭಾಗದಲ್ಲಿ ಬೀಸುವ ಪ್ರಬಲ ಗಾಳಿಯ ವೇಗದ ಬಗ್ಗೆ ಚೆನ್ನಾಗಿ ತಿಳಿದಿರಬೇಕು.

ಪೇಮೆಂಟ್ ಹೇಗಿದೆ?

ಕಾರ್ಮಿಕರು ವರ್ಷಕ್ಕೆ 100,000 ಪೌಂಡ್ ಗಳಿಸುತ್ತಾರೆ ಎಂದು ಕ್ಲಿಪ್ ಹೇಳುತ್ತದೆ. ಆದಾಗ್ಯೂ, ಸಂಬಳ ಸೈಟಿಗೆ ಅನುಗುಣವಾಗಿ ಬದಲಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಈ ಕೆಲಸ ಕೇವಲ ಆರು ತಿಂಗಳಿಗೊಮ್ಮೆ ಬರಬಹುದು.

ಫೀಲ್ಡ್ ಎಂಜಿನಿಯರ್ ಪ್ರಕಾರ, 'ಒಂದು ವರ್ಷಕ್ಕಿಂತ ಕಡಿಮೆ ಅನುಭವ ಹೊಂದಿರುವವರಿಗೆ ಸಾಮಾನ್ಯವಾಗಿ ಗಂಟೆಗೆ ಸರಾಸರಿ $ 17 (1400 ರೂ.) ನೀಡಲಾಗುತ್ತದೆ.

"ಅದಕ್ಕಿಂತ ಹೆಚ್ಚಿನ ಅನುಭವ ಹೊಂದಿರುವವರಿಗೆ, ಅವರು ಗಂಟೆಗೆ ಸುಮಾರು $ 19 (1500 ರೂ.) ಗಳಿಸುವ ನಿರೀಕ್ಷೆಯಿದೆ" ಎಂದು ಫೀಲ್ಡ್ ಎಂಜಿನಿಯರ್ ಹೇಳಿದರು. ವರದಿಗಳ ಪ್ರಕಾರ, ಟವರ್ ಲ್ಯಾಂಟರ್ನ್ ಚೇಂಜರ್ನ ಪೋಸ್ಟ್ಗಳನ್ನು ಜೂಬಲ್ ಎಂಬ ಉದ್ಯೋಗ ಹುಡುಕುವ ಸೈಟ್ಅಲ್ಲಿ ಪಟ್ಟಿ ಮಾಡಲಾಗಿದೆ.

ಅನೇಕ ನೆಟ್ಟಿಗರು ಕೆಲಸದ ಪಾತ್ರದಿಂದ ಗೊಂದಲಕ್ಕೊಳಗಾಗಿದ್ದಾರೆ. ಕೆಲವರಂತೂ, ಟಿಕ್ ಟಾಕ್ ನಲ್ಲಿ ವೈರಲ್ ಆಗಿದ್ದ ವಿಡಿಯೋ ನೋಡಿ, ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದರು. ಇನ್ನೂ ಕೆಲವರು ಅವರಿಗೆ ಈ ಉದ್ಯೋಗ ಮಾಡಲು ಅರ್ಹತೆ ಇದೆಯೇ ಎಂದು ಕೇಳಿದ್ದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net