ಅಭ್ಯರ್ಥಿ ಘೋಷಣೆಯಿಂದ ಪ್ರಚಾರ ಅನಾಯಾಸ; ಮಾತು ಕೊಟ್ಟವರಿಗೇ ಟಿಕೆಟ್​ ; ಜಿಲ್ಲೆಯ ಆರೂ ಕ್ಷೇತ್ರ ಗೆಲ್ಲಲು ಜೆಡಿಎಸ್​ ತಯಾರಿ

1
Published on

ಕೋಲಾರ: ಜೆಡಿಎಸ್​ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗಾಗಿ "ಶುಭದಿನ'ಕ್ಕಾಗಿ ಕಾದಿದ್ದ ಪಕ್ಷದ ವರಿಷ್ಠ ಎಚ್​.ಡಿ.ದೇವೇಗೌಡರು ಮತ್ತು ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಶುಭಕಾರ್ಯಗಳು ನಿಷಿದ್ಧವಿರುವ ಧನುಮಾರ್ಸದಲ್ಲಿ ಪಟ್ಟಿ ಬಿಡುಗಡೆ ಮಾಡಿ ರಾಜಕೀಯ ವಲಯದಲ್ಲಿ ಎಲ್ಲರ ಕಣ್ಣು ಹುಬ್ಬೇರುವಂತೆ ಮಾಡಿದ್ದಾರೆ.

ಇನ್ನು ರಾಜ್ಯದ ದೇವಮೂಲೆಯಾದ ಕೂಡುಮಲೆಯ ಗಣಪತಿ ಸನ್ನಿಧಿಯಲ್ಲಿ ಪಂಚರತ್ನ ಯಾತ್ರೆಗೆ ಚಾಲನೆ ನೀಡಿದ ನ.1ರಂದು ಮತ್ತು ಪಂಚರತ್ನ ಬೃಹತ್​ ಸಮಾವೇಶ ನಡೆದ ನ.18ರಂದು ಮುಳಬಾಗಿಲಿನಲ್ಲಿ ಪಟ್ಟಿ ಬಿಡುಗಡೆಯಾಗದೆ ಬೆಂಗಳೂರಿನಲ್ಲಿ ಸೋಮವಾರ ಬಿಡುಗಡೆಯಾಗಿದೆ. ಪಟ್ಟಿಯಲ್ಲಿ ಜಿಲ್ಲೆಯ ಆರೂ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸುವ ಮೂಲಕ ಕೋಲಾರ ಜೆಡಿಎಸ್​ ಪಾಲಿಗೆ ಪ್ರತಿಷ್ಠಿತ ಜಿಲ್ಲೆ ಎಂಬುದನ್ನು ದಳಪತಿಗಳು ಮತ್ತೊಮ್ಮೆ ಸಾರಿದ್ದಾರೆ.

ಬಿಡುಗಡೆಯಾದ ಪಟ್ಟಿಯಲ್ಲಿ ನಾಲ್ಕೆ$ದು ವರ್ಷದಿಂದ ಆಯಾ ಕ್ಷೇತ್ರದಲ್ಲಿ ಸಕ್ರೀಯವಾಗಿರುವ ಅಭ್ಯರ್ಥಿಗಳು ನಿಟ್ಟುಸಿರು ಬಿಡುವಂತಾಗಿದೆ. ಮೊದಲ ಹಂತದಲ್ಲಿಯೇ ಕೋಲಾರದ ಆರೂ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿರುವುದು ರಾಜಕೀಯ ವಲಯದಲ್ಲಿ ಎಲ್ಲರು ಕಣ್ಣುಹುಬ್ಬೇರಿಸುವಂತೆ ಮಾಡಿದೆ.

ಒಂದು ಕಾಲದಲ್ಲಿ ಜನತಾಪರಿವಾರದ ಭದ್ರಕೋಟೆಯಾಗಿದ್ದ ಕೋಲಾರದಲ್ಲಿ ಪ್ರಸ್ತುತ ಜೆಡಿಎಸ್​ ಪ್ರಬಲವಾಗಿದ್ದು, ಅಳೆದೂ ತೂಗಿ ಮೊದಲಿನಿಂದಲೂ ಹೇಳುತ್ತ ಬಂದಿದ್ದವರಿಗೇ ಟಿಕೆಟ್​ ನೀಡಲಾಗಿದೆ.

