ಕೋವಿಶೀಲ್ಡ್​-ಕೋವಾಕ್ಸಿನ್ ಡೋಸ್ ಮಿಕ್ಸ್​ ಮಾಡಬಹುದೇ? ನಡೆಯಲಿದೆ ಅಧ್ಯಯನ

Vaccine
Published on

ನವದೆಹಲಿ : ಮೊದಲನೇ ಡೋಸ್​ ಕೋವಿಶೀಲ್ಡ್​ ಕರೊನಾ ಲಸಿಕೆ ಪಡೆದವರು ಎರಡನೇ ಡೋಸೂ ಕೋವಿಶೀಲ್ಡೇ ಪಡೆಯಬೇಕು; ಕೋವಾಕ್ಸಿನ್ ಪಡೆದವರು ಕೋವಾಕ್ಸಿನ್ನೇ ಪಡೆಯಬೇಕು ಎಂಬುದು ಈವರೆಗೆ ಭಾರತದಲ್ಲಿ ಪಾಲಿಸಿಕೊಂಡು ಬರುತ್ತಿರುವ ನಿಯಮವಾಗಿದೆ. ಇನ್ನು ಮುಂದೆಯೂ ಇದೇ ರೀತಿ ನಡೆಯಬೇಕಾ ? ಅಥವಾ ಜನರು ಬೇರೆ ಬೇರೆ ಲಸಿಕೆಗಳ ಡೋಸ್​ಗಳನ್ನು ಪಡೆಯಬಹುದಾ ? ಅದರ ಉಪಯೋಗ ಅಥವಾ ಅಪಾಯ ಏನು ? ಎಂಬುದನ್ನು ಇದೀಗ ವೈಜ್ಞಾನಿಕವಾಗಿ ಅಧ್ಯಯನ ಮಾಡುವ ಸಿದ್ಧತೆ ನಡೆದಿದೆ.

ಒಬ್ಬ ವ್ಯಕ್ತಿಗೆ ಕೋವಿಶೀಲ್ಡ್​ ಮತ್ತು ಕೋವಾಕ್ಸಿನ್ ಡೋಸ್​ಗಳನ್ನು ಮಿಕ್ಸ್​ ಮಾಡಬಹುದೇ ಎಂಬ ಈ ಅಧ್ಯಯನ ಮತ್ತು ಸಂಬಂಧಿತ ಕ್ಲಿನಿಕಲ್​ ಟ್ರಯಲ್​ಗಳನ್ನು ವೆಲ್ಲೋರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜು ನಡೆಸಲಿದೆ. ಈ ಪ್ರಕ್ರಿಯೆಗೆ ಡ್ರಗ್ಸ್​ ಕಂಟ್ರೋಲರ್ ಜನರಲ್ ಆಫ್​ ಇಂಡಿಯ ಅವರ ಅನುಮತಿ ದೊರಕಿದೆ ಎಂದು ನೀತಿ ಆಯೋಗದ ಸದಸ್ಯ ಡಾ.ವಿ.ಕೆ.ಪೌಲ್​ ತಿಳಿಸಿದ್ದಾರೆ.

ಕೆಲವು ತಿಂಗಳ ಹಿಂದೆ ಉತ್ತರ ಪ್ರದೇಶದಲ್ಲಿ ಆರೋಗ್ಯ ಸಿಬ್ಬಂದಿ ಅಚಾತುರ್ಯದಿಂದಾಗಿ, ಮೊದಲನೇ ಡೋಸ್​ ಕೋವಿಶೀಲ್ಡ್​ ಕೊಟ್ಟಿದ್ದ 18 ಜನರಿಗೆ ಎರಡನೇ ಡೋಸ್​​ನಲ್ಲಿ ಕೋವಾಕ್ಸಿನ್ ಲಸಿಕೆ ನೀಡಿದ ಪ್ರಸಂಗ ನಡೆದಿತ್ತು. ಅವರ ಮೇಲೆ ಐಸಿಎಂಆರ್​ ನಡೆಸಿದ ಅಧ್ಯಯನದಲ್ಲಿ ಡೋಸ್​ಗಳನ್ನು ಮಿಕ್ಸ್​ ಮಾಡಿದ್ದರಿಂದ ಯಾವುದೇ ಸಮಸ್ಯೆಯಾಗಿಲ್ಲ. ಬದಲಿಗೆ ಸುರಕ್ಷೆ ಮತ್ತು ರೋಗನಿರೋಧಕತೆ ಹೆಚ್ಚಾಗಿದೆ ಎಂಬ ಅಭಿಪ್ರಾಯ ಮೂಡಿತ್ತು. ತದನಂತರ ಈ ವಿಚಾರದಲ್ಲಿ ಸಮಗ್ರವಾದ ಅಧ್ಯಯನ ನಡೆಸಬೇಕೆಂದು ಸೆಂಟ್ರಲ್ ಡ್ರಗ್ಸ್​ ಸ್ಟ್ಯಾಂಡರ್ಡ್​ ಕಂಟ್ರೋಲ್​ ಆರ್ಗನೈಸೇಷನ್ ಶಿಫಾರಸ್ಸು ಮಾಡಿತ್ತು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net