ಕೋಲಾರದಲ್ಲಿ ಸಿಎಂಆರ್​ ಶ್ರೀನಾಥ್​, ಮಾಲೂರಿನಲ್ಲಿ ಜಿ.ಇ.ರಾಮೇಗೌಡ, ಬಂಗಾರಪೇಟೆಯಲ್ಲಿ ಎಂ.ಮಲ್ಲೇಶ್​ ಬಾಬು, ಮುಳಬಾಗಿಲಿನಲ್ಲಿ ಸಮೃದ್ಧಿ ಮಂಜುನಾಥ್​ ಮತ್ತು ಕೆಜಿಎಫ್​ನಲ್ಲಿ ರಮೇಶ್​ ಬಾಬು ಮತ್ತು ಶ್ರೀನಿವಾಸಪುರದಲ್ಲಿ ಜಿ.ಕೆ.ವೆಂಕಟಶಿವಾರೆಡ್ಡಿಗೆ ಟಿಕೆಟ್​ ಘೋಷಿಸಲಾಗಿದೆ. ಮುಳಬಾಗಿಲಿನಲ್ಲಿ ಪಕ್ಷದಲ್ಲಿ ಸ್ವಲ್ಪ ಮಟ್ಟಿಗೆ ಭಿನ್ನಾಭಿಪ್ರಾಯವಿದ್ದು, ಕೋಲಾರದಲ್ಲಿ ಟಿಕೆಟ್​ಗಾಗಿ ಸ್ಪರ್ಧೆ ಏರ್ಪಟ್ಟಿತ್ತಾದರೂ ಅದನ್ನೆಲ್ಲ ಸರಿಪಡಿಸಿಯೇ ಟಿಕೆಟ್​ ಘೋಷಿಸಲಾಗಿದೆ. ಪಂಚರತ್ನ ಯಾತ್ರೆಯ ಹುರುಪಿನಲ್ಲಿ ಅಭ್ಯರ್ಥಿಗಳು ಪಕ್ಷ ಸೇರ್ಪಡೆ, ಪ್ರಚಾರ ಸಭೆಗಳನ್ನು ಆಯೋಜಿಸುತ್ತಿದ್ದಾರೆ. ಕಾಂಗ್ರೆಸ್​ ಮತ್ತು ಬಿಜೆಪಿಗೆ ಹೋಲಿಸಿದರೆ ಜೆಡಿಎಸ್​ ಸದ್ಯಕ್ಕೆ ಎಲ್ಲ ಕ್ಷೇತ್ರಗಳಲ್ಲಿ ಪ್ರಚಾರ, ಸಂಘಟನೆಯಲ್ಲಿ ಮುಂದಿದೆ.

ಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧೆ ಮಾಡಿದರೂ ಅಭ್ಯರ್ಥಿ ಬದಲಿಸಲ್ಲ ಎಂದಿದ್ದ ಎಚ್ಡಿಕೆ ಟೊಮ್ಯಾಟೊ ವ್ಯಾಪಾರಿ, ರೈತ ಸಿಎಂಆರ್​ ಶ್ರೀನಾಥ್​ಗೇ ಟಿಕೆಟ್​ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಅವರಿಗೆ ಮಾಜಿ ಸಚಿವ ವರ್ತೂರು ಆರ್​.ಪ್ರಕಾಶ್​ ಪ್ರಬಲ ಪೈಪೋಟಿ ನೀಡಲು ಸಜ್ಜಾಗಿದ್ದಾರೆ. ಇಲ್ಲಿ ಸಿದ್ದರಾಮಯ್ಯ ಸ್ಪರ್ಧಿಸದಿದ್ದರೆ ಬ್ಯಾಲಹಳ್ಳಿ ಗೋವಿಂದಗೌಡ, ವಿ.ಆರ್​.ಸುದರ್ಶನ್​ ಅಥವಾ ಇತರ ಆಕಾಂಕ್ಷಿಗಳು ಕಾಂಗ್ರೆಸ್​ನಿಂದ ಸ್ಪರ್ಧಿಸಬಹುದು. "ಕೈ' ಟಿಕೆಟ್​ ಘೋಷಣೆಯಾಗದಿರುವುದು ಜೆಡಿಎಸ್​ ಪ್ರಚಾರಕ್ಕೆ ಸಹಕಾರಿಯಾಗಿದೆ ಎಂದರೆ ತಪ್ಪಾಗಲಾರದು.

ಮಾಲೂರಿನಲ್ಲಿ ಬಿಜೆಪಿಯಲ್ಲಿ ಹೂಡಿ ವಿಜಯಕುಮಾರ್​ ಮತ್ತು ಇತ್ತೀಚೆಗೆ ಪಕ್ಷ ಸೇರ್ಪಡೆಯಾಗಿರುವ ಮಾಜಿ ಶಾಸಕ ಮಂಜುನಾಥಗೌಡರ ನಡುವೆ ಟಿಕೆಟ್​ ಫೈಟ್​ ಇದ್ದು, ಜೆಡಿಎಸ್​ನ ಜಿ.ಇ.ರಾಮೇಗೌಡರಿಗೆ ವರದಾನವಾದರೂ ಆಶ್ಚರ್ಯವಿಲ್ಲ. ಕಾಂಗ್ರೆಸ್​ನಿಂದ ಶಾಸಕ ಕೆ.ವೈ.ನಂಜೇಗೌಡರಿಗೆ ಟಿಕೆಟ್​ ಸಿಗುವ ಸಾಧ್ಯತೆಯಿದ್ದು ತ್ರಿಕೋನ ಸ್ಪರ್ಧೆ ಏರ್ಪಡುವುದು ಖಚಿತವಾಗಿದೆ. ಬಂಗಾರಪೇಟೆಯಲ್ಲಿ ಬಿಜೆಪಿ ಇನ್ನೂ ಪ್ರಚಾರಕ್ಕೆ ಇಳಿದಿಲ್ಲ, ಇಲ್ಲಿ ಕಾಂಗ್ರೆಸ್​ನ ಶಾಸಕ ಎಸ್​.ಎನ್​.ನಾರಾಯಣಸ್ವಾಮಿ ಅವರಿಗೆ ಜೆಡಿಎಸ್​ ಅಭ್ಯರ್ಥಿ ಮಲ್ಲೇಶ್​ ಬಾಬು ಎದುರಾಳಿ. ಮುಳಬಾಗಿಲಿನಲ್ಲಿ ಬಿಜೆಪಿ, ಕಾಂಗ್ರೆಸ್​ ನಿದ್ರಾವಸ್ಥೆಯಲ್ಲಿದ್ದು ಸಮೃದ್ಧಿ ಮಂಜುನಾಥ್​ ರಣಕಹಳೆ ಮೊಳಗಿಸಿದ್ದಾಗಿದೆ. ಶ್ರೀನಿವಾಸಪುರದಲ್ಲಿ ಜೆಡಿಎಸ್​ ಜಿಲ್ಲಾಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ ಮಾಜಿ ಸ್ಪೀಕರ್​ ರಮೇಶ್​ ಕುಮಾರ್​ ವಿರುದ್ಧ ಸ್ಪರ್ಧೆಗಿಳಿಯಲಿದ್ದಾರೆ. ಇನ್ನು ಅಭ್ಯರ್ಥಿ ಕೊರತೆಯಿದ್ದ ಕೆಜಿಎಫ್​ನಲ್ಲೂ ರಮೇಶ್​ಬಾಬು ಎಂಬ ಹೊಸ ಮುಖವನ್ನು ಎಚ್​ಡಿಕೆ ಪರಿಚಯಿಸಿದ್ದಾರೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ರ್ಖಗೆ, ಸ್ಟೀರಿಂಗ್​ ಸಮಿತಿ ಸದಸ್ಯ ಕೆ.ಎಚ್​.ಮುನಿಯಪ್ಪ, ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್​ ಸೋಲಿಗೆ ಸಿದ್ದರಾಮಯ್ಯ ಮತ್ತು ರಮೇಶ್​ ಕುಮಾರ್​ ಕಾರಣ ಎಂಬುದನ್ನು ಪ್ರಬಲವಾಗಿ ಪ್ರತಿಪಾದಿಸಿದರೆ ದಲಿತರ ಮತಗಳು ಕೈತಪ್ಪುತ್ತವೆ. ಅದೇ ರೀತಿ ಕೆ.ಎಚ್​.ಮುನಿಯಪ್ಪ ಮತ್ತವರ ಬೆಂಬಲಿಗರ "ಒಳೇಟು' ಕೈಗೆ ಹೊಡೆತ ಬೀಳುವುದರಲ್ಲಿ ಅನುಮಾನವೇ ಇಲ್ಲ. ಇದೆಲ್ಲದರ ನಡುವೆ ಬಿಜೆಪಿ ನಾಯಕರಾದ ಡಾ.ಕೆ.ಸುಧಾಕರ್​, ಮುನಿರತ್ನ, ಎಸ್​.ಮುನಿಸ್ವಾಮಿ ಎಲ್ಲ ಪಟ್ಟುಗಳನ್ನು ಹಾಕುವುದರಿಂದ ಆರೂ ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟು ಅನಾಯಾಸವಾಗಿ ಜೆಡಿಎಸ್​ ಅಭ್ಯರ್ಥಿಗಳು ಜಯಭೇರಿ ಬಾರಿಸಲಿದ್ದಾರೆ ಎಂಬುದು ದಳಪತಿಗಳ ಪ್ರಬಲ ನಂಬಿಕೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net